ಪೊನ್ನಂಪೇಟೆ, ಮಾ. 27: ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದೊಂದೇ ಕೊರೊನಾ ಸೋಂಕು ತಡೆಗಟ್ಟಲು ಇರುವ ಏಕೈಕ ಮಾರ್ಗ, ಸಾರ್ವಜನಿಕರು ಪರಸ್ಪರ ಅಂತರ ಕಾಯ್ದು ಕೊಳ್ಳಿ ಎಂದು ಸರ್ಕಾರ ಹಾಗೂ ಮಾಧ್ಯಮಗಳು ಪದೇ ಪದೇ ಜನರನ್ನು ಎಚ್ಚರಿಸುತಿದ್ದರೂ, ಜನ ಮಾತ್ರ ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ಪೊನ್ನಂಪೇಟೆಯ ದಿನಸಿ ಅಂಗಡಿಗಳ ಮುಂದೆ ಅಂತರ ಕಾಯ್ದುಕೊಳ್ಳುವ ಸಲುವಾಗಿ ವೃತ್ತಗಳನ್ನು ರಚಿಸಿದ್ದರೂ ಅದರೊಳಗೆ ನಿಂತು ಒಬೊಬ್ಬರಾಗಿ ಖರೀದಿಸುವ ಬದಲು ಅಂಗಡಿಗಳ ಮುಂದೆ ಗುಂಪುಗುಂಪಾಗಿ ನಿಂತು ಖರೀದಿಸುತ್ತಿದ್ದರು. ತರಕಾರಿ ಅಂಗಡಿ, ಮೆಡಿಕಲ್ ಶಾಪ್ ಮುಂದೆಯೂ ಕೂಡ ನಿಯಮ ಪಾಲನೆ ಕಂಡು ಬರಲಿಲ್ಲ. ಇನ್ನು ಕೆಲವು ಮದ್ಯ ಪ್ರಿಯರಂತೂ ನಿಷೇಧಾಜ್ಞೆ ಸಡಿಲಿಕೆ ಸಂದರ್ಭ ಮನೆಯಿಂದ ಹೊರಗೆ ಬಂದು ಎಲ್ಲಿಯಾದರೂ ಮದ್ಯ ಸಿಗಬಹುದುದೇನೋ ಅಂತ ತಮ್ಮ ಪರಿಚಿತರ ಮನೆಗೆ ತೆರಳಿ ‘ಏನಾದರೂ ಸ್ಟಾಕ್ ಇಟ್ಟಿದ್ದೀರಾ’ ಎಂದು ಕೇಳಿ, ಇಲ್ಲಾ ಎಂದಾಗ ನಿರಾಸೆಯಿಂದ ಮನೆಕಡೆ ತೆರಳುತ್ತಿದ್ದರು. ಮನೆಗೆ ಯಾವುದೇ ದಿನಸಿ ಪದಾರ್ಥಗಳ ಅವಶ್ಯಕತೆ ಇಲ್ಲದಿದ್ದರೂ ಅನಾವಶ್ಯಕವಾಗಿ ಬೀದಿಗಿಳಿಯುವ ಮೂಲಕ ಬಹಳಷ್ಟು ಜನ ನಿಷೇಧಾಜ್ಞೆ ಸಡಿಲಿಕೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಮೆಡಿಕಲ್ ಶಾಪ್‍ನಲ್ಲಿ ಮಾಸ್ಕ್ ಖರೀದಿಸುವರ ಸಂಖ್ಯೆ ಹೆಚ್ಚಾಗಿತ್ತು. 30 ರಿಂದ 35 ರೂ. ಕೊಟ್ಟು ಮಾಸ್ಕ್ ಖರೀದಿಸಿ, ಮಾಸ್ಕ್ ಧರಿಸಿ ರಸ್ತೆಗಿಳಿಯುವ ಮುನ್ನವೇ ಮಾಸ್ಕ್‍ನ ದಾರ ತುಂಡಾಗುವಷ್ಟು ಕಳಪೆ ಗುಣಮಟ್ಟದ ಮಾಸ್ಕ್ ಆಗಿದ್ದರಿಂದ ಗ್ರಾಹಕರು ಮಾರಾಟಗಾರರಿಗೆ ಹಿಡಿಶಾಪ ಹಾಕುತ್ತಿದ್ದರು. ಆಟೋವೊಂದು ಬಾಡಿಗೆಗೆ ಬಂದಿದ್ದನ್ನು ಕಂಡ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು.
ಅಪರಾಹ್ನ 12 ಗಂಟೆಯ ನಂತರ ವಾಹನ ಸಂಚಾರ ಅತ್ಯಂತ ವಿರಳವಾಗಿತ್ತು. ಮೆಡಿಕಲ್ ಶಾಪಿಗೆ ಕೆಲವರು ತೆರಳುತಿದ್ದದ್ದು ಬಿಟ್ಟರೆ ಪೊನ್ನಂಪೇಟೆ ಸ್ತಬ್ಧವಾಗಿತ್ತು.
-ಚನ್ನನಾಯಕ