ಮಡಿಕೇರಿ, ಮಾ. 27: ಇದೇ ತಾ. 22ರಂದು ಜನತಾ ಕಫ್ರ್ಯೂ ಬಳಿಕ ಜಾರಿಗೊಂಡಿರುವ ನಿಷೇಧಾಜ್ಞೆ ಹಾಗೂ ಕಾಲಮಿತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನತೆ ಹೊಂದಿಕೊಳ್ಳತೊಡಗಿದ್ದು, ಕೊಡಗಿನಲ್ಲಿ ಕೊರೊನಾ ಸೋಂಕು ಹಬ್ಬದಂತೆ ಜಾಗೃತರಾಗ ತೊಡಗಿದ್ದಾರೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಳೆದ ಐದು ದಿನಗಳಿಂದ ಜಿಲ್ಲಾಡಳಿತ ಜಾರಿ ಗೊಳಿಸಿರುವ ಸಮಯದಲ್ಲಿ ಜನತೆ ತಮ್ಮ ಬೇಕು - ಬೇಡಿಕೆಗಳನ್ನು ಸರಿದೂಗಿಸಿಕೊಳ್ಳುವಲ್ಲಿ ಪ್ರಯತ್ನಿಸು ತ್ತಿದ್ದಾರೆ.

ಜಿಲ್ಲೆಗೆ ವಿದೇಶಗಳಿಂದ ವಾಪಸಾಗಿರುವ ಕೆಲವರು ನಿಯಮ ಪಾಲಿಸದೆ ಪ್ರಮಾದ ಎಸಗಿರುವ ಆರೋಪ ಕೇಳಿ ಬಂದಿದ್ದರೂ, ನಾಗರಿಕ ಸಮಾಜ ಮಾತ್ರ ಜಾಗೃತಿಗೊಂಡು ಮತಭೇದವಿಲ್ಲದೆ ಕೊಡಗಿನಲ್ಲಿ ಕೊರೊನಾ ಹಬ್ಬದಂತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ಇಂದು ಬೆಳಿಗ್ಗೆ 6ರಿಂದ 12 ಗಂಟೆಯ ಕಾಲಮಿತಿಯಲ್ಲಿ ದೈನಿಕ ಪತ್ರಿಕೆಗಳು; ಹಾಲು, ಹಣ್ಣು, ತರಕಾರಿಯೊಂದಿಗೆ, ದಿನನಿತ್ಯದ ಅಗತ್ಯ ವಸ್ತುಗಳೊಂದಿಗೆ ಮಾಂಸಾಹಾರಿಗಳು ಹಂದಿಮಾಂಸ, ಮೀನು ಇತ್ಯಾದಿ ಖರೀದಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಈ ನಡುವೆ ಸರಕಾರಿ ನ್ಯಾಯಬೆಲೆ ಅಂಗಡಿಗಳ ಬಳಿಯೂ ಸರದಿಯಲ್ಲಿ ನಿಂತು ಪಡಿತರ ಕೊಂಡುಕೊಳ್ಳುತ್ತಿದ್ದ ಚಿತ್ರಣ ಎದುರಾಯಿತು. ಅಲ್ಲದೆ, ಮಧ್ಯಾಹ್ನದ ತನಕ ಒಂದಿಷ್ಟು ವಾಹನ ಸಂಚಾರ ಕಂಡುಬಂತಾದರೂ; ಶುಕ್ರವಾರದ ಸಂತೆ ದಿನವಾದರೂ ಕೊಡಗು ಜಿಲ್ಲಾ ಕೇಂದ್ರ ಅಪರಾಹ್ನ ಹೊತ್ತಿಗೆ ಸಂಪೂರ್ಣ ಸ್ತಬ್ಧಗೊಂಡ ಅನುಭವ ಎದುರಾಯಿತು.

ಪೊಲೀಸರು ನಗರದುದ್ದಕ್ಕೂ ಸಂಚರಿಸುತ್ತಾ ಜನರನ್ನು ಗುರುತು ಮಾಡಿದ ಜಾಗದಲ್ಲಿ ನಿಲ್ಲುವಂತೆ ಸೂಚಿಸುತ್ತಿದ್ದುದು ಗೋಚರಿಸಿತು.