ಮಡಿಕೇರಿ, ಮಾ. 26: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರೋಗ್ಯ ಇಲಾಖಾ ಸಿಬ್ಬಂದಿಗೂ ಸಮಸ್ಯೆ ಇರುವ ಕಾರಣದಿಂದಾಗಿ ತುರ್ತು ಸಂದರ್ಭಕ್ಕೆ ಅಗತ್ಯವಾದರೆ ಮುಸ್ಲಿಂ ಜಮಾಅತ್‍ನಿಂದ ನಾಲ್ಕೈದು ಆ್ಯಂಬುಲೆನ್ಸ್ ಅನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಲು ಸಿದ್ಧವಿರುವುದಾಗಿ ಜಿ.ಪಂ. ಸದಸ್ಯ ಅಬ್ದುಲ್ ಲತೀಫ್ ತಿಳಿಸಿದ್ದಾರೆ. ಕೊಡಗರಹಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, 108 ಆ್ಯಂಬುಲೆನ್ಸ್ ಸಿಗಲಿಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಯ ಗಮನಕ್ಕೆ ತರಲಾಗಿದ್ದು, ಸಿಬ್ಬಂದಿಗಳಿಗೆ ಮಾಸ್ಕ್ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ರಾಜ್ಯಾದ್ಯಂತ ಇದೆ. ಇದರಿಂದ ಒಮ್ಮೊಮ್ಮೆ ಸಿಬ್ಬಂದಿಗಳು ಬರಲು ಹಿಂದೇಟು ಹಾಕುತ್ತಿರುವುದಾಗಿ ತಿಳಿಸಿದರು. ಈ ಕಾರಣದಿಂದ ಅಂತಹ ಸಮಸ್ಯೆ ಎದುರಾದಲ್ಲಿ ಮುಸ್ಲಿಂ ಜಮಾಅತ್‍ನಿಂದ ಆ್ಯಂಬುಲೆನ್ಸ್ ವಾಹನ ಕಲ್ಪಿಸಲು ಸಿದ್ಧವಿರುವುದಾಗಿ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಲತೀಫ್ ‘ಶಕ್ತಿ’ಗೆ ಮಾಹಿತಿ ನೀಡಿದರು.