ಮಡಿಕೇರಿ, ಮಾ. 26 : ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಾಣು ಸಮಸ್ಯೆ ಇರುವ ಈ ಸಂದರ್ಭದಲ್ಲಿ ಕೆಲವು ಬ್ಯಾಂಕುಗಳು, ಸಂಘ ಸಂಸ್ಥೆಗಳು, ಲೇವಾ ದೇವಿದಾರರು ಮನೆ ಮನೆಗೆ ತೆರಳಿ ಬಲವಂತದಿಂದ ಸಾಲ ವಸೂಲಿಗೆ ಮುಂದಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಗುರುವಾರ ಬ್ಯಾಂಕ್ ಅಧಿಕಾರಿಗಳು, ಸಹಕಾರ ಸಂಘಗಳ ಉಪ ನಿಬಂಧಕರು, ತಹಶೀಲ್ದಾರರು, ತಾಲೂಕು ಪಂಚಾಯತಿ ಇಒಗಳು ಹಾಗೂ ಮುಖ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ಮೂಲಕ ಸಭೆ ನಡೆಯಿತು. ಕೊರೊನಾ ವೈರಸ್ ಭೀತಿ ಇರುವ ಈ ಸಂದರ್ಭದಲ್ಲಿ ಜಿಲ್ಲೆಯು ಲಾಕ್ಡೌನ್ ಆಗಿದ್ದು, ಮೈಕ್ರೋ ಫೈನಾನ್ಸ್ ಸೇರಿದಂತೆ ಯಾರೊಬ್ಬರೂ ಸಹ ಮನೆ ಮನೆಗೆ ತೆರಳಿ ಸಾಲ ವಸೂಲಾತಿಗೆ ಒತ್ತಾಯಿಸಿದಲ್ಲಿ ಅಥವಾ ದೂರವಾಣಿ ಮೂಲಕ ಸಾಲ ಮರುಪಾವತಿಗೆ ಒತ್ತಾಯಿಸಿದಲ್ಲಿ ಸಂಬಂಧಪಟ್ಟ ತಹಶೀಲ್ದಾರರುಸೂಕ್ತ ಕ್ರಮ ಜರುಗಿಸಲು ಸೂಚಿಸಲಾಯಿತು. (ಮೊದಲ ಪುಟದಿಂದ) ಸಾಲ ಮರುಪಾವತಿ ಪ್ರಕರಣಗಳಲ್ಲಿ ಕಾಲಾವಕಾಶ ನೀಡಿ ಆದೇಶ ಹೊರಡಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಎಲ್ಲಾ ಬ್ಯಾಂಕುಗಳ ಎಟಿಎಂ ಗಳಲ್ಲಿ ಸ್ಯಾನಿಟೈಸರ್ಗಳನ್ನು ಇಡುವುದು ಹಾಗೂ ಎಟಿಎಂಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಎಲ್ಲಾ ಸೂಕ್ತ ಕ್ರಮ ವಹಿಸುವಂತೆ ಸೂಚಿಸಲಾಯಿತು. ಯಾವುದೇ ಸಹಕಾರ ಸಂಘಗಳು ಯಾವುದೇ ಪತ್ರಿಕಾ ಹೇಳಿಕೆಗಳನ್ನು ಸಹಕಾರ ಸಂಘಗಳ ಉಪ ನಿಬಂಧಕರ ಮೂಲಕ ಮಾತ್ರ ನೀಡುವಂತೆ ಸೂಚನೆ ನೀಡಲಾಯಿತು.
ಹಾಗೆಯೇ ಯಾವುದೇ ಬ್ಯಾಂಕುಗಳು ಲಾಕ್ಡೌನ್ ಸಂಬಂಧ ಯಾವುದೇ ಪತ್ರಿಕಾ ಹೇಳಿಕೆಗಳನ್ನು ಲೀಡ್ ಬ್ಯಾಂಕ್ ಮೂಲಕ ಮಾತ್ರ ನೀಡುವಂತೆ ಸೂಚನೆ ನೀಡಲಾಯಿತು.
ಲೀಡ್ ಬ್ಯಾಂಕ್ನ ಜಿಲ್ಲಾ ಮುಖ್ಯಸ್ಥ ಆರ್.ಕೆ ಬಾಲಚಂದ್ರ, ಪೌರಾಯುಕ್ತ ಎಂ.ಎಲ್.ರಮೇಶ್, ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ, ತಹಶೀಲ್ದಾರ್ ಗೋವಿಂದರಾಜು, ನಂದೀಶ್ ಅವರು ಹಲವು ಮಾಹಿತಿ ನೀಡಿದರು. ಎಸ್ಬಿಐ ಮುಖ್ಯ ಶಾಖೆಯ ವ್ಯವಸ್ಥಾಪಕ ದಿನೇಶ್ ಪೈ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರವಿಕುಮಾರ್, ಮೋಹನ್, ವಿವಿಧ ಬ್ಯಾಂಕುಗಳ ಮುಖ್ಯಸ್ಥರು ಇದ್ದರು.
ಸಹಕಾರ ಬ್ಯಾಂಕ್ಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಪತ್ತಿನ ವ್ಯವಹಾರ ನಡೆಸುತ್ತಿರುವ ವಿವಿಧ ತರಹದ ಸಹಕಾರ ಸಂಘಗಳಿಗೆ ಸಾಲ ವಸೂಲಾತಿ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದ್ದು, ಅದನ್ನು ಪಾಲಿಸುವಂತೆ ಸಹಕಾಗ ಸಂಘಗಳ ಉಪನಿಬಂಧಕ ಸಲೀಂ ತಿಳಿಸಿದ್ದಾರೆ.