ಕಲಬುರಗಿ, ಮಾ. 26: ಭೀತಿಯಿಂದಾಗಿ ವೈದ್ಯರು, ಶುಶ್ರೂಷಕಿಯರು ವಾಸವಾಗಿರುವ ಬಾಡಿಗೆ ಮನೆಗಳ ಮಾಲೀಕರು ಕಿರುಕುಳ ನೀಡಿ, ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿರುವ ದೂರುಗಳ ಹಿನ್ನೆಲೆ ಮನೆ ಮಾಲೀಕರು ಹಾಗೂ ಭೂಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿರುವ ಮನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ನಗರ ಸಭೆಗಳ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವಿದ್ ಅಖ್ತರ್ ಆದೇಶ ಹೊರಡಿಸಿದ್ದಾರೆ. ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ವಾಸವಾಗಿರುವ ಬಾಡಿಗೆ ಮನೆಗಳನ್ನು ಖಾಲಿ ಮಾಡುವಂತೆ ಮಾಲೀಕರು ತಾಕೀತು ಮಾಡುತ್ತಿದ್ದಾರೆ ಎಂದು ಹಲವು ಆರೋಗ್ಯ ಅಧಿಕಾರಿಗಳಿಂದ ಸಾಕಷ್ಟು ದೂರು ಬಂದಿರುವ ಹಿನ್ನೆಲೆ ಸರ್ಕಾರ ಈ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ಕೈಗೊಳ್ಳಲಾಗಿರುವ ಕ್ರಮದ ವರದಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕಣ್ಣೀರಿಟ್ಟ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರು, ಮಾ. 26: ಮಹಾಮಾರಿ ಕೊರೊನಾ ವೈರಸ್ ಸಂಬಂಧ ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಸುತ್ತಿದ್ದ ಸಭೆಯಿಂದ ಅರ್ಧದಲ್ಲೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಣ್ಣೀರಿಡುತ್ತಾ ಹೊರ ಬಂದಿದ್ದಾರೆ. ಸಿಎಂ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಭಾಸ್ಕರ್ ರಾವ್ ನಡುವೆ ಮಾತಿನ ಜಟಾಪಟಿ ನಡೆಯಿತು. ಪಾಸ್ ವಿತರಣೆ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆನ್‍ಲೈನ್ ಫುಡ್ ಡೆಲಿವಿರಿ ಕಂಪೆನಿಯ ಸಿಬ್ಬಂದಿಗೆ ಹೆಚ್ಚು ಪಾಸ್ ನೀಡುವಂತೆ ಅಶ್ವಥ್ ನಾರಾಯಣ ಕೇಳಿದರೂ ಇದಕ್ಕೆ ಭಾಸ್ಕರ್ ರಾವ್ ಅವರು ಒಪ್ಪದ ಕಾರಣ ನಂತರ ಅಶ್ವಥ್ ನಾರಾಯಣ ಅವರು ಏಕವಚನದಲ್ಲಿ ಮಾತನಾಡಿದರು. ಇದರಿಂದ ಭಾವುಕರಾದ ಭಾಸ್ಕರ್ ರಾವ್ ಅವರು ಕಣ್ಣೀರಿಡುತ್ತಾ ಹೊರಬಂದರು. ಸಿಎಂ ಅವರೇ ಸಮಾಧಾನ ಪಡಿಸಲು ಯತ್ನಿಸಿದರು ಪೊಲೀಸ್ ಆಯುಕ್ತರು ಅಲ್ಲಿ ನಿಲ್ಲದೆ ಹೊರಬಂದಿದ್ದಾರೆ.
ಲಾಠಿ ಏಟಿಗೆ ಓರ್ವ ಬಲಿ
ಕೋಲ್ಕತಾ, ಮಾ. 26: ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಹಾಲು ಹಾಗೂ ಇತರೆ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವರು ಅನಗತ್ಯವಾಗಿ ಹೊರಗೆ ಬರುತ್ತಿದ್ದಾರೆ ಎಂದು ಪೊಲೀಸರು ಸಿಕ್ಕಸಿಕ್ಕವರ ಮೇಲೆ ಲಾಠಿ ಬೀಸುತ್ತಿದ್ದು, ಇದರ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಓರ್ವ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೌರಾ ಜಿಲ್ಲೆಯಲ್ಲಿ ಹಾಲು ತರಲು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಲಾಠಿಯಿಂದ ಥಳಿಸಿದ ಪರಿಣಾಮ ಲಾಲ್ ಸ್ವಾಮಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ನನ್ನ ಪತಿ ಹಾಲು ತರಲು ಹೋಗಿದ್ದಾಗ ಜನಸಂದಣಿ ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ನನ್ನ ಪತಿ ಮೃತಪಟ್ಟಿದ್ದಾರೆ ಎಂದು ಲಾಲ್ ಸ್ವಾಮಿ ಪತ್ನಿ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪೊಲೀಸರು, ಲಾಲ್ ಸ್ವಾಮಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ನಯಬಾದ್‍ನಲ್ಲಿ ಇಂದು ಮತ್ತೊಂದು ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿರಬೇಕು
ಬೆಂಗಳೂರು, ಮಾ. 26: ಕೋವಿಡ್ -19 ಸೋಂಕು ಹರಡುವಿಕೆ ನಿಯಂತ್ರಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಎಲ್ಲಾ ಸಚಿವ ಸಂಪು ಸಹೋದ್ಯೋಗಿಗಳಿಗೆ ಆಯಾ ಜಿಲ್ಲೆಗಳಲ್ಲೇ ಉಳಿಯುವಂತೆ ಸೂಚಿಸಿದ್ದರೆ. ಇಡೀ ದೇಶ ಲಾಕ್‍ಡೌನ್(ಸಂಪೂರ್ಣ ಸ್ತಬ್ಧ)ನಲ್ಲಿರುವಾಗ ತಮ್ಮನ್ನು ಭೇಟಿ ಮಾಡುವುದಕ್ಕಾಗಲಿ ಇಲ್ಲವೇ ಬೇರೆ ಇನ್ಯಾವುದೇ ಉದ್ದೇಶಕ್ಕೂ ಬೆಂಗಳೂರಿಗೆ ಬರಬಾರದು ಎಂದು ಯಡಿಯೂರಪ್ಪ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಮುಖ್ಯಮಂತ್ರಿವರನ್ನು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಲು ಯಾವುದೇ ಸಾರ್ವಜನಿಕರಿಗೂ ಅವಕಾಶ ನೀಡಲಾಗಿಲ್ಲ. ಮುಖ್ಯಮಂತ್ರಿಯವರ ಕಚೇರಿಯ ಸೂಚನೆಗಳಂತೆ ಪಕ್ಷದ ಯಾವುದೇ ಮುಖಂಡರನ್ನೂ ಸಹ ಅವರ ನಿವಾಸದಲ್ಲಿ ಭೇಟಿಯಾಗಲು ಅವಕಾಶ ನೀಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಕೊರೊನಾ ಸಮುದಾಯದಲ್ಲಿ ಹರಡುತ್ತಿಲ್ಲ
ನವದೆಹಲಿ, ಮಾ. 26: ಭಾರತದಲ್ಲಿ ಕೊರೊನಾ ವೈರಸ್ ಸಂಖ್ಯೆ ಏರಿಕೆಯಾಗುತ್ತಿರುವುದು ಸೋಂಕು ಸಮುದಾಯದಲ್ಲಿ ಹರಡಿದೆಯೇ ಎಂಬ ಆತಂಕ ಮೂಡಿತ್ತು. ಆದರೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಆತಂಕ ದೂರ ಮಾಡಿದೆ. ಕೊರೊನಾ ವೈರಸ್ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಕೊರೊನಾ ವೈರಸ್ ಸೋಂಕು ಸಮುದಾಯದಲ್ಲಿ ಹರಡಿರುವುದನ್ನು ತಳ್ಳಿ ಹಾಕಿದ್ದಾರೆ. ಸಮುದಾಯದಲ್ಲಿ ಕೊರೊನಾ ಸೋಂಕು ಹರಡಿದೆ ಎನ್ನುವುದಕ್ಕೆ ಈಗಲೂ ದೃಢ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ. ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ. ಆದರೆ ಹರಡುವಿಕೆ ಪ್ರಮಾಣ ಸ್ಥಿರವಾಗಿದೆ. ಇದು ಆರಂಭಿಕ ಟ್ರೆಂಡ್ ಆಗಿದ್ದು ಕೋವಿಡ್-19 ಸವಾಲನ್ನು ಎದುರಿಸಲು ಭಾರತ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ. ಅಗತ್ಯ ಸಾಮಗ್ರಿಗಳ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜನತೆ ಭಯ ಪಡುವ ಅಗತ್ಯವಿಲ್ಲ, ವಲಸಿಗ ಕಾರ್ಮಿಕರಿಗೆ ಆಹಾರ ವಸತಿ ನೀಡಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿವೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ತಿಳಿಸಿದ್ದಾರೆ. 24 ಗಂಟೆಗಳಲ್ಲಿ 42 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 2 ಸಾವು ಸಂಭವಿಸಿದೆ. ಕೊರೊನಾ ಸೋಂಕು ಪೀಡಿತರ ಸಂಖ್ಯೆ 649 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.