ಮಡಿಕೇರಿ ಮಾ. 26 : ‘ಯುಗ ಯುಗಾದಿ ಕಳೆದರೂ...ಯುಗಾದಿ ಮರಳಿ ಬರುತ್ತಿದೆ...’ ಎಂಬ ಈ ಹಿಂದಿನ ರೀತಿಯ ಸಂಭ್ರಮ ಹಬ್ಬದಂದು ಕಂಡು ಬರಲಿಲ್ಲ. ಕೊರೊನಾ ಮಹಾಮಾರಿಯ ಭೀತಿಯಲ್ಲಿರುವದರಿಂದ ಇಡೀ ದೇಶವೇ ‘‘ಲಾಕ್‍ಡೌನ್’ ಆಗಿರುವದರಿಂದ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಯುಗಾದಿ ಹಬ್ಬದ ವೈಭವದ ಸಂಭ್ರಮವಿರಲಿಲ್ಲ. ಮಡುಗಟ್ಟಿರುವ ಆತಂಕ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಅಗತ್ಯ ಸಾಮಾನು-ಸರಂಜಾಮುಗಳಿಗಾಗಿ ಒದ್ದಾಟದಂತಹ ಕಾರಣ ರಸ್ತೆಗಿಳಿದಲ್ಲಿ ಪೊಲೀಸರ ‘ಲಾಠಿಯೇಟಿನ’ ರುಚಿಯಿಂದಾಗಿ ಎಲ್ಲವೂ ಕಳೆಗುಂದಿತ್ತು. ಈ ಸನ್ನಿವೇಶದ ನಡುವೆ ಸಾಮಾಜಿಕ ಜಾಲತಾಣವಾದ ‘ವಾಟ್ಸಾಪ್’ ನಂತಹ ಸೌಲಭ್ಯವನ್ನು ವಾಟ್ಸಾಪ್‍ನ ಮೂಲಕವೇ ರಚನೆಗೊಂಡಿರುವ ಕೊಡವಾಮೆರ ಕೊಂಡಾಟ ಸಂಘಟನೆ ಅನಾವಶ್ಯಕ ಸಂದೇಶ, ಸುಳ್ಳು ಸುದ್ದಿಗಳ ಹರಡುವಿಕೆ ಗಮನಿಸಿದ್ದನ್ನೇ ಗಮನಿಸುವ ಜಂಝಾಟವನ್ನು ಬದಿಗೊತ್ತಿ ಇದನ್ನೇ ಒಂದು ವೇದಿಕೆಯನ್ನಾಗಿ ಮಾಡಿಕೊಂಡು ಯುಗಾದಿ ಹಬ್ಬದ ಕುರಿತಾಗಿ ಕೊಡವಭಾಷೆಯಲ್ಲಿ ಕವನ ರಚನೆ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಸಾಹಿತ್ಯ ಕೃಷಿಯೊಂದಿಗೆ ಒಂದಷ್ಟು ತಲೆಗೆ ಕಸರತ್ತು ನೀಡಿ ಆಚರಿಸಿದರು.
ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಪರಿಕಲ್ಪನೆಯಂತೆ ಈ ಸ್ಪರ್ಧೆಯನ್ನು ನಡೆಸಲಾಯಿತು.
ಗುಂಪಿನಲ್ಲಿ ಸದಸ್ಯರಾಗಿರುವ ಹಲವರು ತಾವು ಬರೆದ ಕವನಗಳನ್ನು ಅಧ್ಯಕ್ಷರ ‘ಇನ್‍ಬಾಕ್ಸ್‍ಗೆ’ ಕಳುಹಿಸಿದರು. ಇದನ್ನು ಅಧ್ಯಕ್ಷರು ತೀರ್ಪುಗಾರಿಕೆಗೆ ನಿಯೋಜನೆ ಮಾಡಿದ್ದವರಿಗೆ ಗುಪ್ತವಾಗಿ ಕಳುಹಿಸಿ ತೀರ್ಪುಗಾರಿಕೆ ನಡೆಸಿದರು. ಸ್ಪರ್ಧಾಳುಗಳನ್ನು ಉತ್ತೇಜಿಸಲು ಹಲವು ಇತರ ಸದಸ್ಯರು ಬಹುಮಾನ ನೀಡುವದಾಗಿ ಪ್ರಕಟಿಸಿದರು. ದಿನವಿಡೀ ಈ ಕಸರತ್ತಿನ ಬಳಿಕ ಅಂತಿಮವಾಗಿ ಮೂವರು ವಿಜೇತರನ್ನು ಆಯ್ಕೆ ಮಾಡಿ ಪ್ರಕಟಿಸಲಾಯಿತು. ಹಲವಾರು ಸದಸ್ಯರು ಯುಗಾದಿ ಕುರಿತಾಗಿ ತಮ್ಮ ತಮ್ಮ ಕವನಗಳನ್ನು ಮೊಬೈಲ್‍ಗಳಲ್ಲೇ ಟೈಪ್ ಮಾಡಿ ಕಳುಹಿಸಿದ್ದರು. ಸುಮಾರು 30 ಕವಿಗಳು ಈ ಸ್ಪರ್ಧೆಯಲ್ಲಿ ಭಾಗಿಗಳಾಗಿದ್ದು ಇವರ ಪೈಕಿ ಉಳುವಂಗಡ ಕಾವೇರಿಉದಯ ಪ್ರಥಮ, ಬೊಳ್ಳೆರ ಸುಮನ್‍ತಮ್ಮಯ್ಯ ದ್ವಿತೀಯ ಹಾಗೂ ಜಮ್ಮಡ ಮೋನಾ ಭೀಮಯ್ಯ ತೃತೀಯ ಸ್ಥಾನ ಗಳಿಸಿದರು. ಖ್ಯಾತ ಹಾಡುಗಾರ ಆಪಾಡಂಡ ಜಗಮೊಣ್ಣಪ್ಪ, ಹಿರಿಯರಾದ ಬೆಂಗಳೂರಿನ ಬಟ್ಟಕಾಳಂಡ ಮುತ್ತಣ್ಣ, ಶಿಕ್ಷಕಿ ಚೋಕೀರ ಅನಿತ ದೇವಯ್ಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಪ್ರಿಯಾದಿನೇಶ್ ಸ್ಪರ್ಧೆಯನ್ನು ಸಂಘಟಿಸಿದ್ದರು. ವಾಟ್ಸಾಪ್ ಗುಂಪಿನ ಮೂಲಕ ಅನಗತ್ಯ ಕಾಲಹರಣ ಕೊರೊನಾ ತಡೆಗಟ್ಟುವ ಕರೆಯಂತೆ ರಸ್ತೆಗೆ ಬಾರದಿರುವದರೊಂದಿಗೆ ಸಾಹಿತ್ಯ ರಚನೆ ಮೂಲಕ ಕೊಡವ ಭಾಷೆಯ ಬೆಳವಣಿಗೆಯ ಈ ಪ್ರಯತ್ನ ವಿಶೇಷವಾಗಿತ್ತು.
ಐತಿಚಂಡ ರಮೇಶ್ ಉತ್ತಪ್ಪ ಪುಸ್ತಕ ಬಹುಮಾನ ನೀಡಿದರೆ, ಚಿರಿಯಪಂಡ ವಿಶುಕಾಳಪ್ಪ ಅವರ ವಿಶೇಷ ಬಹುಮಾನವನ್ನು ಬೊಟ್ಟೋಳಂಡ ನಿವ್ಯ ದೇವಯ್ಯ, ವಿಶುಕಾಳಪ್ಪ, ಅಪ್ಪಚೆಟ್ಟೋಳಂಡ ವನುವಸಂತ, ಕೊಳ್ಳಿಮಾಡ ರಾಖಿ, ಮಾಳೇಟಿರ ಶ್ರೀನಿವಾಸ್ ಪಡೆದುಕೊಂಡರು.
ಕವಿಗಳು : ಪೆಮ್ಮಂಡ ನಿರಂತ್‍ಸೋಮಯ್ಯ, ಮಂಡೆಡ ಬೀನ, ಮಿನ್ನಂಡ ಪ್ರೀತ್ ಜೋಯಪ್ಪ, ಮಾಳೇಟಿರ ಅಜಿತ್‍ಪೂವಣ್ಣ, ಐತಿಚಂಡ ರಮೇಶ್ ಉತ್ತಪ್ಪ, ಕೋಟೆರ ಉದಯ್‍ಪೂಣಚ್ಚ, ಮಾತಂಡ ದೇಚಮ್ಮ ಅಚ್ಚಯ್ಯ, ಕಾಲ್ಲಚ್ಚೀರ ಸುಮಿದಿನೇಶ್, ಪೋಡಮಾಡ ಭವಾನಿನಾಣಯ್ಯ, ಮಲ್ಲೇಂಗಡ ಸುಧಾ ಮುತ್ತಣ್ಣ, ಕದ್ದಣಿಯಂಡ ವಂದನಚಿಣ್ಣಪ್ಪ, ಐಮುಡಿಯಂಡ ಪ್ರೇಮಗಿರೀಶ್ ಚಮ್ಮಟ್ಟೀರ ಪ್ರವೀಣ್‍ಉತ್ತಪ್ಪ, ಕಾಣತಂಡ ವಿವೇಕ್ ಅಯ್ಯಪ್ಪ, ಮೂವೆರ ರೇಖಾಪ್ರಕಾಶ್, ಕುಲ್ಲಚಂಡ ವಿನುತಾ ಕೇಸರಿ, ಕುಲ್ಲಚಂಡ ಸಹನದೇಚಮ್ಮ, ಕುಪ್ಪಂಡ ಭಾಗ್ಯ, ಕಾಯಿಮಂಡ ಮಮತಾ ಮೇದಪ್ಪ, ಚಮ್ಮಟ್ಟೀರ ಕೃಷ, ಅಣ್ಣೀರ ಜೂಬಿ, ಅಂಜಪರವಂಡ ರಂಜು ಮುತ್ತಪ್ಪ ಸೇರಿ 30 ಕವಿಗಳು ಪಾಲ್ಗೊಂಡಿದ್ದರು. -ಶಶಿ