ಮಡಿಕೇರಿ, ಮಾ. 26 : ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವಿಕೆಗೆ ಮುಂಜಾಗೃತ ಕ್ರಮವಾಗಿ ಈಗಾಗಲೇ ಶಾಲೆಗಳಿಗೆ ರಜೆ ನೀಡಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಶಾಲಾ ಶಿಕ್ಷಕರು ಹಾಗೂ ಭೋಧಕೇತರ ಸಿಬ್ಬಂದಿ ರಜೆ ನೀಡಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಆದರೂ ಅನೇಕ ಖಾಸಗಿ ಶಾಲೆಗಳು 2020-21ನೇ ಸಾಲಿನ ದಾಖಲಾತಿಯನ್ನು ತಾ. 31ರ ಒಳಗೆ ಶುಲ್ಕ ಪಾವತಿಸಿ ಮಾಡಿಕೊಳ್ಳಬೇಕೆಂದು ಪೋಷಕರಿಗೆ ಒತ್ತಾಯಿಸುತ್ತಿರುವ ಬಗ್ಗೆ ಅನೇಕ ದೂರುಗಳು ಸೀಕೃತವಾಗುತ್ತಿವೆ.
ಈಗಾಗಲೇ ಎಲ್ಲಾ ಶಾಲೆಗಳ ಶಿಕ್ಷಕರು, ಸಿಬ್ಬಂದಿಯವರಿಗೆ ರಜೆ ಘೋಷಿಸಲಾಗಿದ್ದು, ಶಾಲೆಯನ್ನು ಮುಚ್ಚುವುದು ಹಾಗೂ ಸಾರ್ವಜನಿಕರು ಶಾಲೆಗಳಿಗೆ ಭೇಟಿ ಮಾಡುವುದನ್ನು ನಿಷೇಧಿಸಲಾಗಿದೆ ಹೀಗಿದ್ದರೂ ಕೂಡ ಯಾವುದೇ ಶಾಲಾ ಆಡಳಿತ ಮಂಡಳಿಗಳು ಸೂಚನೆ ಪಾಲಿಸದೇ ಇರುವುದು ಅಥವಾ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಸಾಂಕ್ರಾಮಿಕ ರೋಗಗಳ ಅಧಿನಿಯಮ 1897ರ ಸೆಕ್ಷನ್ 3 ರಂತೆ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಎಸ್ ಮಚ್ಚಾಡೋ ಅವರು ಪ್ರಕಟಣೆ ತಿಳಿಸಿದ್ದಾರೆ.