*ಗೋಣಿಕೊಪ್ಪ, ಮಾ. 26: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಸಡಿಲಗೊಂಡ ಹಿನ್ನೆಲೆ ಪೆÇನ್ನಂಪೇಟೆ, ಗೋಣಿಕೊಪ್ಪ, ಬಾಳೆಲೆ, ಪೆÇನ್ನಪ್ಪಸಂತೆ, ತಿತಿಮತಿ, ಪಾಲಿಬೆಟ್ಟ, ಅಮ್ಮತಿ ಸೇರಿದಂತೆ ದಕ್ಷಿಣ ಕೊಡಗಿನ ಬಹುತೇಕ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟ, ವಾಹನಗಳ ಸಂಚಾರ ಕಂಡುಬಂದಿತ್ತು. ಜನರು ದಿನಸಿ, ತರಕಾರಿ ಖರೀದಿಸಲು ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಶಿಸ್ತು, ಸಂಯಮವನ್ನು ಪಾಲಿಸಿದರು.

ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ತನಕ ದಿನಸಿ ತರಕಾರಿ ಖರೀದಿಸಲು ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರಲ್ಲಿ ಇದ್ದ ಆತಂಕವನ್ನು ಒಂದಷ್ಟು ದೂರ ಸರಿಸಿತು.

ಅದರಂತೆ ಪೆÇಲೀಸರು ಸಹ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಮತ್ತು ಕೊರೊನಾ ವೈರಸ್ ಮಹಾಮಾರಿಗೆ ತುತ್ತಾಗದಂತೆ ತಡೆಯಲು ಸಾರ್ವಜನಿಕರಲ್ಲಿ ಕಠಿಣ ಕ್ರಮಕ್ಕೆ ಮುಂದಾದರು. ಹಾಲು, ಔಷಧಿ ಮಳಿಗೆ, ದಿನಸಿ ಮತ್ತು ಸೊಪ್ಪು ತರಕಾರಿ ಅಂಗಡಿಗಳಿಗೆ ತೆರಳುವ ಸಾರ್ವಜನಿಕರು ಒಬ್ಬರ ನಂತರ ಒಬ್ಬರು ಅಂತರ ಕಾಯ್ದುಕೊಳ್ಳಲು ಬಾಕ್ಸ್ ರೀತಿಯ ಗುರುತು ಮಾಡಿ ಜನರಿಗೆ ಯಾವುದೇ ಸಮಸ್ಯೆ ಆಗದಂತೆ, ವೈರಸ್ ಹರಡದಂತೆ ಸರದಿ ಸಾಲಿನಲ್ಲಿ ನಿಂತು ಗೃಹೋಪಯೋಗಿ ವಸ್ತುಗಳು ಖರೀದಿಸಲು ವ್ಯವಸ್ಥೆ ರೂಪಿಸಿದರು. ಈ ಬಗ್ಗೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮಿರೆಡ್ಡಿ ಮತ್ತು ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರು ಜನ ಜಾಗೃತಿ ಅಭಿಯಾನ ನಡೆಸಿದರು.

ನಿಷೇಧಾಜ್ಞೆ ಸಡಿಲಿಕೆಯಿಂದ ಬಹಳಷ್ಟು ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರೆದು ಗ್ರಾಹಕರ ಸೇವೆಗೆ ಮುಂದಾದರು. ಬಾಳೆಲೆ ಗ್ರಾಮದಲ್ಲಿ ಯುಗಾದಿ ಹಬ್ಬದ ಮರುದಿನದ ಮಾಂಸಹಾರ ಭೋಜನಕ್ಕೆ ಬಹಳಷ್ಟು ಕಡೆಗಳಲ್ಲಿ ಹಂದಿ ಕಡಿದು ಮಾಂಸ ಮಾಡಲಾಗಿದ್ದು, ಮಾಂಸ ಪ್ರಿಯರು ಮುಗಿಬಿದ್ದು ಮಾಂಸ ಖರೀದಿಸುತ್ತಿದ್ದುದು ಕಂಡುಬಂದಿತು.

ಜನತೆಗೆ ಇಂದಿನ ಪರಿಸ್ಥಿತಿಯ ಅನುಕೂಲಕರವಾಗಿ ಬೇಕಾದಂತಹ ಮಾಸ್ಕ್‍ಗಳು ಬಹುತೇಕ ಔಷಧಿಗಳು ಮೆಡಿಕಲ್‍ಗಳಲ್ಲಿ ದೊರಕುತ್ತಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಮಾಸ್ಕ್‍ಗಳ ವಿತರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತರಕಾರಿ, ಸೊಪ್ಪು ವ್ಯಾಪಾರಸ್ಥರು ಅಧಿಕ ಬೆಲೆಗೆ ವಸ್ತುಗಳನ್ನು ಮಾರುವ ಮೂಲಕ ಗ್ರಾಹಕರನ್ನು ಸುಲಿಗೆ ಮಾಡುವ ಯತ್ನಕ್ಕೆ ಮುಂದಾಗಿದ್ದಾರೆ. ಟೊಮೇಟೊ, ಬೀನ್ಸ್, ಈರುಳ್ಳಿ-ಬೆಳ್ಳುಳ್ಳಿ, ನುಗ್ಗೆ ಸೇರಿದಂತೆ ಹಲವು ತರಕಾರಿಗಳನ್ನು ದುಪ್ಪಟ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಈ ರೀತಿ ಬೆಲೆ ಏರಿಸಿ ವಸ್ತುಗಳ ಮಾರಾಟದಿಂದ ಗ್ರಾಹಕರಿಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ ಎಂದು ಬಹಳಷ್ಟು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸದಾ ಕಾಲ ಗಿಜಿ ಗಿಡುತ್ತಿದ್ದ ನಗರದ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯ ನಾಗರಿಕರನ್ನು ಹೊರತು ಪಡಿಸಿ ಮತ್ಯಾರು ಕಂಡು ಬರಲಿಲ್ಲ. ದ್ವಿಚಕ್ರ ವಾಹನಗಳು, ಕೆಲವು ಆಟೋ ರಿಕ್ಷಾಗಳು ಮುಂಜಾನೆ ಓಡಾಟ ನಡೆಸಿದವು.12 ಗಂಟೆಯ ನಂತರ ವಾಹನಗಳ ಸಂಚಾರ ಕಡಿಮೆಯಾದವು.

ಪೆಟ್ರೋಲ್ ಬಂಕ್‍ಗಳು ಕಾರ್ಯನಿರ್ವಹಿಸಿದವು. ಹಸಿ ಮೀನು ಖರೀದಿಗೆ ಜನರು ಮುಗಿಬಿದ್ದಿದ್ದರು. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ನಡೆಯಿತು. ಈ ಹಿಂದೆ ಬಯೋಮೆಟ್ರಿಕ್ ಮೂಲಕ ಪಡೆಯುತ್ತಿದ್ದ ಪಡಿತರ ವಸ್ತುಗಳನ್ನು ಕೊರೊನಾ ವೈರಸ್ ಹರಡುವ ಭೀತಿ ಯ ಹಿನ್ನೆಲೆಯಲ್ಲಿ ಮಾರ್ಪಾಡು ಮಾಡುವ ಮೂಲಕ ಮೊಬೈಲ್ ಫೋನ್‍ಗಳಿಗೆ ಒಟಿಪಿ ಸಂಖ್ಯೆ ಕಳುಹಿಸಿ ನಂತರದಲ್ಲಿ ಪಡಿತರ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಸರಕಾರದ ಸೂಚನೆ ಮೇರೆಗೆ ಪಡಿತರ ವಸ್ತುಗಳನ್ನು ಹೆಚ್ಚಾಗಿ ದಾಸ್ತಾನು ಇಡುವ ವ್ಯವಸ್ಥೆ ಮಾಡಲಾಗುತ್ತಿತ್ತು. ಯುಗಾದಿ ಹಬ್ಬದ ಪ್ರಯುಕ್ತ ರೈತರು ಹೊಸ ತೊಡಕು ಆಚರಣೆ ಮಾಡುವ ಹಿನ್ನೆಲೆಯಲ್ಲಿ ತಾವು ಬೆಳೆದ ತರಕಾರಿ ಬೆಳೆಗಳನ್ನು ಕಟಾವು ಮಾಡದ ಕಾರಣ ತರಕಾರಿಗಳು ಹೆಚ್ಚಾಗಿ ಮಾರುಕಟ್ಟೆಗೆ ಬರಲಿಲ್ಲ. ಇರುವ ತರಕಾರಿಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿತ್ತು.

ವೀರಾಜಪೇಟೆ: ಲಾಕ್‍ಡೌನ್ ನಿರ್ಬಂಧವನ್ನು ಬೆಳಗಿನ ಆರು ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಸಡಿಲಿಸಿದ್ದರಿಂದ ಇಲ್ಲಿನ ಪಟ್ಟಣದ ನಿವಾಸಿಗಳು ದಿನಸಿ ತರಕಾರಿ ಸಾಮಾಗ್ರಿಗಳನ್ನು ಮುಗಿಬಿದ್ದು ಖರೀದಿಸಿದರು.

ಕೆಲವು ವ್ಯಾಪಾರಿಗಳು ಬೆಳಿಗ್ಗೆ ಆರು ಗಂಟೆಗೆ ಅಂಗಡಿಗಳನ್ನು ತೆರೆದಿದ್ದರು. ಇನ್ನೂ ಕೆಲವರು ಜಿಲ್ಲಾಧಿಕಾರಿ ಅವರ ಆದೇಶವನ್ನು ವಿಳಂಬವಾಗಿ ನೋಡಿ 9 ಗಂಟೆಯ ನಂತರ ಅಂಗಡಿಗಳನ್ನು ತೆರೆದಿದ್ದರು. ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಂದಿನಿ ಹಾಲು ಮೊಸರು ಮಜ್ಜಿಗೆಯನ್ನು ಪ್ರತಿಯೊಬ್ಬರು ಮೂರು ಅಡಿಗಳ ಅಂತರದಲ್ಲಿ ಸರತಿ ಸಾಲಿನಲ್ಲಿ ನಿಂತು ಖರೀದಿಸಿದರು. ಎಲ್ಲ್ಲಾ ಔಷಧಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಅಪರಾಹ್ನ ಹನ್ನೆರಡು ಗಂಟೆಯಾಗುತ್ತಲೆ ಪೊಲೀಸರು ಎಲ್ಲರನ್ನು ಚದುರಿಸಿ ಮನೆಗೆ ಕಳುಹಿಸುತ್ತಿದ್ದುದು ಕಂಡು ಬಂತು.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದಿನಿಂದ ಆಸ್ಪತ್ರೆಯ ಮುಂದೆಯೇ ಜ್ವರ ತಪಾಸಣಾ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದೆ. ಬೆಳಗಿನಿಂದ ಅಪರಾಹ್ನ 1 ಗಂಟೆಯ ತನಕ ಒಟ್ಟು 148 ಮಂದಿ ಜ್ವರ ತಪಾಸಣೆ ಮಾಡಿಸಿಕೊಂಡಿದ್ದಾರೆ. ವಿದೇಶದಿಂದ ಬಂದ ಒಬ್ಬರ ಸ್ವಯಂ ಘೋµಣಾ ಪತ್ರದಿಂದ ನೋಂದಾವಣೆ ಸಂಖ್ಯೆ 39ಕ್ಕೆ ಏರಿದೆ. ಎಲ್ಲರೂ 15 ದಿನಗಳ ತನಕ ನಿಗಾ ಘಟಕದಲ್ಲಿರುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರು ಮೇಲ್ನೋಟಕ್ಕೆ ಈ 39 ಮಂದಿ ಪೈಕಿ ಯಾರಿಗೂ ಕೊರೊನಾ ವೈರಸ್ ಸೋಂಕು ತಗಲಿರುವುದು ಕಂಡು ಬಂದಿಲ್ಲ ಎಂದರು.

ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಊಟ, ಉಪಹಾರಕ್ಕಾಗಿ ಸಮುಚ್ಚಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕ್ಯಾಂಟೀನ್‍ನ್ನು ಆರಂಭಿಸಲಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡಿ ಪೊಲೀಸ್ ಸಿಬ್ಬಂದಿಗಳೇ ಆಹಾರ ತಯಾರಿಸುತಿದ್ದಾರೆ ಎಂದು ಡಿ.ವೈಎಸ್‍ಪಿ ಸಿ.ಟಿ.ಜಯಕುಮಾರ್ ತಿಳಿಸಿದರು.

ಪೊನ್ನಂಪೇಟೆ

ಪೊನ್ನಂಪೇಟೆ ತೊರೆಬೀದಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು 2 ದಿನಕ್ಕೆ ಒಂದು ಬಾರಿ ನೀರು ಬಿಡುತ್ತಿದ್ದು ನಿನ್ನೆ ಮಿನಿಟ್ಯಾಂಕ್‍ಗೆ ನೀರು ಬಿಟ್ಟ ಸಂದರ್ಭ ಹೆಚ್ಚು ಜನಜಂಗುಳಿ ಕಂಡುಬಂತು. ದಿನಸಿ ಅಂಗಡಿಗಳ ಮುಂದೆ ಗುಂಪು ಗೂಡಿ ನಿಲ್ಲುವುದನ್ನು ತಪ್ಪಿಸಲು ಅಂಗಡಿಗಳ ಎದುರು 1 ಮೀಟರ್ ಅಂತರ ಇರುವಂತೆ ವೃತ್ತ ಗಳನ್ನು ರಚಿಸಿ ಸರತಿ ಪ್ರಕಾರ ನಿಂತು ಖರೀದಿಸುವ ವ್ಯವಸ್ಥೆ ಮಾಡಲಾಯಿತು.

ದಿನಸಿ ಸಾಮಾನು ಖರೀದಿಗೆ ಮನೆಗೊಬ್ಬರು ಬರುವ ಬದಲು ಕೆಲವರು ಅವಶ್ಯಕತೆ ಇಲ್ಲದಿದ್ದರೂ ಮಕ್ಕಳನ್ನೂ ಕೂಡ ಕರೆದು ಕೊಂಡು ಬಂದಿದ್ದರು. ಇದರಿಂದ ಜನಜಂಗುಳಿ ಹೆಚ್ಚಾಗುತಿತ್ತು.

ಎಲ್ಲಾ ಅಂಗಡಿಗಳಲ್ಲೂ ಕೆಲವು ಅಗತ್ಯ ವಸ್ತುಗಳು ಖಾಲಿಯಾಗಿರುವ ಕಾರಣ ಜನರು ನಾಲ್ಕೈದು ಅಂಗಡಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇನ್ನು ಕೆಲವು ತರಕಾರಿ ಅಂಗಡಿಯವರು ಬೆಲೆ ಹೆಚ್ಚುಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಹಕರು ಅಸಮಾಧಾನ ತೋಡಿಕೊಂಡರೂ ವಿಧಿಯಿಲ್ಲದೆ ಖರೀದಿಸುತ್ತಿದ್ದರು. 1 ಕೆಜಿ ಟೊಮೆಟೊಗೆ 50 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.

ಇಂದು ಬೆಳಿಗ್ಗೆ 6ರಿಂದ 12 ಗಂಟೆಯವರೆಗೆ ದಿನಸಿ ಅಂಗಡಿಗಳು ತೆರೆಯಲು ಆದೇಶಿಸಿದ್ದರಿಂದ ನಿನ್ನೆಯಷ್ಟು ಜನಜಂಗುಳಿ ಇರಲಿಲ್ಲ.

ನಾಪೆÇೀಕ್ಲು

ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6ರಿಂದ 12 ಗಂಟೆಯವರೆಗೆ ಅವಕಾಶ ನೀಡಿರುವ ಹಿನೆÀ್ನಲೆಯಲ್ಲಿ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ನಾಪೋಕ್ಲು ಪಟ್ಟಣದಲ್ಲಿ ಸೇರಿದ್ದರು. 12 ಗಂಟೆಗೆ ಪೆÇಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು. ಹಲವು ಅಂಗಡಿ ಮಾಲೀಕರು ಕೂಡಲೇ ಅಂಗಡಿಗಳನ್ನು ಬಂದ್ ಮಾಡಿದರಾದರೂ ಮತ್ತೇ ಹಲವು ಅಂಗಡಿಗಳನ್ನು ಪೆÇಲೀಸರು ಬಲವಂತವಾಗಿ ಮುಚ್ಚಿಸಿದರು.

ಜನರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಅಂಗಡಿಗಳ ಮುಂದೆ ಗ್ರಾಹಕರು ನಿಲ್ಲಲು ಗುರುತು ಮಾಡಿದ್ದರು. ಕೆಲವು ಅಂಗಡಿಗಳಲ್ಲಿ ಅದೇ ಗುರುತಿನಲ್ಲಿ ನಿಂತು ಗ್ರಾಹಕರು ಸಾಮಗ್ರಿ ಪಡೆದರೆ, ಕೆಲವು ಅಂಗಡಿಗಳಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಹಲವರು ವರ್ತಿಸಿದರು.

ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಮಾತ್ರ ಅವಕಾಶವಿದ್ದರೂ ಪಟ್ಟಣದ ಕೆಲವು ಕಡೆಗಳಲ್ಲಿ ಪೆಟ್ಟಿಗೆ ಅಂಗಡಿಗಳನ್ನೂ ಕೂಡ ತೆರೆಯಲಾಗಿದೆ. ಈ ಬಗ್ಗೆ ಪೆÇಲೀಸರು ಏನೂ ಕ್ರಮಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು ಕಂಡು ಬಂತು.

ಸಿದ್ದಾಪುರ: ಸಿದ್ದಾಪುರ ಪಟ್ಟಣದಲ್ಲಿ ಜನರ ಓಡಾಟ ಹೆಚ್ಚಾಗಿ ಕಂಡು ಬಂತು. ಬೆಳಿಗ್ಗೆಯಿಂದಲೇ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಆಗಮಿಸಿದರು. ತರಕಾರಿ, ಹಾಲಿನ ಡೈರಿ, ದಿನಸಿ ಅಂಗಡಿಗಳ ಜೊತೆಗೆ ಇನ್ನಿತರ ಕೆಲವು ಅಂಗಡಿಗಳ ಬಾಗಿಲು ಕೂಡ ತೆರೆದಿತ್ತು. ಬಸ್ ನಿಲ್ದಾಣದ ಸುತ್ತಮುತ್ತ ತರಕಾರಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ದಿನಸಿ ಅಂಗಡಿಗಳಲ್ಲಿ ಜನರು ಮುಗಿ ಬಿದ್ದರೂ ಅಗತ್ಯ ವಸ್ತುಗಳು ಸಿಗದೆ ಪರದಾಡಿದರು. ಯುಗಾದಿ ಹಬ್ಬದ ಮಾರನೇ ದಿನ ಹೊಸ ತೊಡಕು ಹಿನ್ನೆಲೆಯಲ್ಲಿ ಮಾಂಸ ಪ್ರಿಯರು ಮಾಂಸ ಹಾಗೂ ಮೀನಿಗಾಗಿ ಹುಡುಕಾಟ ನಡೆಸಿ, ಸಿಗದೆ ನಿರಾಶೆಗೊಂಡರು. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಜಿಲ್ಲಾಡಳಿತ ಹೆಚ್ಚಿನ ಸಮಯ ನೀಡಿದ್ದರಿಂದ ಬಸ್ ನಿಲ್ದಾಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂತು. ಜನರು ಗುಂಪು ಸೇರದಂತೆ ಪೊಲೀಸರು ಅಗಿಂದಾಗ್ಗೆ ಧ್ವನಿವರ್ಧಕದ ಮೂಲಕ ಮನವಿ ಮಾಡಿದರು. ಯುಗಾದಿ ಪ್ರಯುಕ್ತ ಅಂಚೆ ಕಚೇರಿ ಹಾಗೂ ಬ್ಯಾಂಕುಗಳಿಗೆ ಬುಧವಾರ ರಜೆ ನೀಡಿದ್ದರೂ ಗುರುವಾರ ದಿನ ಕೂಡ ಗ್ರಾಹಕರು ಕಡಿಮೆಯಾಗಿದ್ದರು. ಕೊಂಡಂಗೇರಿ ಗ್ರಾಮಕ್ಕೆ ಬುಧವಾರ ಸಂಜೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

-ದಿನೇಶ್, ಡಿ.ಎಂ.ಆರ್, ವಾಸು, ಚನ್ನನಾಯಕ್, ಪ್ರಭಾಕರ್