ಮಡಿಕೇರಿ ಮಾ. 26 : ಕೊಡಗು ಜಿಲ್ಲೆಯಲ್ಲಿ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಪೊಲೀಸ್ ಕಟ್ಟೆಚ್ಚರದೊಂದಿಗೆ ಜಿಲ್ಲೆ ‘ಲಾಕ್ಡೌನ್’ ಆಗಿ ಮುಂದುವರಿಯುತ್ತಿದೆ. ತಾ. 24ರಂದು ರಾತ್ರಿ ಪ್ರಧಾನಿ ಮೋದಿಯವರು ಏ. 14ರ ತನಕ ಇಡೀ ದೇಶದಲ್ಲಿ ‘ಲಾಕ್ಡೌನ್’ ಘೋಷಿಸಿದ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲಿ ಮಾ. 31ರವರೆಗೆ ಜಾರಿಯಾಗಿದ್ದ ನಿರ್ಬಂಧ ಮತ್ತೆ ಮುಂದುವರಿಯುವುದು ಜನತೆಗೆ ಖಚಿತವಾಗಿತ್ತು. ಈ ಘೋಷಣೆ ಬಳಿಕ ಇದು ಮತ್ತಷ್ಟು ಆಘಾತಕಾರಿಯಾದ ಸುದ್ದಿ ಎಂಬಂತೆ ಜನತೆಗೆ ಇನ್ನಷ್ಟು ಆತಂಕ ಉಂಟಾಗಿದ್ದಂತೂ ನಿಜ. ಇದರ ಪರಿಣಾಮವೋ ಎಂಬಂತೆ ಮುಂದಿನ ದಿನಗಳಲ್ಲಿ ಅಗತ್ಯ ಸಾಮಾನುಗಳು, ಸಾಮಗ್ರಿಗಳು ಸಿಗುತ್ತವೆಯೋ ಎಂಬ ದುಗುಡ ಜನತೆಯಲ್ಲಿ ಮೂಡಿದಂತಾಗಿತ್ತು. ತಾ. 25 ರಂದು ಯುಗಾದಿ ಹಬ್ಬವಾಗಿದ್ದರೂ ಇದಕ್ಕೆ ಸರಳ ವ್ಯವಸ್ಥೆ ಮಾತ್ರವಾಗಿತ್ತು. ಆದರೆ ಜನತೆ ಅಗತ್ಯ ಸಾಮಗ್ರಿ ಪಡೆಯಲು ನಿರ್ಬಂಧ ಸಡಿಲಿಕೆಯ ಸಮಯವಾಗಿದ್ದ ಅಪರಾಹ್ನ 12 ರಿಂದ 2 ಗಂಟೆಯ ಅವಧಿಯ ಸಮಯದಲ್ಲಿ ಇದಕ್ಕಾಗಿ ಬಹುತೇಕ ಕಡೆಗಳಲ್ಲಿ ಭಾರೀ ನೂಕು-ನುಗ್ಗಲು, ಜನಸಂದಣಿ, ವಾಹನದಟ್ಟಣೆ ಅಧಿಕವಾಗಿ ಕಂಡು ಬಂದಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯ ವಿವಿಧ ಅಂಗಡಿಗಳು, ವೀರಾಜಪೇಟೆ ನಗರ, ಸೋಮವಾರಪೇಟೆಗಳಲ್ಲಿ ಈ ಅವಧಿಯಲ್ಲಿ ಜನಜಂಗುಳಿ ತುಸು ಹೆಚ್ಚಾಗಿಯೇ ಉಂಟಾಗಿತ್ತು. ಜನತೆ ಸಾಮಗ್ರಿ ಪಡೆಯಲು ಮುಗಿಬೀಳುತ್ತಿದ್ದುದು ನಿನ್ನೆ ಎಲ್ಲೆಡೆ ಸಹಜವಾಗಿದ್ದ ಕುರಿತು ಹಲವಾರು ಮಂದಿ ಆತಂಕಕ್ಕೂ ಒಳಗಾಗಿದ್ದರು.
ತಾ. 26 ರಂದು ನಿರ್ಬಂಧ ಸಡಿಲಿಕೆಯುಗಾದಿಯ ದಿನದಂದು ಉಂಟಾಗಿದ್ದ ಪರಿಸ್ಥಿತಿಯನ್ನು ಅವಲೋಕಿಸಿ ಜನಸಂದಣಿಯನ್ನು ಕಡಿಮೆ ಮಾಡಲೆಂಬಂತೆ ತಾ. 26ರ ಗುರುವಾರದಂದು ಜಿಲ್ಲಾಡಳಿತ ತನ್ನ ನಿರ್ದಾರವನ್ನು ತುಸು ಸಡಿಲಿಸಿತ್ತು.