ನವದೆಹಲಿ, ಮಾ.26: ಕೊರೊನಾ ವೈರಸ್ ಪ್ರಸರಣ ತಡೆಗೆ ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಕಕ್ಕೆ ಒಳಗಾದ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ, ಕೋವಿಡ್-19 ನಿಂದ ಆರ್ಥಿಕತೆ ಮೇಲೆ ಆಗಿರುವ ಪ್ರಭಾವವನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಹಾಗೂ ಆರ್ಥಿಕ ಚೇತರಿಕೆ ಪ್ಯಾಕೇಜ್‍ಸಿದ್ಧಪಡಿಸುವಂತೆ ಸೂಚಿಸಿದ್ದರು. ಅದರಂತೆ ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಬಾಧಿತ ಜನರಿಗೆ ಪರಿಹಾರ ನೀಡುವ ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನರ ಸಲುವಾಗಿ ಕೇಂದ್ರ ಸರ್ಕಾರ ಇಂದು ರೂ. 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ವಲಸೆ ಬಂದಿರುವ ಕಾರ್ಮಿಕರು, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗಾಗಿ 1.7 ಲಕ್ಷ ಕೋಟಿ ರೂ ಪ್ಯಾಕೇಜ್‍ಸಿದ್ಧವಿದ್ದು, ಯಾರೂ ಸಹ ಹಸಿವಿನಿಂದ ಇರಲು ಬಿಡುವುದಿಲ್ಲ ಎಂದು ಹೇಳಿದರು. ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ ಪ್ಯಾಕೇಜ್ ವಿವರ ಈ ಕೆಳಗಿನಂತಿದೆ.

- ಮುಂದಿನ 3 ತಿಂಗಳವರೆಗೂ ಪ್ರಧಾನ ಮಂತ್ರಿ ಗರೀಬ್‍ಕಲ್ಯಾಣ ಅನ್ನ ಯೋಜನೆ ಜಾರಿಯಲ್ಲಿರಲಿದ್ದು, ಇದರ ಅಡಿಯಲ್ಲಿ 80 ಕೋಟಿ ಬಡ ಜನರಿಗೆ ಅಗತ್ಯ ಆಹಾರ ಪದಾರ್ಥ ಸಿಗಲಿದೆ. ಈಗಾಗಲೇ ಪ್ರತಿ ವ್ಯಕ್ತಿಗೆ ನಿಗದಿಯಾಗಿರುವ 5 ಕೆ.ಜಿ ಅಕ್ಕಿ ಅಥವಾ ಗೋದಿಯ ಜತೆಗೆ 5 ಕೆ.ಜಿ. ಅಕ್ಕಿ ಅಥವಾ ಗೋದಿಯಂತಹ ಆಹಾರ ಪದಾರ್ಥ ಉಚಿತವಾಗಿ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಬೇಳೆ (ಪ್ರಾಂತ್ಯಗಳಿಗೆ ಅನುಗುಣವಾಗಿ) ಸಿಗಲಿದೆ.

- ಮಹಿಳಾ ಜನ ಧನ್‍ಖಾತೆ ಹೊಂದಿರುವವರು ಪ್ರತಿ ತಿಂಗಳಿಗೆ ರೂ.500 ಪಡೆಯಲಿದ್ದಾರೆ. ಇದು ಮುಂದಿನ 3 ತಿಂಗಳವರೆಗೂ ಮುಂದುವರಿಯಲಿದೆ.

- ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳವರೆಗೂ ಮೂರು ಅನಿಲ ಸಿಲಿಂಡರ್‍ಗಳು ಉಚಿತವಾಗಿ ಪೂರೈಕೆಯಾಗಲಿದೆ. ಇದರಿಂದಾಗಿ 8 ಕೋಟಿ ಮಹಿಳೆಯರು ಲಾಭ ಪಡೆಯಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

-ನಗದು ವರ್ಗಾವಣೆ ಯೋಜನೆ ಅಡಿಯಲ್ಲಿ ಅಂಗವಿಕಲರು, ರೈತರು ಹಾಗೂ ಬಡ ಪಿಂಚಣಿದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ದೇಶದ ಸುಮಾರು 8.6 ಕೋಟಿ ರೈತರು ಏಪ್ರಿಲ್ ಮೊದಲ ವಾರದಲ್ಲಿ ರೂ. 2,000 ಹಣವನ್ನು ನೇರ ವರ್ಗಾವಣೆ ಅಡಿಯಲ್ಲಿ ಪಡೆಯಲಿದ್ದಾರೆ.

- ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ ರೂ. 50 ಲಕ್ಷ ವಿಮೆ ಘೋಷಣೆ ಮಾಡಲಾಗಿದೆ.

-ಹಿರಿಯ ನಾಗರಿಕರು, ವಿಧವೆ, ಅಂಗವಿಕಲರಿಗೆ ಒಂದು ಬಾರಿಯ ಪರಿಹಾರ ಮೊತ್ತ ರೂ. 1,000 ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ.

-ನರೇಗಾ ವೇತನ ದಿನವೊಂದಕ್ಕೆ 182 ರೂ.ಗಳಿಂದ 202 ರೂ.ಗಳಿಗೆ ಏರಿಕೆ, 5 ಕೋಟಿ ಕುಟುಂಬಗಳು ಇದರ ಫಲಾನುಭವಿಗಳಾಗಿದ್ದಾರೆ.

-100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ 15,000 ರೂ. ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿಎಫ್ ಕೊಡುಗೆ.

-ಇಪಿಎಫ್‍ಯೋಜನೆಗೆ ತಿದ್ದುಪಡಿ ತರಲಾಗುತ್ತದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ. 75ರಷ್ಟು

(ಮೊದಲ ಪುಟದಿಂದ) ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ನೀಡಲಾಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ. 75ರಷ್ಟು ಮುಂಗಡ ಮೊತ್ತ; ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್‍ನೊಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

- ಸಂಘಟಿತ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2 ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ವಲಯದ ಕಾರ್ಮಿಕರಿಗೆ ಸರಕಾರ ದೀನ ದಯಾಳ ಉಪಾಧ್ಯಾಯ ಯೋಜನೆಯ ಅಡಿಯಲ್ಲಿ ತಲಾ 20 ಲಕ್ಷ ರೂ. ಸಾಲ ನೀಡಲು ಮುಂದಾಗಿದೆ. ಇದರಿಂದ ಸುಮಾರು 2 ಕೋಟಿ ಕುಟುಂಬಗಳು ಲಾಭ ಪಡೆಯಲಿವೆ.

- ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ, ಚಿಕಿತ್ಸೆ ಮತ್ತು ಪರೀಕ್ಷಾ ಲ್ಯಾಬ್ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.