ಮಡಿಕೇರಿ, ಮಾ. 26: ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಬರುವ ಕೊಂಗಣ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಯುವಕನೋರ್ವ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ಅಪರಾಹ್ನ ಸಂಭವಿಸಿದೆ. ಚಿಕ್ಕಮುಂಡೂರು ಗ್ರಾಮದ ನಿವಾಸಿ ಅಜ್ಜಿಕುಟ್ಟೀರ ದೇವಯ್ಯ (ರವಿ) ಮತ್ತು ಜ್ಯೋತಿ ದಂಪತಿಯ ಪುತ್ರ ಆಕರ್ಶ್ ಕಾವೇರಪ್ಪ (24) ಮೃತ ಯುವಕ.

ನಿನ್ನೆ ಅಪರಾಹ್ನ ಆಕರ್ಶ್ ಕಾವೇರಪ್ಪ ಹಾಗೂ ಕೆಲವು ಸ್ನೇಹಿತರು ಚಿಕ್ಕಮುಂಡೂರಿನ ಮನೆಯಿಂದ ಕೊಂಗಣ ಹೊಳೆಗೆ ತೆರಳಿದ್ದು, ಅಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ. ಈ ಸಂದರ್ಭ ಆಕಸ್ಮಿಕವಾಗಿ ನದಿಯೊಳಗೆ ಜಾರಿಬಿದ್ದ ಆಕರ್ಶ್ ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ. ಮೃತಪಟ್ಟಿರುವ ಯುವಕ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಹತ್ತು ದಿನಗಳ ಹಿಂದೆಯಷ್ಟೇ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮನೆಗೆ ಹಿಂತಿರುಗಿದ್ದನೆನ್ನಲಾಗಿದೆ. ಈತನ ಹಿರಿಯ ಸಹೋದರ ಕೆಲವು ವರ್ಷದ ಹಿಂದೆ ಇದೇ ದಿನದಂದು ಅನಾರೋಗ್ಯದಿಂದ ಮೃತಪಟ್ಟಿದ್ದು, ನಿನ್ನೆ ಮನೆಯಲ್ಲಿ ಮೀದಿ ಇಡುವ ಕಾರ್ಯವಿತ್ತೆನ್ನಲಾಗಿದೆ. ಇದಾದ ಬಳಿಕ ಮನೆಯವರಿಗೆ ತಿಳಿಯದಂತೆ ಈತ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಘಟನೆ ಬಗ್ಗೆ ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಇಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಪೋಷಕರಿಗೆ ಇಬ್ಬರೇ ಪುತ್ರರಿದ್ದು, ಹಿರಿಯ ಪುತ್ರ ಸಾವಿಗೀಡಾಗಿದ್ದ ದಿನದಂದೇ ಈ ದಾರುಣ ಘಟನೆ ಜರುಗಿದ್ದು, ಅವರು ಹಾಗೂ ಬಂಧುಮಿತ್ರರು ಶೋಕಸಾಗರದಲ್ಲಿ ಮುಳುಗಿದ್ದಾರೆ.