ಸೋಮವಾರಪೇಟೆ, ಮಾ. 26: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಆದೇಶಿಸಿರುವ ಲಾಕ್ಡೌನ್ ಸೂಚನೆಯ ಸಮಯಾ ವಕಾಶದಲ್ಲಿ ಜಿಲ್ಲಾಡಳಿತ ಸಡಿಲಿಕೆ ನೀಡಿದ್ದರಿಂದ ಇಂದು ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ಬೆಳಗ್ಗಿ ನಿಂದಲೇ ಸಾರ್ವಜನಿಕರು ಮುಗಿಬಿದ್ದರು.ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತವೇ ಅನುಮತಿ ನೀಡಿದ್ದರಿಂದ ಪಟ್ಟಣ ಸುತ್ತಮುತ್ತ ಸೇರಿದಂತೆ ಗ್ರಾಮೀಣ ಭಾಗದ ಮಂದಿ ಪಟ್ಟಣಕ್ಕೆ ದಾಂಗುಡಿಯಿಟ್ಟರು.ಪಟ್ಟಣದಲ್ಲಿ ಬೆಳಗ್ಗಿನಿಂದಲೇ ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಪಟ್ಟಣದಲ್ಲಿ ಸಾವಿರಾರು ಮಂದಿ ಓಡಾಟ ನಡೆಸಿದರು. ಕಾರು, ಬೈಕ್ಗಳಲ್ಲಿ ಮನೆಯಿಂದ ಆಗಮಿಸಿ, ತರಕಾರಿ, ದಿನಸಿ ಪದಾರ್ಥಗಳನ್ನು ಖರೀದಿಸಿದರು.ಅಂಗಡಿಯ ಎದುರು ಭಾಗದಲ್ಲಿ ಒಂದು ಮೀಟರ್ ಅಂತರದಲ್ಲಿ ನಿಂತು ದಿನಸಿ ಖರೀದಿಸಿದರು. ಜನರು ಗುಂಪುಗೂಡದಂತೆ ತಡೆಯಲು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಹರಸಾಹಸ ನಡೆಸಿದರು.ಮಾಸ್ಕ್ಗೆ ಬೇಡಿಕೆ: ದಿನಸಿ ಅಂಗಡಿ ಮತ್ತು ಮೆಡಿಕಲ್ ಅಂಗಡಿಗಳ ಎದುರು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಮಾಸ್ಕ್ ಧರಿಸದೇ ಪಟ್ಟಣಕ್ಕೆ
(ಮೊದಲ ಪುಟದಿಂದ) ಆಗಮಿಸುತ್ತಿದ್ದ ಮಂದಿಯನ್ನು ಪೊಲೀಸರು ಗದರಿಸಿದರು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದರಿಂದ, ಮೆಡಿಕಲ್ ಶಾಪ್ಗಳಲ್ಲಿ ಮಾಸ್ಕ್ಗಾಗಿ ಬೇಡಿಕೆಯಿಟ್ಟರು. ಆದರೆ ಪಟ್ಟಣದ ಯಾವೊಂದು ಮೆಡಿಕಲ್ ಶಾಪ್ನಲ್ಲೂ ಮಾಸ್ಕ್ ಇಲ್ಲದ್ದರಿಂದ ಅಂಗಡಿಗಳಲ್ಲಿ ದೊರೆಯುತ್ತಿದ್ದ ಮಾಸ್ಕ್ಗೆ ಮುಗಿಬಿದ್ದರು. ಅಂಗಡಿಯಲ್ಲಿದ್ದ ಮಾಸ್ಕ್ಗಳೂ ಖಾಲಿಯಾದ ನಂತರ ಕರ್ಚೀಫ್ಗಳನ್ನೇ ಮುಖಕ್ಕೆ ಕಟ್ಟಿಕೊಂಡು ಪಟ್ಟಣದಲ್ಲಿ ಓಡಾಡಿದರು.
ಕೈಜಾರಿದ ಪರಿಸ್ಥಿತಿ: ನಿನ್ನೆಯವರೆಗೆ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ದಿನಸಿ ಮತ್ತು ತರಕಾರಿ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಅನುವು ಮಾಡಿದ್ದ ಜಿಲ್ಲಾಡಳಿತ ಇಂದು ಬೆಳಗ್ಗೆ 6 ರಿಂದ 12ರವರೆಗೆ ಅವಕಾಶ ಕಲ್ಪಿಸಿದ್ದರಿಂದ ಪಟ್ಟಣದಲ್ಲಿ ಜನಸಂದಣಿ ಹೆಚ್ಚು ಕಂಡುಬಂತು. ನಿನ್ನೆಯವರೆಗೂ ಪೊಲೀಸರ ಕೈಯಲ್ಲಿದ್ದ ಪರಿಸ್ಥಿತಿ ಇಂದು ಬೆಳಗ್ಗೆ ಕೈಜಾರುವಂತಾಯಿತು. ಎರಡು ದಿನಗಳಿಂದ ಸರ್ಕಾರದ ಆದೇಶ ಪಾಲಿಸಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದ ಜನತೆ, ಇಂದು ಸೂಚನೆಯ ಸಡಿಲಿಕೆಯಿಂದಾಗಿ ಮನಸೋಯಿಚ್ಛೆ ಓಡಾಟ ನಡೆಸಿದರು.
ಕೆಲವರು ಸುಖಾಸುಮ್ಮನೆ ಪಟ್ಟಣದಲ್ಲಿ ತಿರುಗುತ್ತಿದ್ದುದೂ ಕಂಡುಬಂತು. ಹಲವಷ್ಟು ಮಂದಿ ಬೆಳಿಗ್ಗೆ 8 ಗಂಟೆಗೆ ಪಟ್ಟಣಕ್ಕೆ ಆಗಮಿಸಿ ಮಧ್ಯಾಹ್ನ 12ರವರೆಗೂ ಸುಮ್ಮನೇ ಅಲೆಯುತ್ತಿದ್ದರು. ಪೊಲೀಸರು ಬೆದರಿಸಿದರೂ ಸಹ ‘12 ಗಂಟೆಯವರೆಗೆ ಟೈಂ ಇದೆಯಲ್ವಾ ಸಾರ್’ ಎಂದು ಜವಾಬ್ದಾರಿ ಇಲ್ಲದವರಂತೆ ತಿರುಗಿ ಮಾತನಾಡುತ್ತಿದ್ದರು.
ಕಳೆದೆರಡು ದಿನಗಳಿಂದ ಹರಸಾಹಸ ಪಟ್ಟು ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತಂದಿದ್ದರು. ಒಂದೆರಡು ದಿನ ಹಿಂದಿನ ಪರಿಸ್ಥಿತಿಯೇ ಇದ್ದಿದ್ದರೆ ಜನರು ಪ್ರಸ್ತುತ ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಿದ್ದರು. ನಿಗದಿತ ಸಮಯದಲ್ಲಿಯೇ ಮನೆಯಿಂದ ಹೊರಬರುತ್ತಿದ್ದರು. ಆದರೆ ಸಮಯಾವಕಾಶದಲ್ಲಿ ಬದಲಾವಣೆ ಮಾಡಿದ್ದರಿಂದ ಒಮ್ಮೆಲೆ ಸಾರ್ವಜನಿಕರು ಪಟ್ಟಣಕ್ಕೆ ಮುಗಿಬಿದ್ದು, ಗುಂಪುಗೂಡಿದರು. ಇಂತಹ ಗುಂಪುಗಳನ್ನು ಚದುರಿಸಿ ಕನಿಷ್ಟ ಅಂತರ ಪಾಲಿಸುವಂತೆ ಪೊಲೀಸರು ಆಗಾಗ್ಗೆ ಸೂಚಿಸುತ್ತಿದ್ದರು.
ಮಧ್ಯಾಹ್ನ 12 ಗಂಟೆಗೆ ಸೋಮವಾರಪೇಟೆ ಪಟ್ಟಣ ಸಂಪೂರ್ಣ ಬಂದ್ ಆಯಿತು. ದಿನಸಿ ಹಾಗೂ ತರಕಾರಿ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು. ಅಂಗಡಿಗಳಿಗೆ ದಿನಸಿ ಹಾಗೂ ತರಕಾರಿಗಳನ್ನು ತರಲು ವರ್ತಕರು ಪೊಲೀಸರಿಂದ ಪರವಾನಗಿ ಪಡೆದು ಹಾಸನ, ಮೈಸೂರಿನತ್ತ ತೆರಳಿದರು.
ಎರಡು ಗ್ರಾಮಗಳು ಬಂದ್: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್ಡೌನ್ಗೆ ಸೂಚನೆ ನೀಡಿರುವದರಿಂದ ಹೊರಭಾಗದ ಮಂದಿ ತಮ್ಮ ಗ್ರಾಮಕ್ಕೆ ಆಗಮಿಸದಂತೆ ಪಟ್ಟಣ ಸಮೀಪದ ಎರಡು ಗ್ರಾಮಗಳು ಸ್ವಯಂ ನಿರ್ಬಂಧ ವಿಧಿಸಿಕೊಂಡವು.
ಸೋಮವಾರಪೇಟೆ-ಬಾಣಾವರ ರಾಜ್ಯಹೆದ್ದಾರಿ ಬದಿಯಲ್ಲಿರುವ ಮಸಗೋಡು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಹೊರಭಾಗದಿಂದ ಯಾರೂ ಪ್ರವೇಶಿಸಬಾರದು ಎಂದು ಸ್ವಯಂ ನಿರ್ಬಂಧ ವಿಧಿಸಿಕೊಂಡರು. ಈಗಾಗಲೇ ಹೊರಭಾಗದಲ್ಲಿದ್ದ ಸ್ವಗ್ರಾಮದವರು ಮಸಗೋಡಿಗೆ ಆಗಮಿಸಿದ್ದಾರೆ. ಬೇರೆ ಯಾರೂ ಹೊರಭಾಗದಲ್ಲಿ ಉಳಿದಿಲ್ಲ. ಆದ್ದರಿಂದ ಹೊರಭಾಗದಿಂದಲೂ ನಮ್ಮ ಗ್ರಾಮಕ್ಕೆ ಬೇರೆಯವರು ಬರಬಾರದು ಎಂಬ ನಿಟ್ಟಿನಲ್ಲಿ ಗ್ರಾಮದ ರಸ್ತೆಗೆ ತಡೆಯೊಡ್ಡಿರುವದಾಗಿ ಗ್ರಾಮಾಭಿವೃದ್ಧಿ ಸಮಿತಿ ಪ್ರಮುಖರು ತಿಳಿಸಿದ್ದಾರೆ. ಇದರೊಂದಿಗೆ ಕುಸುಬೂರು-ಬೇಳೂರು ಗ್ರಾಮ ಸಂಪರ್ಕದ ಪ್ರಮುಖ ರಸ್ತೆಗೂ ತಡೆಯೊಡ್ಡಲಾಗಿತ್ತು. ಗ್ರಾಮಕ್ಕೆ ಹೊರಭಾಗದಿಂದ ಆಗಮಿಸುವ ವಾಹನ, ಮಂದಿಗೆ ನಿರ್ಬಂಧ ವಿಧಿಸಲಾಗಿದೆ.
ಯುಗಾದಿ ಸಂಭ್ರಮ ಕಸಿದ ಕೊರೊನಾ: ಹೊಸ ವರ್ಷ ಯುಗಾದಿಯ ಸಂಭ್ರಮವನ್ನು ಕೊರೊನಾ ಸೋಂಕು ಕಸಿಯಿತು. ಪ್ರತಿವರ್ಷದ ಯುಗಾದಿ ದಿನದಂದು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಭ್ರಮ ಕಂಡುಬರುತ್ತಿತ್ತು. ಹೊಸಬಟ್ಟೆ ತೊಟ್ಟು ಬೇವುಬೆಲ್ಲ ಸವಿದು ಸಂಭ್ರಮದಿಂದ ಹಬ್ಬ ಆಚರಣೆಯಾಗುತ್ತಿತ್ತು. ಆದರೆ ಈ ವರ್ಷ ಯುಗಾದಿ ಸಂಭ್ರಮ ಎಲ್ಲೂ ಕಂಡುಬರಲಿಲ್ಲ.
ಇನ್ನು ಯುಗಾದಿ ಹಿನ್ನೆಲೆ ಪಟ್ಟಣದ ಬಟ್ಟೆ ಮಳಿಗೆಗಳಲ್ಲಿ ಹೆಚ್ಚಿನ ಸ್ಟಾಕ್ ಇದ್ದರೂ ಸಹ ಲಾಕ್ಡೌನ್ ಆದೇಶದ ಹಿನ್ನೆಲೆ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲವಾದ್ದರಿಂದ ಹಾಗೆಯೇ ಉಳಿಯುವಂತಾಯಿತು. ಸಾರ್ವಜನಿಕರು ಹಬ್ಬದ ಸಂಭ್ರಮದಿಂದ ಹೊರಗುಳಿದು ಅಗತ್ಯವಸ್ತುಗಳ ಖರೀದಿಯತ್ತ ಗಮನ ಹರಿಸಿದರು.
ಹಳ್ಳದಿಣ್ಣೆಯಲ್ಲಿ ಪೂಜೆ: ಯುಗಾದಿ ಹಿನ್ನೆಲೆ ಹಳ್ಳದಿಣ್ಣೆ ಗ್ರಾಮದ ಶ್ರೀ ಮುನೇಶ್ವರ ದೇವಾಲಯಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಗುಂಪು ಸೇರದೇ, ಒಬ್ಬೊಬ್ಬರಾಗಿ ಬಂದು ಪೂಜೆ ನೆರವೇರಿಸಿದರು.
ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಜನರು ತರಕಾರಿ, ದಿನಸಿ ಅಂಗಡಿಗಳಿಗೆ ಮುಗಿಬಿದ್ದ ದೃಶ್ಯ ಕಂಡುಬಂತು. ಪಟ್ಟಣದಲ್ಲಿ ಮೆಡಿಕಲ್, ಹಾಲಿನ ಡೈರಿ, ಬೇಕರಿ, ತರಕಾರಿ, ದಿನಸಿ ಅಂಗಡಿಗಳು ತೆರೆದಿದ್ದವು. ಬೀದಿ ಬದಿಯಲ್ಲಿ ಹಣ್ಣುಹಂಪಲು ಮಾರಾಟ ಕೂಡ ನಡೆಯಿತು.
ಮಾಂಸ ಅಡುಗೆಗಾಗಿ ಜನರು ಕೋಳಿ, ಆಡು, ಕುರಿ ಮಾಂಸಕ್ಕೆ ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಮಾಂಸ ಮಾರಾಟ ಮಳಿಗೆಗಳು ಎಂದಿನಂತೆ ಮುಚ್ಚಲ್ಪಟ್ಟಿದ್ದರೂ ಕೂಡ ಮುಳ್ಳುಸೋಗೆ ವ್ಯಾಪ್ತಿಯ ಅಂಗಡಿಯೊಂದರಲ್ಲಿ ಮೀನು ಮಾರಾಟ ಆರಂಭಿಸಿದ ಹಿನ್ನಲೆಯಲ್ಲಿ ಅಂಗಡಿ ಮುಂದೆ ಜನರ ಒತ್ತಡ ಕಂಡುಬಂತು. ಕೆಲವು ಮಂದಿ ಗ್ರಾಮಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಣಿವೆ ಸಮೀಪ ಜೀವಂತ ಕೋಳಿಗಾಗಿ ಜನರು ಕ್ಯೂ ನಿಂತಿದ್ದ ದೃಶ್ಯ ಗೋಚರಿಸಿತು.
ಯುಗಾದಿ ಹಬ್ಬದ ಮರುದಿನ ಮುಳ್ಳುಸೋಗೆ, ಕೂಡಿಗೆ ವ್ಯಾಪ್ತಿಯಲ್ಲಿ ಜೀವದ ಕೋಳಿ ಕೆಜಿಗೆ ರೂ. 300ಕ್ಕೆ ಮಾರಾಟವಾದರೆ, ಕುರಿ ಮಾಂಸವನ್ನು ಕೆಜಿಗೆ 600 ರಿಂದ 800 ರೂ.ಗಳಿಗೆ ಜನರು ಖರೀದಿಸಿ ಕೊಂಡೊಯ್ದರು. ದಿನಸಿ, ತರಕಾರಿ ಮಳಿಗೆಗಳಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳದೆ ಜನರು ಖರೀದಿಯಲ್ಲಿ ತೊಡಗಿಸಿಕೊಂಡರು. ಬೇಸಿಗೆ ಕಾರಣ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು ಶುದ್ಧ ಕುಡಿವ ನೀರಿನ ಘಟಕಗಳ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತು ನೀರು ತುಂಬಿಸಿಕೊಳ್ಳುತ್ತಿದ್ದರು.
ಲಾಕ್ಡೌನ್ ಸಡಿಲಿಕೆ ಹಿನ್ನೆಯಲ್ಲಿ ಗಡಿಭಾಗದ ಕೊಪ್ಪ ಗೇಟ್ ಬಳಿ ವಾಹನ ಸಂಚಾರಕ್ಕೆ ಹೇರಿದ್ದ ನಿರ್ಬಂಧ ಸಡಿಲಿಕೆಗೊಂಡ ಕಾರಣ ಸಂಚಾರ ನಿರಾತಂಕವಾಗಿ ಸಾಗಿತು. ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳು ಹೊರತುಪಡಿಸಿ ದೂರದೆಡೆಗಳಿಂದ ಆಗಮಿಸಿದ ವಾಹನಗಳಿಗೆ, ಅಗತ್ಯ ಮತ್ತು ತುರ್ತು ವಿಚಾರಗಳಿಗೆ ತೆರಳುವ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ
ಗಡಿಭಾಗದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸುವುದರೊಂದಿಗೆ ಅಗತ್ಯ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಮಡಿಕೇರಿಯ ವಾಹನವೊಂದರಲ್ಲಿ ಪ್ರೆಸ್ ಫಲಕ ತಗುಲಿಸಿಕೊಂಡು ವ್ಯಕ್ತಿಯೊಬ್ಬ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಸಂದರ್ಭ ಪೊಲೀಸರು ತರಾಟೆಗೆ ತೆಗೆದುಕೊಂಡ ದೃಶ್ಯ ಕಂಡುಬಂತು.
ಮೊನ್ನೆ ದಿನ ಗಾಳಿಗೆ ಕೊಪ್ಪ ತಪಾಸಣಾ ಕೇಂದ್ರ ಹಾರಿಹೋದ ಹಿನ್ನೆಲೆಯಲ್ಲಿ ಕೂಡಿಗೆ ಸೈನಿಕ ಶಾಲೆಯ ಸಹಕಾರದೊಂದಿಗೆ ತುರ್ತು ತಪಾಸಣಾ ಕೇಂದ್ರ ನಿರ್ಮಾಣ ಮಾಡಲಾಗಿದೆ. ಗಡಿಭಾಗದ ಕೊಪ್ಪ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲಾಡಳಿತ ಪೊಲೀಸ್, ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ತಪಾಸಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುತ್ತಿದ್ದಾರೆ.
ಹೊಟೇಲ್ಗಳು ಬಂದ್ ಆಗಿದ್ದ ಕಾರಣ ಭಿಕ್ಷುಕರು, ದಿನಗೂಲಿ ಕಾರ್ಮಿಕರ ಸಂಕಟ ಅರಿತ ಕುಶಾಲನಗರದ ಉದ್ಯಮಿ ಎಂ.ಕೆ. ದಿನೇಶ್, ನಿಡ್ಯಮಲೆ ದಿನೇಶ್, ಪುನಿತ್ ಮತ್ತಿತರರ ಸ್ವಯಂ ಸೇವಕರ ತಂಡ ಆಹಾರ ಸಿದ್ಧಪಡಿಸಿ ಅಲ್ಲಲ್ಲಿ ಕಂಡುಬಂದ ಅಶಕ್ತರಿಗೆ ಆಹಾರ ಹಂಚಿ ಮಾನವೀಯತೆ ಮೆರೆದರು. ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ ಔಷಧಿ ಸಿಂಪಡಣೆ ಕಾರ್ಯ ಭರದಿಂದ ಸಾಗಿದ್ದು, ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಗ್ರಾಹಕರು ಖರೀದಿ ಸಂದರ್ಭ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂದು ನಾಗರಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದರೊಂದಿಗೆ ಧ್ವನಿವರ್ಧಕದಲ್ಲಿ ಕೂಡ ಮಾಹಿತಿ ಒದಗಿಸುತ್ತಿದ್ದರು
ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಲಾಕ್ಡೌನ್ ಆದೇಶ ಈ ಬಾರಿಯ ಯುಗಾದಿ ಹಬ್ಬವನ್ನು ನುಂಗಿ ಹಾಕಿತು ಎಂದರೆ ತಪ್ಪಾಗಲಾರದು. ಪ್ರತಿನಿತ್ಯ ದೇವಾಲಯಗಳಲ್ಲಿ ಕಂಡುಬರುತ್ತಿದ್ದ ಭಕ್ತಾದಿಗಳ ದೃಶ್ಯ ಈ ಬಾರಿ ಕಂಡುಬಾರದೆ ಮನೆಮನೆಯಲ್ಲಿ ಯುಗಾದಿ ಹಬ್ಬ ಆಚರಿಸುವುದರೊಂದಿಗೆ ಬೇವುಬೆಲ್ಲ ಮನೆಯಲ್ಲೇ ಹಂಚಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಠಿಯಾಗಿತ್ತು.
ಸುಂಟಿಕೊಪ್ಪ : ಎಂದಿನಂತೆ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಯುಗಾದಿ ಪ್ರಯುಕ್ತ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಆಹಾರ ಪದಾರ್ಥಗಳನ್ನು ಖರೀದಿಸುತ್ತಿದ್ದರು. ಸುಂಟಿಕೊಪ್ಪ ಪೊಲೀಸರು ಬಂದೋಬಸ್ತ್ ವಹಿಸಿದ್ದರು. ಮಧ್ಯಾಹ್ನ 1 ಗಂಟೆಗೆ ಡಿವೈಎಸ್ಪಿ ಶೈಲೆಂದ್ರ, ಕುಶಾಲನನರ ವೃತ್ತ ನಿರೀಕ್ಷಕ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಆಹಾರ ಸಾಮಗ್ರಿಗಳನ್ನು ಮುಗಿಬಿದ್ದು ಗುಂಪು ಗುಂಪಾಗಿ ಖರೀದಿಸುತ್ತಿದ್ದಾಗ ಅಂತರ ಕಾಯ್ದುಕೊಳ್ಳಬೇಕೆಂದು ಹಾಗೂ ಮಾಸ್ಕ್ ಧರಿಸಿ ಹೊರಬರಬೇಕೆಂದು ತಾಕೀತು ಮಾಡಿದರು.
ಅಂಗಡಿ ತರಕಾರಿಗಳನ್ನು ಕೊಳ್ಳುವಾಗ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸಬಹುದು ಆದರೆ ಮಾಸ್ಕ್ ಎಲ್ಲಿಂದ ತರುವುದು ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿ ಸಿಕ್ಕಿದಷ್ಟು ವಸ್ತುಗಳನ್ನು ಖರೀದಿಸಿ ಪೊಲೀಸರಿಗೆ ಇಡೀ ಶಾಪ ಹಾಕುತ್ತಲೇ ಮನೆಗೆ ತೆರಳುತ್ತಿದ್ದುದು ಕಂಡುಬಂತು. ಯಾವುದೇ ದಿನಸಿ ಅಂಗಡಿಯಲ್ಲಿ ಕೋಳಿಮೊಟ್ಟೆಯೂ ಲಭ್ಯವಾಗದೇ ಮಾಂಸಹಾರ ಪ್ರಿಯರು ಸಪ್ಪೆ ಮೋರೆಯೊಂದಿಗೆ ಹಿಂತೆರಳಿದರು. ಕೋಳಿ, ಕುರಿ, ಹಂದಿ, ಮೀನು ಮಾರಾಟ ನಿಷೇಧಿಸಲಾಗಿದ್ದು ಕೋಳಿ ಮೊಟ್ಟೆಯಾದರೂ ಸಿಗಬಹುದೆಂದು ಗ್ರಾಹಕರು ಅಂಗಡಿಗೆ ಮುಗಿಬಿದ್ದಿದ್ದರು. ಈತನ್ಮಧ್ಯೆ ತರಕಾರಿ, ಟೋಮೊಟೊ, ಈರುಳ್ಳಿ, ಅಲೂಗೆಡ್ಡೆ, ಕಾಳು ಪದಾರ್ಥಗಳ ಬೆಲೆಯೂ ಗಗನಕ್ಕೇರಿತ್ತು.
ಸಾಮಗ್ರಿ ಕೊಂಡ್ಯೊಯ್ಯಲು 6 ರಿಂದ ಮದ್ಯಾಹ್ನ 12 ಗಂಟೆಯವರೆಗೆ ಅವಕಾಶ ಕಲ್ಪಿಸಿದ್ದರಿಂದ ಜನತೆ ಇಂದು ಮುಗಿಬಿದಿದ್ದು ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಿದ್ದುದು ಕಂಡುಬಂತು.
ಸುಂಟಿಕೊಪ್ಪ ಬಸ್ ನಿಲ್ದಾಣದ ಬಳಿ ಕೋಳಿ ಅಂಗಡಿಯಲ್ಲಿ ತರಕಾರಿ ಅಂಗಡಿ ತಲೆ ಎತ್ತಿದ್ದು ಗ್ರಾಹಕರು ತರಕಾರಿ ಖರೀದಿಸಿದರು.
ದಿನಸಿ ಅಂಗಡಿಗಳಲ್ಲಿ ಅಲ್ಲದೆ ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ, ಕೆದಕಲ್, ಕಂಬಿಬಾಣೆ, ನಾಕೂರು, ಕಲ್ಲೂರು ಹೊಸಕೋಟೆ ಇನ್ನಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ದಿನಸಿ ಕಾಳು, ಪದಾರ್ಥಗಳನ್ನು ಮಾರಾಟ ಮಾಡಲಾಯಿತು.
ಸುಂಟಿಕೊಪ್ಪದ ಜನತೆ ಗ್ಯಾಸ್ ಸಿಲಿಂಡರ್ಗಾಗಿ ಬದಿಯಲ್ಲಿ ಕಾದು ನಿಂತಿದ್ದ ದೃಶ್ಯ ಕಂಡುಬಂತು,
ಸುಂಟಿಕೊಪ್ಪದ ದಿನಸಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳು ಜನರ ಬೇಡಿಕೆಯಿಂದ ಖಾಲಿಯಾಗುತ್ತಿದ್ದು, ನೆರೆಯ ಜಿಲ್ಲೆ ಮೈಸೂರಿನಿಂದ ಆಹಾರ ಪದಾರ್ಥಗಳನ್ನು ಸಾಗಿಸಲು ಅಂಗಡಿ ಮಾಲೀಕರಿಗೆ ಪಾಸ್ ವಿತರಿಸಬೇಕೆಂದು ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್ ಕಂದಾಯ ಪರಿವೀಕ್ಷಕ ಶಿವಪ್ಪ ಹಾಗೂ ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಠಾಣಾಧಿಕಾರಿ ತಿಮ್ಮಪ್ಪ ಅವರುಗಳಿಗೆ ಮನವಿ ಸಲ್ಲಿಸಿದರು.
ಸುಂಟಿಕೊಪ್ಪ ಅಸುಪಾಸಿನ ಕಾಫಿ ಕಂಪನಿ ತೋಟ ಹಾಗೂ ಇತರೆ ಕಾಫಿ ಬೆಳೆಗಾರರು ಕಾರ್ಮಿಕರನ್ನು ವಾಹನದಲ್ಲಿ ತೋಟದ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ, ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕೆಂದು ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನೀಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶನಿವಾರಸಂತೆ: ಶನಿವಾರಸಂತೆ ಪಟ್ಟಣದಲ್ಲಿ ಇಂದು ದಿನಸಿ ಅಂಗಡಿ, ಕ್ಯಾಂಟೀನ್, ಬೇಕರಿ, ತರಕಾರಿ ಅಂಗಡಿ, ಮಾಂಸ ಮಾರಾಟ ಅಂಗಡಿಗಳಲ್ಲಿ ಬೆಳಿಗ್ಗೆ 8 ಗಂಟೆಗೆ ವರ್ತಕರು ಅಂಗಡಿ ಮುಂಗಟ್ಟುಗಳ ಬಾಗಿಲನ್ನು ತೆರೆದು ಗ್ರಾಹಕರು ದಿನಸಿ, ತರಕಾರಿ, ಹೂವು, ಹಣ್ಣುಹಂಪಲು ಕೊಳ್ಳಲು ಮುಗಿಬಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಪಟ್ಟಣ ಎಂದಿನಂತೆ ಜನಜಂಗುಳಿಯಿಂದ ಕೂಡಿತ್ತು. ವಾಹನಗಳ ಓಡಾಟದಿಂದ ಜನಜಂಗುಳಿಯುಂಟಾಯಿತು.
ಅಂಗಡಿಗಳಲ್ಲಿ ದಿನಸಿ, ತರಕಾರಿ ಮುಂತಾದ ಪದಾರ್ಥಗಳನ್ನು ಕೊಳ್ಳಲು ಒಬ್ಬರ ಮೇಲೆ ಒಬ್ಬರು ಬಿದ್ದು ಖರೀದಿಸುತ್ತಿದ್ದದು ಕಂಡುಬಂತು. ವರ್ತಕರು ಗ್ರಾಹಕರಿಗೆ ಸರದಿಯಲ್ಲಿ ನಿಂತುಕೊಳ್ಳುವಂತೆ ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೆಲವು ಗ್ರಾಹಕರು ಒಂದು ವಾರಗಳಿಗೆಗಾಗುವಷ್ಟು ಆಹಾರ ಪದಾರ್ಥ ಮತ್ತು ದಿನ ನಿತ್ಯ ಸಾಮಗ್ರಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ವಿಧಿಯಿಲ್ಲದೆ ಗ್ರಾಹಕರು ಕೊಳ್ಳುತ್ತಿದ್ದರು.
ತರಕಾರಿ ಕೆಜಿಗೆ 10 ರಿಂದ 20 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. 15 ರೂ.ಗೆ ಮಾರಾಟ ಮಾಡುತ್ತಿದ್ದ ಟೊಮೆಟೋ 40 ರೂ.ಗೆ ಮಾರಾಟ ಮಾಡುತ್ತಿದ್ದರು. 35 ರೂ.ಗೆ ಮಾರುತ್ತಿದ್ದ ಬೀನ್ಸ್, ಬದನೆಕಾಯಿ, ಕ್ಯಾರೆಟ್ ಮುಂತಾದ ತರಕಾರಿಯನ್ನು 45 ರೂ. ಮಾರಾಟ ಮಾಡುತ್ತಿದ್ದರು.
ಔಷಧಿ ಅಂಗಡಿಗಳಲ್ಲೂ ಸಹ ಗ್ರಾಹಕರು ಔಷಧಿ, ಮಾತ್ರೆ ಕೊಳ್ಳಲು ಮುಗಿ ಬೀಳುತ್ತಿದ್ದರು. ಅಂಗಡಿಗಳಲ್ಲಿ ನೂಕುನುಗ್ಗಲುಂಟಾಯಿತು. ಪೊಲೀಸ್ ಸಿಬ್ಬಂದಿ ಇಲ್ಲದ ಹಿನ್ನೆಲೆ ಗ್ರಾ.ಪಂ. ಪಿಡಿಒ ಮತ್ತು ಸಿಬ್ಬಂದಿ ಗ್ರಾಹಕರನ್ನು ಸರದಿ ಸಾಲಿನಲ್ಲಿ ನಿಂತುಕೊಳ್ಳುವಂತೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಮಧ್ಯಾಹ್ನ 12 ಗಂಟೆ ಮೇಲೆ ಜನಜಂಗುಳಿ ಕಮ್ಮಿಯಾಯಿತು. ಕುರಿ ಮಾಂಸ ಸಾಧಾರಣ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಗುಡುಗಳಲೆ ಜಂಕ್ಷನ್ ಜನಜಂಗುಳಿಯಿಂದ ಕೂಡಿತ್ತು. ದಿನಸಿ, ತರಕಾರಿ, ಹಣ್ಣು ಹಂಪಲು ಕೊಳ್ಳಲು ಜನರು ಮುಗಿಬೀಳುತ್ತಿದ್ದರು. ಗ್ರಾಹಕರು ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿಕೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ಜನಜಂಗುಳಿ ತಿಳಿಯಾಯಿತು.
- ವಿಜಯ್ ಹಾನಗಲ್, ಸಿಂಚು, ವಿನ್ಸೆಂಟ್, ರಾಜು ರೈ, ನರೇಶ್ಚಂದ್ರ