ಸಿದ್ದಾಪುರ, ಮಾ. 24: ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕೊರೊನಾ ಸೋಂಕು ಹೊಂದಿರುವ ದಂಪತಿಗಳಿಬ್ಬರು ಉತ್ತರಪ್ರದೇಶದಿಂದ ಬಂದಿರುವುದಾಗಿ, ಅವರು ತೀವ್ರ ಅಸ್ವಸ್ಥರಾಗಿದ್ದಾರೆ, ವೈದ್ಯಕೀಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಬೇಕೆಂಬ ಆತಂಕಕಾರಿ ಆಡಿಯೋ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಕೊರೊನಾ ವೈರಸ್ ಹರಡದಂತೆ ರಾಜ್ಯ ಸರ್ಕಾರದ ಆದೇಶದಂತೆ ಇಂದು ಕೊಡಗು ಲಾಕ್‍ಡೌನ್ ಆಗಿತ್ತು. ಈ ಹಿನ್ನೆಲೆ ನೆಲ್ಲಿಹುದಿಕೇರಿ ಗ್ರಾಮವು ಕೂಡ ಸಂಪೂರ್ಣ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಜನರ ಓಡಾಟವಿಲ್ಲದೆ ಇಡೀ ನಗರವೇ ಸ್ತಬ್ಧವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳು ಹರಿದಾಡಿರುವುದನ್ನು ಕಂಡ ವೈದ್ಯಾಧಿಕಾರಿಗಳು ಸ್ಥಳಕ್ಕೆ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯನ್ನು ಕಳುಹಿಸಿದರು. ಸಂಶಯಕ್ಕೊಳಗಾದ ರೋಗಿಯ ಆರೋಗ್ಯವನ್ನು ವಿಚಾರಿಸಿದ ಆರೋಗ್ಯ ಇಲಾಖಾ ಸಿಬ್ಬಂದಿಗಳು ತಪಾಸಣೆ ನಡೆಸಿ ದಂಪತಿಗಳಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಾರದ ಹಿನ್ನೆಲೆ ಅವರಿಗೆ ಅವಶ್ಯಕ ಮುಂಜಾಗ್ರತಾ ಕ್ರಮ ಹಾಗೂ ಸಲಹೆಗಳನ್ನು ನೀಡಿದರು.