ಕಣಿವೆ, ಮಾ. 24: ನಿಸರ್ಗವೇ ಹಾಗೆ, ತನಗೆ ಮಾನವನಿಂದ ಯಾವುದೇ ಸಮಸ್ಯೆ ಬಾಧಿಸಿದರೂ ಕೂಡ ಅದು ಅಂಜುವುದೂ ಇಲ್ಲ. ಅಳುಕುವುದೂ ಇಲ್ಲ. ಅಷ್ಟೇ ಏಕೆ ಬಾಡುವುದೂ ಇಲ್ಲ. ಪ್ರತಿ ವರ್ಷದ ವಸಂತ ಕಾಲದಲ್ಲಿ ಹಳೆಯ ಎಲೆಗಳನ್ನು ತನ್ನ ಕೆಳಗೆ ಚೆಲ್ಲಿಕೊಂಡು ತನಗೆ ಬೇಕಾದ ಸಾವಯವ ಗೊಬ್ಬರಕ್ಕೆ ಅನುವು ಮಾಡಿಕೊಳ್ಳುತ್ತದೆ. ನವಿರಾದ ಹಸಿರುಡುಗೆ ತೊಟ್ಟು ತನಗೆ ಕೆಡುಕು ಉಂಟು ಮಾಡಿದ ಅದೇ ಮನುಷ್ಯ ಸಂಕುಲಕ್ಕೆ ಶುದ್ಧ ಆಮ್ಲಜನಕವನ್ನು ನೀಡುತ್ತದೆ. ಅದನ್ನೇ ಹೇಳುವುದು ಸೃಷ್ಟಿಯ ವಿಶೇಷತೆ ಎಂದು.
ಇದೀಗ ಆರಂಭವಾಗಿ ರುವ ವಸಂತ ಋತುವಿನ ಈ ಸಮಯದಲ್ಲಿ ಸೃಷ್ಟಿಯಂತೆಯೇ ಮನುಷ್ಯನ ದೃಷ್ಟಿಯೂ ಬದಲಾಗಬೇಕಿತ್ತು. ಆದರೆ ಈ ಬಾರಿಯ ವಸಂತ ಕಾಲ ಮನುಷ್ಯ ಸಂಕುಲಕ್ಕೆ ಏಕೋ ಕೆಡುಕಿನ ಕಾಲವಾಗಿ ಮಾರ್ಪಟ್ಟಿದೆ. ಅದು ಸೃಷ್ಟಿಯ ತಪ್ಪಲ್ಲ. ಆ ಸೃಷ್ಟಿಯನ್ನು ವಿಷಮಯ ಮಾಡಿದ ಮನುಜನ ದೃಷ್ಟಿಯದು. ಆ ದೇವರು ಈ ಸುಂದರ ಭೂಮಿಯ ಮೇಲೆ ಮನುಷ್ಯ ಸೇರಿದಂತೆ ಇತರ ಜೀವ ಕೋಟಿಗಳಿಗೆಂದು ನೀರು, ಗಾಳಿ, ದವಸ ಧಾನ್ಯಗಳನ್ನು ಕೊಟ್ಟ. ದೇವರು ಕೊಟ್ಟಂತಹ ನೀರು, ಗಾಳಿ ಮತ್ತು ಆಹಾರವನ್ನು ಮನುಷ್ಯನ ಹೊರತಾದ ಇತರ ಜೀವ ಸಂಕುಲಗಳು ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಿಕೊಂಡು ದೇವರು ನಿರ್ಮಿತ ಈ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಆದರೆ ಮಾನವ....? ತನ್ನ ದುರಾಸೆ ಹಾಗೂ ದುರಹಂಕಾರಗಳಿಂದ ಪ್ರಕೃತಿಯ ಮೇಲೆ ಮಾಡಿದ ಮತ್ತು ಮಾಡುತ್ತಲೇ ಇರುವ ಕೆಡುಕುಗಳಿಂದಾಗಿ ಇಂದು ಪಡಬಾರದ ಸಂಕಷ್ಟಗಳನ್ನು ತನ್ನ ಮೈಮೇಲೆ ಕೆಡವಿಕೊಂಡಿದ್ದಾನೆ. ಪ್ರತಿ ಯುಗಾದಿಯ ಈ ವಸಂತದಲ್ಲಿ ಹಸಿರುಡುಗೆ ತೊಟ್ಟ ನಿಸರ್ಗ ಮಾತೆಯ ಎದುರು ತಾನೂ ಮತ್ತು ತನ್ನ ಪರಿವಾರ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಬೇಕಿತ್ತು. ಆದರೆ ಈ ಬಾರಿ ಅದಾಗುತ್ತಿಲ್ಲ. ಮುನಿದ ಪ್ರಕೃತಿ ಮಾತೆ ಆಗಿಂದಾಗ್ಗೆ ಮನುಷ್ಯನಿಗೆ ನೀಡುತ್ತಿರುವ ಈ ಬಾರಿಯ ಕೊರೊನಾದ ಎಚ್ಚರಿಕೆಗೆ ಹೆದರಿ ಮನೆಯೊಳಗೆ ಕೂರುವಂತಾಗಿದೆ. ಪರಿಸರವನ್ನು ಸಂರಕ್ಷಿಸಿ, ಗೌರವಿಸಿದ್ದರೆ ಇಂತಹ ಭಯಾನಕವಾದ ಮಾರಣಾಂತಿಕವಾದ ವಿಪತ್ತುಗಳಿಗೆ ಅವಕಾಶವೇ ಇರುತ್ತಿರಲಿಲ್ಲವೇನೋ....!
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ. ಸುನಾಮಿ, ಜಲಪ್ರಳಯಗಳಂತಹ ಘೋರ ಪರಿಣಾಮಗಳ ಬಳಿಕ ಇದೀಗ ಗಾಳಿಯಲ್ಲಿ ಹರಡುವ ಮಾರಕ ವೈರಸ್ನಂತಹ ಸಾವಿನ ಪರಿಸ್ಥಿತಿಯನ್ನು ಮನುಷ್ಯ ಎದುರಿಸುವಂತೆ ಆಗಿದೆಯಲ್ಲಾ....! ಮನುಷ್ಯರಾದ ನಾವು ನಮ್ಮ ಸ್ವಾರ್ಥಕ್ಕೆ ಭೂಮಿಯ ಗರ್ಭವನ್ನು ಬೇಧಿಸಿ ಅಂತರ್ಜಲವನ್ನು ಅಗೆದಗೆದು ಹೊರತೆಗೆದು ಭೂಮಿ ತಾಯಿಯನ್ನು ಬಂಜೆ ಮಾಡ ಹೊರಟೆವಲ್ಲಾ....? ಪರಿಶುದ್ಧ ಪರಿಸರವನ್ನು ಕೊಟ್ಟ ಭೂಮಿಯೊಡಲಿನಲ್ಲಿ ಬೆಳೆದು ನಿಂತ ಗಿಡ ಮರಗಳನ್ನು ಕಡಿದುರುಳಿಸಿದೆವಲ್ಲಾ....! ಉತ್ತಮ ಆರೋಗ್ಯಕ್ಕೆ ಬೇಕಾದ ದವಸ ಧಾನ್ಯಗಳನ್ನು ಬೆಳೆಯುವುದನ್ನು ಬಿಟ್ಟು ಭೂಮಿಯ ಒಡಲಿಗೆ ನಿತ್ಯವೂ ವಿಷ ಸುರಿದು, ನೀರನ್ನು ಖಾಲಿ ಮಾಡಿ ಹಣದ ಬೆಳೆಯಾದ ಶುಂಠಿ ಬೆಳೆಯನ್ನು ಬೆಳೆಯಲು ಹೊರಟೆವಲ್ಲಾ....!
ಹೀಗೆ ನಾವುಗಳು ಮಾಡಿದ್ದು ಮತ್ತು ಮಾಡುತ್ತಲೇ ಇರುವುದು ಒಂದೋ... ಎರಡೋ...? ನಾವು ಮಾಡಿದ್ದನ್ನು ನಾವು ಅನುಭವಿಸಲೇ ಬೇಕಲ್ಲಾ.... ಅದಕ್ಕೆ ಪ್ರಕೃತಿ ಮುನಿದಿದೆ. ಇನ್ನಾದರೂ ನಾವುಗಳು ಎಚ್ಚೆತ್ತುಕೊಳ್ಳೋಣ. ನಮ್ಮ ಮುಂದಿನ ಪೀಳಿಗೆಗೆ ಮುಂದಾಗುವ ದುಷ್ಪರಿಣಾಮಗಳನ್ನು ತಡೆಯಲು ಮತ್ತು ಇಂದು ನಮ್ಮೆದುರಿಗಿರುವ ಸವಾಲನ್ನು ಎದುರಿಸಲು ಪರಿಸರ ರಕ್ಷಣೆಯಿಂದ ಮಾತ್ರ ಸನ್ನದ್ಧರಾಗದ ಹೊರತು ಅನ್ಯ ಮಾರ್ಗವಿಲ್ಲ. ಅಂದು ಬಸವಣ್ಣ ಹೇಳಿದ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನವನ್ನು ಇಂದಿನ ಪರಿಸ್ಥಿತಿಗೆ ಹೋಲಿಸಿ, ‘ಮರಕಡಿಯಬೇಡ, ನೀರು ಹಾಳುಮಾಡಬೇಡ, ಗಾಳಿ ಮಲಿನ ಮಾಡಬೇಡ, ಆಹಾರ ವಿಷಮಯ ಬೇಡ, ಕೆಮ್ಮಬೇಡ, ಸೀನಬೇಡ, ಅನ್ಯರಿಗೆ ಉಸಿರು ಬಿಡಬೇಡ, ಗುಂಪು ಕೂಡಬೇಡ, ಮುಸುಕು ಧರಿಸದೇ ಇರಬೇಡ, ಕಣ್ಣು, ಮೂಗು ಮುಟ್ಟುತಲೇ ಇರಬೇಡ, ಕೈ ತೊಳೆವುದು ಮರಿಬೇಡ, ಇದೇ ಕೊರೊನಾ ಬಹಿರಂಗ ಶುದ್ದಿ, ಇದೇ ಕೊರೊನಾ ಅಂತರಂಗ ಶುದ್ದಿ, ಇದೇ ಕೊರೊನಾ ಓಡಿಸುವ ಪರಿ...’
- ಕೆ.ಎಸ್. ಮೂರ್ತಿ