ಮಡಿಕೇರಿ, ಮಾ. 24: ಕೊರೊನಾ ಆತಂಕದಿಂದ ಉಂಟಾಗಿರುವ ಭೀತಿಯ ಹಾಗೂ ಬಿಸಿಯ ವಾತಾವರಣದ ನಡುವೆ ಇಂದು ಅಪರಾಹ್ನ ಕೆಲವೆಡೆಗಳಲ್ಲಿ ಮಳೆಯ ಸಿಂಚನವಾಗಿದೆ. ನಾಲ್ಕುನಾಡು ವ್ಯಾಪ್ತಿಯ ನಾಪೋಕ್ಲು ಸುತ್ತಮುತ್ತಲಿನಲ್ಲಿ ಸ್ವಲ್ಪಮಟ್ಟಿಗೆ ಬಿರುಸಿನ ಮಳೆ ಸುರಿದಿದ್ದರೆ ಇತ್ತ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲೂ ಅಪರಾಹ್ನ ಮೋಡ ಕವಿದ ವಾತಾವರಣ ಕಂಡುಬಂದು ಸುಮಾರು 3.45ರ ವೇಳೆಗೆ ಸ್ವಲ್ಪ ಪ್ರಮಾಣದಲ್ಲಿ ಮಳೆ ಸುರಿದಿದೆ.

ಕೊರೊನಾದ ಆತಂಕ ಒಂದೆಡೆಯಿದ್ದರೂ ಮಳೆಯ ಅಗತ್ಯತೆ ಇರುವ ಈ ಸಂದರ್ಭದಲ್ಲಿ ಸುರಿದ ಮಳೆ ಕೃಷಿಕರು-ಬೆಳೆಗಾರರಿಗೆ ದುಗುಡದ ನಡುವೆಯೂ ಒಂದಷ್ಟು ಸಮಾಧಾನ ಮೂಡಿಸಿದೆ.

ನಾಪೋಕ್ಲು, ಮಡಿಕೇರಿ, ಸೋಮವಾರಪೇಟೆ, ತೊರೆನೂರು, ಕುಶಾಲನಗರ, ಸಿದ್ದಾಪುರ ಹೊರತುಪಡಿಸಿದರೆ ಇನ್ನೆಲ್ಲೂ ಮಳೆಯಾಗಿರುವ ಕುರಿತು ವರದಿಯಾಗಿಲ್ಲ. ನಾಪೋಕ್ಲು, ಕಿರುಂದಾಡು, ಕೈಕಾಡು, ಬೇತು ವ್ಯಾಪ್ತಿಯಲ್ಲಿ ಸುಮಾರು 1 ಇಂಚು ಮಳೆಯಾಗಿರುವುದಾಗಿ ಡಾ. ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.

ಸೋಮವಾರಪೇಟೆ: ಇಂದು ಸಂಜೆ ಸೋಮವಾರಪೇಟೆ ಪಟ್ಟಣ ಸುತ್ತಮುತ್ತ ತುಂತುರು ಮಳೆ ಸುರಿಯಿತು. ಆಗಸದಲ್ಲಿ ದಟ್ಟ ಮೋಡ, ಗುಡುಗುವ ಮೂಲಕ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದರೂ ಸಹ, ತುಂತುರು ಮಳೆ ಸುರಿದು ಮಾಯವಾಯಿತು.

ಎರಡರಿಂದ ಮೂರು ಇಂಚಿನಷ್ಟು ಮಳೆ ಸುರಿದರೆ ತೋಟಕ್ಕೆ ಉತ್ತಮವಾಗುತ್ತಿತ್ತು. ಈಗಾಗಲೇ ಬಿರು ಬಿಸಿಲಿಗೆ ಕಾಫಿ ಗಿಡಗಳು ಒಣಗುತ್ತಿದ್ದು, ಉತ್ತಮ ಮಳೆಯಾಗಿದ್ದರೆ ಕಾಫಿ ಗಿಡಗಳಲ್ಲಿ ಮೊಗ್ಗು ಅರಳಲು ಸಹಕಾರಿಯಾಗುತ್ತಿತ್ತು. ಭೂಮಿಯಲ್ಲಿ ತೇವಾಂಶವೂ ಇರುತ್ತಿತ್ತು. ಕಡಿಮೆ ಮಳೆ ಬಿದ್ದು ಕಾಫಿ ಮೊಗ್ಗು ಅರಳಿದರೆ ಅನಿವಾರ್ಯವಾಗಿ ಸ್ಪ್ರಿಂಕ್ಲರ್ ಮಾಡಬೇಕಾಗುತ್ತದೆ. ನೀರಿನ ವ್ಯವಸ್ಥೆ ಇಲ್ಲದ ಬೆಳೆಗಾರರು ಮತ್ತೆ ಆಗಸದತ್ತ ಮುಖಮಾಡಬೇಕಾಗುತ್ತದೆ ಎಂದು ಕೃಷಿಕ ಚೌಡ್ಲು ಗ್ರಾಮದ ತಮ್ಮಯ್ಯ ಅಭಿಪ್ರಾಯಿಸಿದರು.

ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ

ತೊರೆನೂರು ಗ್ರಾಮದಲ್ಲಿ ಇಂದು ಸಂಜೆ ಬಿದ್ದ ಭಾರೀ ಗಾಳಿ-ಮಳೆಗೆ ತೊರೆನೂರು ಗ್ರಾಮದಲ್ಲಿ ಹತ್ತಕ್ಕೂ ಅಧಿಕ ಮನೆಗಳ ಹೆಂಚು, ಸಿಮೆಂಟ್ ಶೀಟ್‍ಗಳು ಗಾಳಿಗೆ ಹಾರಲ್ಪಟ್ಟು ಭಾರೀ ನಷ್ಟವಾಗಿದೆ.

ತೊರೆನೂರು ಸಹಕಾರ ಸಂಘದ ಸಮೀಪದಲ್ಲಿರುವ ಎಂಟು ಮನೆಗಳು ಹಾಗೂ ಪಕ್ಕದ ಬೀದಿಯಲ್ಲಿನ 2 ಮನೆಗಳು ಹಾನಿಗೊಂಡಿವೆ.

ಈ ಗ್ರಾಮದ ನಾಗರಾಜ ಟಿ.ಟಿ., ಹನುಮಂತಪ್ಪ ಕುಮಾರ, ಟಿ.ಕೆ. ಪಾಂಡುರಂಗ, ಪ್ರಸನ್ನ, ಕಿರಣ ಎಂಬರು ಸೇರಿದಂತೆ ಅನೇಕ ಮಂದಿಯ ಮನೆಗಳು ಹಾನಿಗೊಳಗಾಗಿವೆ.

ಕುಶಾಲನಗರದಲ್ಲಿ ಸಂಜೆ ವೇಳೆ ಭಾರೀ ಗಾಳಿಯೊಂದಿಗೆ ಮಳೆಯಾಯಿತು. ಈ ಸಂದರ್ಭ ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಪೊಲೀಸ್ ತಪಾಸಣಾ ಕೇಂದ್ರ ಗಾಳಿಗೆ ಹಾರಿಹೋದ ಘಟನೆ ನಡೆಯಿತು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಗುಡುಗು ಮಿಶ್ರಿತ ಮಳೆಯಾದ ಬಗ್ಗೆ ವರದಿಯಾಗಿದೆ.