ಏನಿದು ವಿವೇಕವಿಲ್ಲದ ನಿಷ್ಠೆ? ನಿಷ್ಠೆ ಎಂದರೆ ಶ್ರದ್ಧೆ. ಶ್ರದ್ಧೆ ಇದೊಂದು ಸದ್ಗುಣ. ಆದರೆ ಶ್ರದ್ಧೆಯ ಫಲಪ್ರಾಪ್ತಿಗೆ ವಿವೇಕದ ಅಗತ್ಯವಿದೆ. ವಿದ್ಯಾರ್ಥಿ ಗಳಿಗೆ ಓದಿನಲ್ಲಿ ಶ್ರದ್ಧೆಯಿರಬೇಕು ಎಂಬುದು ಮೊದಲ ಅಪೇಕ್ಷೆ. ಆದರೆ ಶ್ರದ್ಧೆಯಿಂದ ಓದಿದರೂ ಆತ ಓದಿದ್ದನ್ನು ಅರ್ಥಮಾಡಿಕೊಳ್ಳದಿದ್ದರೆ ಅವನಿಗೆ ಸರಿಯಾದ ಜ್ಞಾನ ದೊರೆಯಲಾರದು. ಅಂದರೆ ವಿಷಯವನ್ನು ಅರ್ಥಮಾಡಿ ಕೊಳ್ಳುವುದು ಆತನ ಬುದ್ಧಿಶಕ್ತಿಗೆ ಸಂಬಂಧಿಸಿದ್ದು. ಓದಿದರೆ ಸಾಲದು; ಓದಿಗೆ ಸಮಯ ನೀಡಿದರೆ ಸಾಲದು, ಓದನ್ನು ಅರಿವಾಗಿ ಗಳಿಸಿಕೊಳ್ಳಬೇಕು. ಮುಂದೆ ಆತನ ಅರಿವು ಉಪಯೋಗಕ್ಕೆ ಬರಬೇಕು. ಆಗ ಆತನ ಶ್ರದ್ಧೆಯು ಫಲಕೊಟ್ಟಂತೆ. ನಮ್ಮ ಹಳ್ಳಿಗಳಲ್ಲಿ ಒಂದು ಮಾತಿದೆ-ಹೋದ ಪುಟ್ಟ, ಬಂದ ಪುಟ್ಟ ಅಂತ. ಅಂದರೆ ಯಾವುದಾದರೂ ಒಂದು ಸ್ಥಳಕ್ಕೆ ಹೋಗಿ ಬಾ ಎಂದರೆ ಹೇಳಿದಂತೆ ಹೋಗಿ ಬರುವುದು ಶ್ರದ್ಧೆಯಾದರೆ ಹೋದ ಕೆಲಸವನ್ನು ಮಾಡಿ ಮುಗಿಸಿಕೊಂಡು ಬಂದು ವರದಿ ಒಪ್ಪಿಸುವುದು ವಿವೇಕ ವಾಗುತ್ತದೆ. ವಿವೇಕವಿಲ್ಲದ ನಿಷ್ಠೆ ವ್ಯಾವಹಾರಿಕವಾಗಿ ಅಷ್ಟಾಗಿ ಉಪಯೋಗವಿಲ್ಲದ ಭಕ್ತಿ. ಆ ಭಕ್ತಿ ಭಗವಂತನಿಗೆ ಪ್ರಿಯವಾಗಬಹುದು. ಆದರೆ ಪ್ರತಿಯೊಂದರಲ್ಲೂ ಉಪಯೋಗವನ್ನು ಹುಡುಕುವ ಮಾನವನಿಗೆ ಶ್ರದ್ಧೆಯ ಜೊತೆ ಒಂದು ಸಮಯಪ್ರಜ್ಞೆ- ಸಾಮಾನ್ಯ ಜ್ಞಾನ ಇವು ಹೆಚ್ಚು ಇಷ್ಟವಾಗುತ್ತದೆ.

ಒಬ್ಬ ಸಾಹುಕಾರನಿರುತ್ತಾನೆ ಎಂದಿಟ್ಟುಕೊಳ್ಳಿ. ಅವನಿಗೊಬ್ಬ ನಿಷ್ಠಾವಂತ ಸೇವಕ. ಆದರೆ ಆ ಸೇವಕ ಬಲು ಮುಗ್ಧ. ಮೊದಲ ದಿನ ಸಂಜೆ ಸೇವಕನನ್ನು ಕರೆದು ಸಾಹುಕಾರ ಹೀಗೆ ಹೇಳಿದ, ‘ನಾಳೆ ನಸುಕಿನಲ್ಲೇ ನೀನು ಪಕ್ಕದ ಊರಿಗೆ ಹೋಗಿ ಅಲ್ಲಿರುವ ನನ್ನ ಮಿತ್ರನನ್ನು ಕಂಡು ಬರಬೇಕು’ ಎಂದು. ಮರುದಿನ ಬೆಳಿಗ್ಗೆ ಆತ ಬಂದು ಸಾಹುಕಾರನನ್ನು ಕಂಡು ಪರ ಊರಿನಲ್ಲಿರುವ ಮಿತ್ರನಿಗೆ ತಲುಪಿಸಬೇಕೆಂದಿದ್ದ ಸಂದೇಶವನ್ನೋ, ವಸ್ತುವನ್ನೋ ಕೇಳಿ ಕೊಂಡೊಯ್ಯ ಬೇಕುತಾನೆ? ಆ ನಿಷ್ಠಾವಂತ ಸೇವಕ ಸಂಜೆ ಸಾಹುಕಾರ ಹೇಳಿದಂತೆ ನಸುಕಿನಲ್ಲೇ ಪಕ್ಕದ ಊರಿಗೆ ಹೋಗಿ ಆತನ ಮಿತ್ರ(ಸಾಹುಕಾರ)ನನ್ನು ಕಂಡು ಹಾಗೆಯೇ ಹಿಂದಿರುಗಿ ಬಂದ. ಇದರಿಂದ ಏನು ಪ್ರಯೋಜನ, ಯಾರಿಗೆ ಪ್ರಯೋಜನ? ಕೇವಲ ಸಾಹುಕಾರನನ್ನು ಕಂಡು ಬರಲಿಕ್ಕೆಂದು ಈ ಸಾಹುಕಾರ ತನ್ನ ಸೇವಕನನ್ನು ಪರ ಊರಿಗೆ ಕಳುಹಿಸಿದ್ದನೆ? ಇಲ್ಲ ತಾನೆ? ಏನೋ ಒಂದು ಕೆಲಸವಿತ್ತು. ಆದರೆ ಕೆಲಸವಿಲ್ಲದೆ ಸಾಹುಕಾರ ತನ್ನನ್ನು ಕೇವಲ ತನ್ನ ಮಿತ್ರನನ್ನು ಕಂಡುಬರುವುದಷ್ಟಕ್ಕೇ ಕಳುಹಿಸಲಾರ ಎಂದು ಯೋಚಿಸದಷ್ಟು ಸೇವಕ ಬುದ್ದುವಾಗಿದ್ದ. ಸೇವಕನದು ಭೀಮಭಕ್ತಿ, ಉನ್ನತವಾದ ನಿಷ್ಠೆ. ಆದರೇನಂತೆ ಕೆಲಸಕ್ಕೆ ಬಾರದ್ದು, ವ್ಯವಹಾರದಲ್ಲಿ ಉಪಯೋಗವಿಲ್ಲದ್ದು.

ವಿವೇಕ ರಹಿತವಾದ ನಿಷ್ಠೆ ಒಂದು ಅಂಧಾನುಕರಣೆಗೆ ದಾರಿ ಮಾಡಿಕೊಡುತ್ತದೆ. ಅವರು ನೇತಾರರಿಗೆ ಹಿಂಬಾಲಕರಿದ್ದಂತೆ. ಅವರು ತಮ್ಮ ನಿಷ್ಠೆಯನ್ನು ತೋರಿಸುವ ಭರದಲ್ಲಿ ಏನೆಲ್ಲ ಅನಾಹುತವನ್ನೂ ಸೃಷ್ಟಿಸಬಲ್ಲರು ಎಂಬುದು ಇತ್ತೀಚಿಗೆ ನಡೆದ ವಿದ್ಯಮಾನಗಳಿಂದ ಎಲ್ಲರೂ ಬಲ್ಲರು. ಬಹುತೇಕ ಹಿಂಬಾಲಕರು ತಮ್ಮ ನೇತಾರನನ್ನು ಕುರುಡಾಗಿ ಅನುಸರಿಸುತ್ತಾರೆ. ಅವರು ತಮ್ಮ ನೇತಾರ ಮಾಡಿದ್ದನ್ನೆಲ್ಲ ಒಪ್ಪಿಕೊಳ್ಳುತ್ತಾರೆ, ಬೆಂಬಲಿಸುತ್ತಾರೆ. ಅಲ್ಲಿ ಯಾವುದನ್ನು ಬೆಂಬಲಿಸಬೇಕು, ಏಕೆ ಬೆಂಬಲಿಸಬೇಕು ತಮ್ಮ ಬೆಂಬಲದಿಂದ ಉಪಯೋಗವೆಷ್ಟು, ಉಪದ್ರವವೆಷ್ಟು ಎಂಬುದನ್ನೆಲ್ಲ ಯೋಚಿಸುವುದಿಲ್ಲ. ಇದನ್ನು ಕುರುಡು ನಿಷ್ಠೆ ಎನ್ನುತ್ತಾರೆ. ಸಾಮಾನ್ಯವಾಗಿ ಗುಂಪಿನಲ್ಲಿದ್ದಾಗ ವ್ಯಕ್ತಿಯ ವಿವೇಕ ಅತಿ ಹೆಚ್ಚಿನ ಅಪಾಯದಲ್ಲಿರುತ್ತದೆ. ಅಂದರೆ ಮನುಷ್ಯ ಸಮೂಹಸನ್ನಿಗೆ ಒಳಗಾಗಿ ತಮ್ಮನ್ನು ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ.

ಅದೇ ರೀತಿ ಕೆಲವೊಮ್ಮೆ ನೇತಾರರೂ ಕೂಡಾ ತಮ್ಮ ಜನ ಬಲವನ್ನು ಪ್ರದರ್ಶಿಸಲು ಮುಂದಾಗು ತ್ತಾರೆ. ಆ ಸಮಯದಲ್ಲಿ ಬೆಂಬಲಿಸಲು ನಿಂತ ಜನ ಸಮೂಹದಲ್ಲಿ ವಿವೇಕವು ಸಂಪೂರ್ಣ ವಾಗಿ ಕಳೆದು ಹೋಗಿರುತ್ತದೆ. ವೈಯಕ್ತಿಕವಾಗಿ ಒಬ್ಬ ಸಾಹುಕಾರನಿಗೆ ಬುದ್ಧಿಯಿಲ್ಲದ ನಿಷ್ಠಾವಂತನಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೇತಾರರಾದವರಿಗೆ ಹಲವು ಸಂದರ್ಭದಲ್ಲಿ ಬುದ್ಧಿವಂತ ಹಿಂಬಾಲಕರ ಅವಶ್ಯಕತೆ ಇರುವುದಿಲ್ಲ. ಜನ ಬಲವನ್ನು ಮಾಧ್ಯಮದ ಎದುರು ತೋರಿಸ ಬೇಕಷ್ಟೆ! ಆದ್ದರಿಂದಲೇ ಇಂದು ಅನೇಕ ರಾಜಕೀಯ ಹಿನ್ನಲೆಯ ಸಭೆಗಳಿಗೆ ಬಾಡಿಗೆ ಜನರನ್ನು ಕರೆಸಿಕೊಳ್ಳಬೇಕಾಗುತ್ತದೆ. ವಿವೇಕಿಗಳು ಅಂಥಾ ಸಭೆಯಿಂದ ದೂರ ಉಳಿಯುತ್ತಾರೆ. ದಿನಗೂಲಿ ಲೆಕ್ಕದಲ್ಲಿ ಬಂದ ಜನರಿಗೆ ತಾವು ಯಾರನ್ನು ಏನನ್ನು ಬೆಂಬಲಿಸಲು ಬಂದಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ. ಸುಮ್ಮನೆ ಜೈಕಾರ ಅಷ್ಟೆ. ಜೈಕಾರದ ಘೋಷಣೆಯೊಂದಿಗೆ ಪ್ರಾರಂಭ ವಾಗುವ ಮೆರವಣಿಗೆ ತೋಡ್-ಪೆÇೀಡ್‍ಗಳಲ್ಲಿ ಮುಕ್ತಾಯ ವಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿ ಗಳಿಗೆ ಹಾನಿಯುಂಟಾಗುತ್ತದೆ. ಇವರೆಲ್ಲ ಎಷ್ಟು ವಿವೇಕ ಶೂನ್ಯ ರಾಗಿರುತ್ತಾರೆ ಎಂದರೆ ನಿಷ್ಠೆಯನ್ನು ತೋರ್ಪಡಿಸುವ ಭರದಲ್ಲಿ ಮೈಮೇಲೆ ಬೆಂಕಿ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಾರೆ. ಸ್ವಾಮಿ ನಿಷ್ಠೆಯ ಪ್ರದರ್ಶನಕ್ಕೆ ನಿಂತವನು ಪ್ರಾಣ ತ್ಯಾಗಕ್ಕೂ ಮುಂದಾಗುತ್ತಾನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಬ್ಬರಕ್ಕೆ, ಅವಸರಕ್ಕೆ ಅತಿರೇಕಕ್ಕೆ ಜಾಗವಿಲ್ಲ. ಸಾರ್ವಜನಿಕ ಜೀವನದಲ್ಲಿ ವಿವೇಕ ವಿವೇಚನೆ ಸಮಾಧಾನಗಳು ಮುಖ್ಯವಾಗುತ್ತದೆ. ವೈಯಕ್ತಿಕ ಜೀವನವಿರಲಿ, ಸಾರ್ವಜನಿಕ ಜೀವನವಿರಲಿ ನಿಷ್ಠೆ, ಸ್ವಾಮಿ ನಿಷ್ಠೆ, ಸಿದ್ಧಾಂತ ಭಕ್ತಿ ಇವೆಲ್ಲ ಬೇಕು. ಆದರೆ ಇವುಗಳ ಜೊತೆಗೆ ವಿವೇಕವೂ ಸೇರಿಕೊಂಡಿರಬೇಕು. ವಿವೇಕ ರಹಿತವಾದ ನಿಷ್ಠೆ ಕೆಲವೊಮ್ಮೆ ನಿರುಪಯುಕ್ತ, ಕೆಲವೊಮ್ಮೆ ಅಪ ಹಾಸ್ಯಕ್ಕೆ ತುತ್ತಾಗುತ್ತದೆ. ಅಷ್ಟೆ ಅಲ್ಲ ಕೆಲವೊಮ್ಮೆ ಅನಾಹುತಕ್ಕೂ ಆಹ್ವಾನವನ್ನು ಕೊಡುತ್ತದೆ.

- ಗಣೇಶ ಹೆಗಡೆ, ಮಡಿಕೇರಿ.