ಸೋಮವಾರಪೇಟೆ, ಮಾ. 24: ಇತ್ತೀಚೆಗಷ್ಟೇ ವಿದೇಶದಿಂದ ಆಗಮಿಸಿದ ಒಟ್ಟು 20 ಮಂದಿ ಈವರೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿಕೊಂಡು ತಮ್ಮ ಆರೋಗ್ಯವನ್ನು ತಪಾಸಣೆಗೊಳಪಡಿಸಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.

ಕೊರೊನಾ ಸೋಂಕು ಹರಡುವ ಭೀತಿ ಎಲ್ಲೆಡೆಯಿರುವ ಸನ್ನಿವೇಶದಲ್ಲಿ ವಿದೇಶದಿಂದ ಆಗಮಿಸಿರುವವರ ಬಗ್ಗೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಪ್ರತಿ ಮನೆಯ ಮೇಲೂ ನಿಗಾ ವಹಿಸಲು ಪ್ರಯತ್ನಿಸುತ್ತಿದೆ.

ಆರೋಗ್ಯ ಇಲಾಖೆಗೆ ಒಳಪಡುವ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರೊಂದಿಗೆ ಕಂದಾಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ವಿದೇಶದಿಂದ ಆಗಮಿಸಿರುವವರನ್ನು ಗುರುತಿಸಿ ಆಸ್ಪತ್ರೆಗೆ ಕರೆತರಲಾಗುತ್ತಿದೆ.

ಈವರೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ 20 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಎಲ್ಲರ ಆರೋಗ್ಯವೂ ಉತ್ತಮವಾಗಿದೆ. ಕೊರೊನಾಗೆ ಸಂಬಂಧಿಸಿದ ಯಾವದೇ ಲಕ್ಷಣಗಳು ಇಲ್ಲದ್ದರಿಂದ ಅವರುಗಳನ್ನು ಮನೆಗೆ ಕಳುಹಿಸಲಾಗಿದ್ದು, ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ.

ಇದರೊಂದಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಒಟ್ಟು 10 ಬೆಡ್‍ಗಳನ್ನು ಒಳಗೊಂಡ ಕೋವಿಡ್-19 ಕೇರ್ ಸೆಂಟರ್ ತೆರೆಯಲಾಗಿದೆ. ಐಸಿಯುನಲ್ಲಿ 1 ವಿಶೇಷ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ವೆಂಟಿಲೇಟರ್, ಮಾನಿಟರ್ ಸಹಿತ ಈ ವಾರ್ಡ್‍ನ್ನು ಸಿದ್ಧಪಡಿಸಲಾಗಿದೆ. ಜತೆಗೆ 9 ಬೆಡ್‍ಗಳುಳ್ಳ ಮತ್ತೊಂದು ವಾರ್ಡ್‍ನ್ನು ಆಕ್ಷಿಜನ್ ಸಿಲಿಂಡರ್ ಸಹಿತ ಸಿದ್ಧಪಡಿಸಲಾಗಿದೆ.

ಆಸ್ಪತ್ರೆಗೆ ಸಾಮಾನ್ಯ ರೋಗಿಗಳು ಆಗಮಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯ ಶಿವಪ್ರಸಾದ್ ಅವರು ಇಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ, ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು. ಸಾಧಾರಣ ಖಾಯಿಲೆಗಳಿಗೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಯಾರಲ್ಲೂ ಕೊರೊನಾ ಲಕ್ಷಣಗಳು ಇಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.