ಮಡಿಕೇರಿ, ಮಾ. 24: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ಸಂಪರ್ಕ ರಸ್ತೆಯಲ್ಲಿ ಮರಳು ಸಾಗಾಟದ ಭಾರೀ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆ ಹದಗೆಟ್ಟು ನಡೆದಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ರಸ್ತೆಯಲ್ಲಿ ಮರಳು ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸದಿದ್ದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್. ಹರೀಶ್ ಹಾಗೂ ಇತರರು, ಮರಳು ಗಣಿಗಾರಿಕೆ ನಡೆಸುವ ಸ್ಥಳಕ್ಕೆ ವೀರಾಜಪೇಟೆ ತಾಲೂಕಿಗೆ ಸೇರಿದ ಪ್ರದೇಶದಿಂದ ಬರಲು ಅವಕಾಶಗಳಿದ್ದರೂ, ಮರಳು ಗುತ್ತಿಗೆದಾರರು ಪರಂಬು ಪೈಸಾರಿ ರಸ್ತೆಯ ಮೂಲಕ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿಯು ಮರಳು ಸಾಗಾಟದ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುವಂತಿಲ್ಲ ಎಂದು ಫಲಕ ಹಾಕಿದ್ದರೂ, ಅದನ್ನು ಉಲ್ಲಂಘಿಸಿ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಗಣಿ ಇಲಾಖೆಗೆ ದೂರು ನೀಡಲಾಗಿದೆ ಎಂದರು.
ಒಂದು ವೇಳೆ ಈ ರಸ್ತೆಯಲ್ಲಿ ಮರಳು ಸಾಗಾಟವನ್ನು ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ನಿರ್ಬಂಧಿಸದಿದ್ದಲ್ಲಿ ಗ್ರಾಮಸ್ಥರೇ ಮರಳು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ಅವರು, ಮುಂದಾಗುವ ಅನಾಹುತಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೇ ಹೊಣೆಗಾರರಾಗ ಬೇಕಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಪೋತಂಡ್ರ ತೇಜಪ್ರಸಾದ್, ಬಿ.ಕೆ. ಉಮೇಶ್ ಹಾಗೂ ಎಂ.ಎಸ್. ಯೋಗೀಶ್ ಉಪಸ್ಥಿತರಿದ್ದರು.