ಸೋಮವಾರಪೇಟೆ, ಮಾ. 22: ಮುಚ್ಚುವ ಹಂತ ತಲುಪಿರುವ ತಾಲೂಕಿನ ತೋಳೂರುಶೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವ ಸಂಬಂಧ ಚರ್ಚೆಗಳು ನಡೆದು, ಅಂತಿಮವಾಗಿ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರು ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಹೇಳಿದರು.
ತೋಳೂರುಶೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಮಚ್ಚುವ ಹಂತದಲ್ಲಿರುವುದರಿಂದ ಆ ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಸೇರಿ ನೂತನವಾಗಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಿಸಲು ನಿರ್ಧರಿಸಿ ಈಗಾಗಲೆ ದಾಖಲಾತಿ ಸಹ ಆಗಿದೆ ಎಂದು ಶಾಲೆಯಲ್ಲಿ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ರವೀಂದ್ರ ಅವರು ತಿಳಿಸಿದರು.
ನೂತನವಾಗಿ ಎಲ್.ಕೆ.ಜಿ.ಗೆ ಸೇರ್ಪಡೆಗೊಳಿಸಿರುವ ಪೋಷಕರ ಎಲ್ಲಾ ಸಂದೇಹಗಳಿಗೆ ಉತ್ತರಿಸುತ್ತಾ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆಂಗ್ಲಮಾಧ್ಯಮ ಶಾಲೆಯನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳಿಗೆ ಯಾವದೇ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಲಾಗುವದು. ಪೋಷಕರ ಸಹಕಾರವಿದ್ದರೆ ನಗರದ ಶಾಲೆಗಳಿಗಿಂತಲೂ ಉತ್ತಮವಾಗಿ ಗ್ರಾಮೀಣ ಪ್ರದೇಶದಲ್ಲಿಯೇ ವಿದ್ಯಾಭ್ಯಾಸ ದೊರಕಲಿದೆ ಎಂದರು.
ಶಿಕ್ಷಣದ ಗುಣಮಟ್ಟವನ್ನು ಕಾಪಾಡುವತ್ತ ಗಮನಹರಿಸಬೇಕು. ಪ್ರತಿ ಪೋಷಕರು ಸಹ ಶಾಲೆಯ ಬಗ್ಗೆ ಮುತುವರ್ಜಿ ವಹಿಸಿದರೆ ಗ್ರಾಮೀಣ ಭಾಗದಲ್ಲಿರುವ ಈ ಶಾಲೆ ಯಶಸ್ವಿಯಾಗುವದರಲ್ಲಿ ಸಂಶಯವಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ನವಚೇತನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜನ್, ಶಾಲಾ ಮುಖ್ಯ ಶಿಕ್ಷಕಿ ಚಂದ್ರಮ್ಮ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಸರಿತಾ, ಸಂಘದ ಕಾರ್ಯದರ್ಶಿ ರಜಿತ್, ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರುಗಳು, ಶಾಲಾ ಶಿಕ್ಷಕ ವರ್ಗ, ಪೋಷಕರು ಭಾಗವಹಿಸಿದ್ದರು, ಶಿಕ್ಷಕಿ ಲತಾ ಸ್ವಾಗತಿಸಿ, ಕೆಂಪರಾಜು ವಂದಿಸಿದರು.