ಮಡಿಕೇರಿ, ಮಾ. 23: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ, 2017, 2018 ಹಾಗೂ 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಕಟವಾಗಿದ್ದು, ಕೊಡಗು ಮೂಲದ ಮೂವರು ಸಿಬ್ಬಂದಿ ಹಾಗೂ ಕುಶಾಲನಗರ ಠಾಣೆಯ ಸಿಬ್ಬಂದಿಯೋರ್ವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೈಸೂರು ತಾಲೂಕಿನ ನಂಜನಗೂಡು ಅಗ್ನಿಶಾಮಕ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಸೇವೆಯಲ್ಲಿರುವ ಕಕ್ಕಬೆ ಗ್ರಾಮದ ಬೊಳ್ಳನಮಂಡ ಜಿ. ಉತ್ತಪ್ಪ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಮೈಸೂರಿನ ಬನ್ನಿಮಂಟಪ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಸೇವೆಯಲ್ಲಿರುವ ಮುಂಡಂಡ ಜಿ. ಸೋಮಣ್ಣ ಅವರೂ ಕೂಡ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಕಿಗ್ಗಾಲು ಗ್ರಾಮದವರಾಗಿದ್ದಾರೆ. ಹಾಗೆಯೇ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿರುವ ಮೂಲತಃ ಹೊದವಾಡ ಗ್ರಾಮದ ಚೌರೀರ ಭೀಮಯ್ಯ ಅವರೂ ಕೂಡ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಕುಶಾಲನಗರ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕ ಸಿಬ್ಬಂದಿಯಾಗಿರುವ ಚಂದ್ರಹಾಸ ಎಸ್. ಸಾಲ್ಯನ್ ಅವರೂ ಕೂಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2017 ಮತ್ತು 2018ನೇ ಸಾಲಿನಲ್ಲಿ ಪ್ರಶಸ್ತಿಗೆ ಸರ್ಕಾರದಿಂದ ಅನುಮೋದನೆ ದೊರೆಯದ ಕಾರಣ ಆ ಎರಡು ವರ್ಷ ಪದಕ ಘೋಷಣೆಯಾಗಿರಲಿಲ್ಲ. ಹಾಗಾಗಿ ಈ ಬಾರಿ ಒಂದು ವರ್ಷಕ್ಕೆ 25 ಸಿಬ್ಬಂದಿಯಂತೆ ಮೂರು ವರ್ಷಕ್ಕೆ ಒಟ್ಟು 75 ಸಿಬ್ಬಂದಿಯನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಪ್ರಶಸ್ತಿಯು ಚಿನ್ನದ ಪದಕ ಹಾಗೂ ತಲಾ ಐದು ಸಾವಿರ ನಗದನ್ನು ಒಳಗೊಂಡಿದ್ದು, ಏಪ್ರಿಲ್ 20 ರಂದು ನಡೆಯಲಿರುವ ಅಗ್ನಿಶಾಮಕ ದಿನಾಚರಣೆಯ ದಿವಸ ಪದಕ ಪ್ರದಾನ ಮಾಡುವ ನಿರೀಕ್ಷೆ ಇದೆ.