ಮಡಿಕೇರಿ, ಮಾ. 22: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಿದ್ಧತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹಾ ಮಾಹಿತಿ ಪಡೆದರು.
ಗ್ರಾ.ಪಂ. ಚುನಾವಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ 18 ವರ್ಷ ಪೂರ್ಣಗೊಂಡವರ ಹೆಸರು ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಚುನಾವಣೆ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬಾರದು, ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಚುನಾವಣೆ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಗ್ರಾ.ಪಂ. ಚುನಾವಣೆಯ ದಿನಾಂಕ ಪ್ರಕಟವಾಗಲಿದೆ. ಚುನಾವಣೆ ಸಂಬಂಧ ಎಲ್ಲಾ ರೀತಿಯ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ. ಚುನಾವಣೆ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯುವಂತೆ ಅಗತ್ಯ ಕ್ರಮವಹಿಸಿ ಎಂದು ಜಿಲ್ಲೆಯ 3 ತಾಲೂಕುಗಳ ತಹಶೀಲ್ದಾರರಿಗೆ ಸೂಚಿಸಿದರು.
ತಾಲೂಕುವಾರು ಗ್ರಾ.ಪಂ.ಗಳ ಜನಸಂಖ್ಯೆ ಮತ್ತು ಒಟ್ಟು ಸದಸ್ಯ ಸ್ಥಾನಗಳ ಬಗ್ಗೆ ಹಾಗೂ ವರ್ಗವಾರು ಸ್ಥಾನಗಳ ಬಗ್ಗೆ, ಜೊತೆಗೆ ತಾಲೂಕುವಾರು ಒಟ್ಟು ಮತದಾರರ ಸಂಖ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ವೇಳೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ವಲಯದ ಮತಗಟ್ಟೆಗಳನ್ನು ಶೀಘ್ರವಾಗಿ ಗುರುತಿಸಿ. ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಚುನಾವಣಾ ಸಂದರ್ಭ ಸೂಕ್ತವಾದ ಭದ್ರತೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ, ನೇಮಕ ಮತ್ತು ತರಬೇತಿ, ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆಗೆ ಸೂಕ್ತ ಸ್ಥಳ ನಿಗದಿಪಡಿಸುವಿಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸೂಕ್ತ ವರದಿಯನ್ನು 3 ದಿನದ ಒಳಗಾಗಿ ನೀಡುವಂತೆ ತಿಳಿಸಿದರು.
ಇದರೊಂದಿಗೆ ಗ್ರಾ.ಪಂ. ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ವಿವರ, ಗ್ರಾ.ಪಂ. ಚುನಾವಣೆಗೆ ಅವಶ್ಯವಿರುವ ಮತಪೆಟ್ಟಿಗೆಗಳ ವಿವರ, ಸದಾಚಾರ ಸಂಹಿತೆ ಜಾರಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಮಡಿಕೇರಿ ತಾಲೂಕಿನ ತಹಶೀಲ್ದಾರ ಮಹೇಶ್, ಸೋಮವಾರಪೇಟೆ ತಹಶೀಲ್ದಾರ ಗೋವಿಂದರಾಜು, ಶಿರಸ್ತೆದಾರ ಪ್ರವೀಣ್‍ಕುಮಾರ್, ಪ್ರಕಾಶ್, ಅನಿಲ್‍ಕುಮಾರ್ ಇತರರು ಇದ್ದರು.