ಕುಶಾಲನಗರ, ಮಾ. 22: ಕುಶಾಲನಗರ ಪಟ್ಟಣದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಒಟ್ಟು 13 ಮಂದಿ ನಾಗರಿಕರನ್ನು ಗೃಹ ಪರೀಕ್ಷೆಗೆ ಒಳಪಡಿಸಲಾಗಿದೆ. ದುಬೈ ಮತ್ತಿತರ ದೇಶಗಳಿಂದ ಆಗಮಸಿ ಕುಶಾಲನಗರದ ರಸೂಲ್ ಬಡಾವಣೆ, ನೇತಾಜಿ ಬಡಾವಣೆ, ಕಾವೇರಿ ಬಡಾವಣೆ ಮತ್ತು ಮುಳ್ಳುಸೋಗೆ ಮತ್ತಿತರ ಕಡೆಗಳಲ್ಲಿ ನೆಲೆಸಿರುವ 13 ಮಂದಿಯನ್ನು ಸೋಂಕಿನ ಸಂಶಯದ ಹಿನ್ನೆಲೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ದಿನನಿತ್ಯ ತೆರಳಿ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಗ್ಯ ಇಲಾಖೆಯ ನಿರೀಕ್ಷಕರಾದ ವಿಜಯೇಂದ್ರ, ಕಿರಿಯ ಮಹಿಳಾ ಸಹಾಯಕಿ ಸುಶೀಲಾ, ಮೋಹಿನಿ ಮತ್ತು ಆರಕ್ಷಕ ಸಿಬ್ಬಂದಿಗಳು ತೆರಳಿ ಸೂಕ್ತ ಸೂಚನೆಗಳನ್ನು ನೀಡುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 103 ಮಂದಿ ವಿದೇಶದಿಂದ ಆಗಮಿಸಿದ ನಾಗರಿಕರಿದ್ದು ಒಟ್ಟು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಇವರುಗಳ ಬಗ್ಗೆ ಗಮನಹರಿಸಲಾಗುತ್ತಿದೆ. ಸೋಮವಾರಪೇಟೆ ಪಟ್ಟಣದಲ್ಲಿ 6, ಸುಂಟಿಕೊಪ್ಪ-18, ಶಿರಂಗಾಲ-02, ಶಾಂತಳ್ಳಿ-3, ಮಾದಾಪುರ-10, ನಂಜರಾಯಪಟ್ಟಣ-8, ಕೂಡಿಗೆ-19, ಗೌಡಳ್ಳಿ-2, ಹೆಬ್ಬಾಲೆ-2, ಚೆಟ್ಟಳ್ಳಿ-14, ಬಿಳಿಗೇರಿ-5 ಮತ್ತು ಆಲೂರು ಸಿದ್ದಾಪುರದಲ್ಲಿ ಓರ್ವನನ್ನು ಗೃಹ ಪರೀಕ್ಷೆಗೊಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.