ಸೋಮವಾರಪೇಟೆ, ಮಾ. 22: ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿ ಜೀವಗಳನ್ನು ಬಲಿಪಡೆಯುತ್ತಿರುವ ಮಾರಕ ಕೊರೊನಾ ವೈರಸ್‍ನ ವೇಗಕ್ಕೆ ತಡೆಯೊಡ್ಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಸ್ವಯಂಪ್ರೇರಿತ ಜನತಾ ಕಫ್ರ್ಯೂ ಸಲಹೆಗೆ ಓಗೊಟ್ಟ ಸೋಮವಾರಪೇಟೆ ಪಟ್ಟಣ ತಾ.22 ರಂದು ಸಂಪೂರ್ಣ ಸ್ತಬ್ಧಗೊಂಡಿತ್ತು.

ತಾ. 21ರ ರಾತ್ರಿ ಮುಚ್ಚಲ್ಪಟ್ಟಿದ್ದ ಅಂಗಡಿ ಮುಂಗಟ್ಟುಗಳು ತಾ. 22ರಂದೂ ಸಹ ಸಂಪೂರ್ಣ ಬಂದ್ ಆಗಿದ್ದವು. ಸಾರ್ವಜನಿಕರೂ ಸಹ ಪಟ್ಟಣದತ್ತ ಆಗಮಿಸದೇ ಪ್ರಧಾನಿಯ ಜನತಾ ಕಫ್ರ್ಯೂ ಕರೆಗೆ ಕೈ ಜೋಡಿಸಿದರು.

ಈವರೆಗೆ 16 ಮಂದಿಯ ಮಾಹಿತಿ: ಸೋಮವಾರಪೇಟೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ವಿದೇಶದಿಂದ ಬಂದಿರುವ 16 ಮಂದಿ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಯಾವದೇ ಸೋಂಕು ಇಲ್ಲದಿರುವ ಬಗ್ಗೆ ತಪಾಸಣೆ ನಡೆಸಿಕೊಂಡು ಮನೆಗೆ ವಾಪಸ್ ಆಗಿದ್ದಾರೆ.

ಆಸ್ಪತ್ರೆಗೆ ಆಗಮಿಸಿದ ಮಂದಿಯನ್ನು ತಪಾಸಣೆ ನಡೆಸಿದ ವೈದ್ಯರು, ಯಾವದೇ ಸೋಂಕು ಲಕ್ಷಣಗಳು ಕಂಡುಬಾರದ ಹಿನ್ನೆಲೆ ಅವರನ್ನು ಮನೆಗೆ ತೆರಳುವಂತೆ ಸೂಚಿಸಿದ್ದು, ಮುಂದಿನ 14 ದಿನಗಳ ವರೆಗೆ ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದಾರೆ. ಇದರೊಂದಿಗೆ ಸಾರ್ವಜನಿಕ ಸಂಪರ್ಕದಿಂದ ದೂರ ಉಳಿಯುವಂತೆ ಸಲಹೆ ನೀಡಿದ್ದು, ಒಂದು ವೇಳೆ ಆರೋಗ್ಯದಲ್ಲಿ ಸಣ್ಣ ಪ್ರಮಾಣದ ಏರುಪೇರು ಕಂಡುಬಂದರೂ ಆಸ್ಪತ್ರೆಗೆ ಆಗಮಿಸಿ ವೈದ್ಯರ ಸಲಹೆ ಪಡೆಯುವಂತೆ ನಿರ್ದೇಶನ ನೀಡಲಾಗಿದೆ.

ಈಗಾಗಲೇ ವಿದೇಶದಿಂದ ಆಗಮಿಸಿರುವ ಬಹುತೇಕರು ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾಗಿದ್ದು, ಉಳಿದವರನ್ನು ಆರೋಗ್ಯ ಇಲಾಖೆಯ ಕಾರ್ಯಕರ್ತರು ಗುರುತಿಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈಗ ನೋಂದಣಿಯಾಗಿರುವ 16 ಮಂದಿಯಲ್ಲೂ ಕೊರೊನಾಕ್ಕೆ ಸಂಬಂಧಿಸಿದ ಯಾವದೇ ಸೋಂಕು ಲಕ್ಷಣಗಳು ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ: ಜನತಾ ಕಫ್ರ್ಯೂ ಹಿನ್ನೆಲೆ ಎಲ್ಲಾ ಅಂಗಡಿ ಮುಂಗಟ್ಟುಗಳು, ಖಾಸಗಿ ಕ್ಲಿನಿಕ್‍ಗಳು, ಬಂದ್ ಆಗಿದ್ದರೂ ಸಹ ಸರ್ಕಾರಿ ಆಸ್ಪತ್ರೆಯಲ್ಲಿ ಎಂದಿನಂತೆ ರೋಗಿಗಳ ತಪಾಸಣೆ, ಚಿಕಿತ್ಸೆ ನೀಡಲಾಯಿತು. ಪಟ್ಟಣದಲ್ಲಿ ಒಂದು ಮೆಡಿಕಲ್ ಅಂಗಡಿ ಕೆಲಹೊತ್ತು ತೆರೆದಿದ್ದುದನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಮೆಡಿಕಲ್ ಅಂಗಡಿಗಳು ಬಂದ್ ಆಗಿದ್ದವು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಚಿನ್ ಅವರನ್ನೊಳಗೊಂಡ ಶುಶ್ರೂಷಕಿಯರ ತಂಡ ಆಸ್ಪತ್ರೆಗೆ ಆಗಮಿಸಿದ ರೋಗಿಗಳಿಗೆ ಅಗತ್ಯ ಚಿಕಿತ್ಸೆ, ಔಷಧೋಪಚಾರ ಮಾಡಿದರು. ಕೊರೊನಾ ರೋಗ ಲಕ್ಷಣವಿದ್ದರೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಸಿದ್ಧಪಡಿಸಲಾಗಿದ್ದು, ಅಗತ್ಯ ಔಷಧಿಗಳನ್ನು ದಾಸ್ತಾನಿರಿಸಲಾಗಿದೆ.

ಪಟ್ಟಣ ಸ್ತಬ್ಧ: ಜನತಾ ಕಫ್ರ್ಯೂ ಕರೆಗೆ ಸೋಮವಾರಪೇಟೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಬೆಳಿಗ್ಗೆ ಹಾಲು ಮೊಸರು ಮಾರಾಟ ಕೇಂದ್ರ ಮಾತ್ರ ಬಾಗಿಲು ತೆರೆದು ಸಾರ್ವಜನಿಕರಿಗೆ ಸೇವೆ ಒದಗಿಸಿದರೆ ಉಳಿದಂತೆ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು.

ಸ್ವಯಂಪ್ರೇರಿತ ಬಂದ್ ಹಿನ್ನೆಲೆ ಪಟ್ಟಣ ಬಿಕೋ ಎನ್ನುತ್ತಿತ್ತು. ಬೆಳಗ್ಗೆ ಕೆಲವರು ಪಟ್ಟಣಕ್ಕೆ ಆಗಮಿಸಿ ಹಾಲು ಖರೀದಿಸಿ ವಾಪಸ್ ಆದರು. ಇದರೊಂದಿಗೆ ಪಟ್ಟಣದಲ್ಲಿರುವ ಕುಡಿಯುವ ನೀರಿನ ಘಟಕಕ್ಕೆ ಕೆಲ ಮಂದಿ ಆಗಮಿಸಿ, ನೀರು ಸಂಗ್ರಹಿಸಿ ಮನೆಗೆ ತೆರಳಿದರು. ಬೆಳಿಗ್ಗೆಯೇ ಮದ್ಯ ಸೇವಿಸುವ ಚಟ ಅಂಟಿಸಿಕೊಂಡಿರುವ ಮಂದಿ ಪಟ್ಟಣದ ಬಾರ್, ರೆಸ್ಟೋರೆಂಟ್, ಎಂಆರ್‍ಪಿ ಮದ್ಯದಂಗಡಿ ಬಳಿ ಸುಳಿದಾಡುತ್ತಿದ್ದರು. ಅಕ್ರಮ ಮದ್ಯಮಾರಾಟಗಾರರ ಆಗಮನಕ್ಕಾಗಿ ಇಲ್ಲಿನ ಮಾರುಕಟ್ಟೆಯಲ್ಲಿ 20ಕ್ಕೂ ಅಧಿಕ ಮಂದಿ ಮದ್ಯಪ್ರೀಯರು ಕಾದು ಕುಳಿತಿದ್ದ ದೃಶ್ಯ ಕಂಡುಬಂತು.

ಇನ್ನು ಮನೆಯಿಂದ ಹೊರಬಾರದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದ ಹಿನ್ನೆಲೆ ಭಾಗಶಃ ಮಂದಿ ಮನೆಯಲ್ಲೇ ಉಳಿದರು. ತಮ್ಮ ಕುಟುಂಬಸ್ಥರೊಂದಿಗೆ ಭಾನುವಾರ ಇಡೀ ದಿನ ಕಾಲ ಕಳೆದರು. ಮನೆ ಎದುರು ತಮ್ಮ ವಾಹನಗಳನ್ನು ತೊಳೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜನರಿಂದ ಗಿಜಿಗಿಡುತ್ತಿದ್ದ ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಕಫ್ರ್ಯೂ ಹಿನ್ನೆಲೆ ಸರ್ಕಾರಿ ಹಾಗೂ ಖಾಸಗಿ ಬಸ್, ಆಟೋ ರಿಕ್ಷಾ, ಬಾಡಿಗೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಎಲ್ಲೆಲ್ಲೂ ನಿರ್ಜನ ದೃಶ್ಯಗಳು ಕಂಡುಬಂತು.

ಇಲ್ಲಿನ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಹೈವೆ ಪಟ್ರೋಲ್ ಸಿಬ್ಬಂದಿಗಳು ಪಟ್ಟಣದ ಮೇಲೆ ನಿಗಾ ವಹಿಸಿದ್ದರು. ಅನಗತ್ಯವಾಗಿ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ನಡೆಯದಂತೆ ನೋಡಿಕೊಂಡರು. ಮದ್ಯಕ್ಕಾಗಿ ಅಲೆದಾಡುತ್ತಿದ್ದ ಕೆಲಮಂದಿಯನ್ನು ಗದರಿಸಿ ಮನೆಗೆ ಹೋಗುವಂತೆ ತಾಕೀತು ಮಾಡುತ್ತಿದ್ದುದು ಕಂಡುಬಂತು.

ಕೊಡ್ಲಿಪೇಟೆ ಬಂದ್: ತಾಲೂಕಿನ ಗಡಿ ಗ್ರಾಮವಾದ ಕೊಡ್ಲಿಪೇಟೆಯಲ್ಲೂ ಜನತಾ ಕಫ್ರ್ಯೂ ಕರೆಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಕೊಡ್ಲಿಪೇಟೆ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳೂ ಬಂದ್ ಆಗಿದ್ದರೆ, ವಾಹನಗಳೂ ಸಹ ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಹಾಸನ ಜಿಲ್ಲೆಯ ಗಡಿಯನ್ನು ಹೊಂದಿಕೊಂಡಿರುವ ಕೊಡ್ಲಿಪೇಟೆಯಲ್ಲಿ ತಾ. 22ರಂದು ಜನ ಸಂಚಾರ ಸ್ತಬ್ಧಗೊಂಡಿತ್ತು.

ಉತ್ತಮ ಸ್ಪಂದನೆ: ಒಟ್ಟಾರೆ ತಾಲೂಕಿನಾದ್ಯಂತ ನಡೆದ ಜನತಾ ಕಫ್ರ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ತಾಲೂಕಿನ ಮಾದಾಪುರ, ಶಾಂತಳ್ಳಿ, ಐಗೂರು, ಬೇಳೂರು, ಅಬ್ಬೂರುಕಟ್ಟೆ, ಗೋಣಿಮರೂರು, ಗೌಡಳ್ಳಿ, ಶನಿವಾರಸಂತೆ, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲೂ ಜನಜೀವನ ಸ್ತಬ್ಧವಾಗಿತ್ತು.

ಮನೆಗಳ ಮೇಲೂ ನಿಗಾ: ತಾಲೂಕಿನಾದ್ಯಂತ ಪ್ರತಿ ಮನೆಗಳ ಮೇಲೂ ನಿಗಾ ವಹಿಸಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಆಶಾ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಗಮನ ಹರಿಸುತ್ತಿದ್ದಾರೆ. ಸೋಂಕು ಪತ್ತೆಯಾದರೆ ಅಂತಹವರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಗ್ರಾಮಮಟ್ಟದಲ್ಲಿರುವ ಆಶಾ ಕಾರ್ಯಕರ್ತೆಯರ ಗಮನಕ್ಕೂ ತರಬಹುದಾಗಿದೆ. ಒಟ್ಟಾರೆ ಕೊರೊನಾ ಸೋಂಕು ವ್ಯಾಪಕಗೊಳ್ಳದಂತೆ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಕಣಿವೆ: ಜನ ಸಮುದಾಯವನ್ನು ಮನೆಯಿಂದ ಹೊರಬಾರದಂತಹ ಸನ್ನಿವೇಶ ಸೃಷ್ಟಿಸಿದಂತಹ ಕೊರೊನಾ ವೈರಸ್ ಅಬ್ಬರಕ್ಕೆ ಕಡಿವಾಣ ಹಾಕಲು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಕರೆಗೆ ಎಲ್ಲೆಡೆ ವ್ಯಾಪಕವಾದ ಬೆಂಬಲ ವ್ಯಕ್ತವಾಯಿತು. ಒಂದು ರೀತಿ ಜನರಿಂದ ಜನರಿಗಾಗಿ ಜನರೇ ವಿಧಿಸಿಕೊಂಡಂತಹ ಕಫ್ರ್ಯೂನಿಂದಾಗಿ ಹೆದ್ದಾರಿಗಳು ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಇಂತಹ ಸಂದರ್ಭದಲ್ಲಿ ಕೊಪ್ಪ ಸೇತುವೆ ಬಳಿಯ ಹೆದ್ದಾರಿಯಲ್ಲಿ ಜಾನುವಾರುಗಳು ವಿರಾಜಮಾನವಾಗಿ ಹೆದ್ದಾರಿ ತುಂಬೆಲ್ಲಾ ಅಡ್ಡಾಡುತ್ತಿದ್ದ ಚಿತ್ರಣ ಕಂಡುಬಂತು. ಸಾಮಾನ್ಯವಾಗಿ ಯಾವುದಾದರೊಂದು ರಾಜಕೀಯ ಪಕ್ಷ ಅಥವಾ ಸಂಘಟನೆಗಳು ಬಂದ್‍ಗೆ ಕರೆಕೊಟ್ಟಾಗ ಸಂಪೂರ್ಣ ಬಂದ್ ಯಶಸ್ವಿಯಾಗಿ ನಡೆಯುವುದು ಕಷ್ಟವೇ. ಆದರೆ ಮಾರಕವಾದ ಮತ್ತು ಜೀವಹಾನಿಕಾರಕವಾದ ಕೊರೋನಾದ ಜೀವಭಯದಿಂದ ಜನರೇ ಹಾಕಿಕೊಂಡಂತಹ ಕಫ್ರ್ಯೂ ನಿಂದಾಗಿ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು. ಇದರಿಂದಾಗಿ ರಸ್ತೆ ಮಾರ್ಗ ಬಿಕೋ ಎನ್ನುತ್ತಿತ್ತು. ಆದರೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರು.

ಕೂಡಿಗೆ: ಕೂಡಿಗೆ ಭಾಗದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಎಲ್ಲಾ ಆಟೋಗಳು ಸ್ಥಗಿತಗೊಂಡಿದ್ದವು.

ಕೂಡಿಗೆ ಡೈರಿ ಮುಂಭಾಗದಲ್ಲಿನ ಹಾಲು ವಿತರಣಾ ಕೇಂದ್ರದಲ್ಲಿ ಟೀ ಕಾಫಿ ಮಾರಾಟ ಮಾಡುತ್ತಿದ್ದರಿಂದ ಅನೇಕ ಜನರು ಒಂದೆಡೆ ನಿಲ್ಲುತ್ತಿದ್ದ ಕಾರಣ ಹಾಲಿನ ಕೇಂದ್ರವನ್ನು ಮುಚ್ಚಿಸಲಾಯಿತು. ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದಿತ್ತು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು.

ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಯಲ್ಲಿ ಜನತಾ ಕಫ್ರ್ಯೂಗೆ ಬೆಂಬಲ ದೊರೆಯಿತು.

ಗುಡ್ಡೆಹೊಸೂರು: ಕೊರೊನಾ ವೈರಸ್ ವಿರುದ್ಧ ದೇಶದಾದ್ಯಂತ ಕರೆಯಂತೆ ಗುಡ್ಡೆಹೊಸೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೂಡ ಸಂಪೂರ್ಣ ಬಂದ್ ಆಚರಿಸಲಾಯಿತು. ಗುಡ್ಡೆಹೊಸೂರಿನ ಡಾ. ಶಿವಕುಮಾರ್ ಸ್ವಾಮಿಗಳ ವೃತ್ತದಲ್ಲಿ ಬಂದ್ ಕ್ಷಣ.

ಕುಶಾಲನಗರ: ಕುಶಾಲನಗರ ಮತ್ತು ಸುತ್ತಮುತ್ತಲ ಜನತೆ ಬೆಂಬಲ ವ್ಯಕ್ತಪಡಿಸಿದರು. ಬೆಳಗಿನಿಂದಲೇ ಮೈಸೂರು-ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವುದರೊಂದಿಗೆ ನಾಗರಿಕರು ಮನೆಯಿಂದ ಹೊರ ಬರದೆ ಪ್ರಧಾನಿ ಮೋದಿ ಅವರು ನೀಡಿದ ಕರೆಗೆ ಕೈಜೋಡಿಸಿದರು. ಕುಶಾಲನಗರ ಪಟ್ಟಣದಲ್ಲಿ ಔಷಧಿ ಅಂಗಡಿ, ಹಾಲು ಪೂರೈಕೆ ಮತ್ತು ಪತ್ರಿಕಾ ವಿತರಣೆ ಹೊರತುಪಡಿಸಿದಂತೆ ಯಾವುದೇ ವಹಿವಾಟು ನಡೆದಿಲ್ಲ. ಕುಶಾಲನಗರದಿಂದ ಮೈಸೂರು ಕಡೆಗೆ ತೆರಳುವ ಹೆದ್ದಾರಿಯಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳ ಜಂಟಿ ಸಹಯೋಗದೊಂದಿಗೆ ವಾಹನಗಳಲ್ಲಿ ತೆರಳುತ್ತಿದ್ದ ಪ್ರಯಾಣಿಕರನ್ನು ಕೋವಿಡ್-19 ತಪಾಸಣೆಗೆ ಒಳಪಡಿಸುತ್ತಿದ್ದ ದೃಶ್ಯ ಕಂಡುಬಂತು. ಅನಾವಶ್ಯಕ ಓಡಾಡುತ್ತಿದ್ದ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಕೂಡ ನಡೆಯಿತು. ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನಿಸಿದ ನಡುವೆ ಸ್ಥಳೀಯ ಸಂಚಾರಿ ನಿಯಂತ್ರಣಾಧಿಕಾರಿ ಶ್ಯಾಂಶೆಟ್ಟಿ ನೇತೃತ್ವದಲ್ಲಿ ನಿಲ್ದಾಣದ ಆವರಣ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಕುಶಾಲನಗರ ಪಟ್ಟಣದಲ್ಲಿ ಹಾಲಿನ ಡೈರಿಯಲ್ಲಿ ಜನ ಸಂದಣಿ ಸೇರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸೂಚನೆ ನೀಡಿ ಬಂದ್ ಮಾಡುವಂತೆ ಮನವಿ ಮಾಡಿದರು. ಕೆಲವು ಆಟೋ ಚಾಲಕರು ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಕಂಡುಬಂತು.

ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರು ಪಟ್ಟಣದಾದ್ಯಂತ ಸಂಚರಿಸುವ ಮೂಲಕ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

ಪ್ರಧಾನಿ ಮೋದಿ ಅವರ ಸೂಚನೆಯಂತೆ ಸಂಜೆ 5 ಗಂಟೆಗೆ ನಾಗರೀಕರು ತಮ್ಮ ಮನೆಯಿಂದಲೇ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳಿಗೆ ಜಾಗಟೆ, ಶಂಖ, ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದ್ದು ಕಂಡುಬಂತು. ಕುಶಾಲನಗರ ರಥಬೀದಿ ಸೇರಿದಂತೆ ಹೆದ್ದಾರಿಯುದ್ದಕ್ಕೂ ಮನೆಮಂದಿ ಹೊರಬಂದು ಈ ಕಾರ್ಯದಲ್ಲಿ ತೊಡಗಿದ್ದ ದೃಶ್ಯ ಗೋಚರಿಸಿತು. ಪೊಲೀಸ್ ವಾಹನದಲ್ಲಿ ಸೈರನ್ ಮೊಳಗಿಸುವ ಮೂಲಕ ಬೆಂಬಲ ವ್ಯಕ್ತಗೊಂಡಿತು.

ಸುಂಟಿಕೊಪ್ಪ: ಸುಂಟಿಕೊಪ್ಪ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು, ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಸಾರ್ವಜನಿಕರು ಮನೆಯೊಳಗೆ ಇದ್ದು ಕೈ ಜೋಡಿಸಿದರು. ಪಟ್ಟಣದಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳು, ದಿನಸಿ ಅಂಗಡಿಗಳು, ಹೊಟೇಲ್, ಸಣ್ಣ ಗೂಡಂಗಡಿಗಳು, ಔಷಧಿ ಅಂಗಡಿಗಳು ಸಹ ಸಂಪೂರ್ಣ ಬಂದ್ ಆಗಿದ್ದವು.

ಸುಂಟಿಕೊಪ್ಪದಲ್ಲಿ ವಾರದ ಸಂತೆಯನ್ನು ಜಿಲ್ಲಾಡಳಿತದ ಆದೇಶದ ಮೇರೆ ಗ್ರಾಮ ಪಂಚಾಯಿತಿ ರದ್ದುಗೊಳಿಸಿತ್ತು. ಬಾಡಿಗೆ ವಾಹನಗಳು, ಆಟೋರಿಕ್ಷಾ ಸೇರಿದಂತೆ ಎಲ್ಲಾ ವಾಹನಗಳ ಸಂಚಾರವಿರಲಿಲ್ಲ. ಖಾಸಗಿ ವಾಹನಗಳ ಸಂಖ್ಯೆಯೂ ವಿರಳವಾಗಿತ್ತು. ಕಂಬಿಬಾಣೆ, ಕೊಡಗರಹಳ್ಳಿ, ಏಳನೇ ಹೊಸಕೋಟೆ, ಕೆದಕಲ್, ಚೆಟ್ಟಳ್ಳಿ, ಮಾದಾಪುರದಲ್ಲೂ ಜನತಾ ಕಫ್ರ್ಯೂಗೆ ಬೆಂಬಲ ವ್ಯಕ್ತವಾಯಿತು.