ಮಡಿಕೇರಿ, ಮಾ. 22: ಪ್ರಸ್ತುತ ಇಡೀ ದೇಶ ಕೊರೊನಾ ರೋಗದ ಭೀತಿಯಿಂದಾಗಿ ತಲ್ಲಣ ಗೊಂಡಿದ್ದು, ಬಹುತೇಕ ಎಲ್ಲಾ ವ್ಯವಸ್ಥೆಗಳು ಬುಡಮೇಲಾಗಿವೆ. ಈ ಸನ್ನಿವೇಶದ ನಡುವೆ ಕೃಷಿ ಆಧಾರಿತ ಜಿಲ್ಲೆಯಾದ ಕೊಡಗಿನ ರೈತರು- ಬೆಳೆಗಾರರು ಆರೋಗ್ಯ ಸಮಸ್ಯೆಯ ನಡುವೆ ಆರ್ಥಿಕತೆಯ ಹೊರೆಯನ್ನು ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ವರ್ಷಾಂತ್ಯವಾದ ಮಾರ್ಚ್ 31ರೊಳಗೆ ಸಾಲ ಮರುಪಾವತಿ ಮಾಡಬೇಕೆನ್ನುವ ನಿಬಂಧನೆಯನ್ನು ಮುಂದೂಡುವುದು ಅನಿವಾರ್ಯ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಮರುಪಾವತಿ ಅವಧಿಯನ್ನು ಮುಂದೂಡುವಂತೆ ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಆಗ್ರಹಿಸಿದ್ದಾರೆ. ಈ ಕುರಿತು ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು ಕೃಷಿ ಸಾಲದ ಅವಧಿ ಹಾಗೂ ಬಡ್ಡಿ ಪಾವತಿಯ ಸಂಕಷ್ಟವನ್ನು ಸರಕಾರ ಅರ್ಥೈಸಿಕೊಳ್ಳಬೇಕಾಗಿದೆ. ಪ್ರಸ್ತುತ ಕೊರೊನಾ ಆತಂಕದಿಂದಾಗಿ ಎಲ್ಲಾ ಚಟುವಟಿಕೆಗಳು ನಿರ್ಬಂಧಿತವಾಗಿದ್ದು, ಅಘೋಷಿತ ಬಂದ್‍ನಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳೆದ ಫಸಲುಗಳಿಗೆ ಬೆಲೆಯೂ ಇಲ್ಲ, ಫಸಲೂ ಕಡಿಮೆ ಇದ್ದು ಇದನ್ನು ಖರೀದಿಸುವವರೂ ಇಲ್ಲವಾಗಿದ್ದಾರೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ವೀಣಾ ತಿಳಿಸಿದ್ದಾರೆ.
ಸಹಾಯಧನ ಅವಧಿ ವಿಸ್ತರಣೆಗೂ ಆಗ್ರಹ
ಕಾಫಿ ಮಂಡಳಿ ಸೇರಿದಂತೆ ಹಲವು ಇಲಾಖೆಗಳಿಂದ ರೈತರು ಬೆಳೆಗಾರರಿಗೆ ವಿವಿಧ ಯೋಜನೆ- ಅಭಿವೃದ್ಧಿ ಕಾರ್ಯಗಳಿಗೆ ಸಹಾಯಧನ ನೀಡುವ ಸೌಲಭ್ಯವಿದೆ. ಆದರೆ ಇವುಗಳ ಕೆಲಸ - ಕಾರ್ಯವನ್ನು ಮಾರ್ಚ್ 31ರೊಳಗೆ ಪೂರೈಸಿ ಈ ಬಗ್ಗೆ ವಿವರ ನೀಡಬೇಕಾದ ಅನಿವಾರ್ಯತೆ ಇದೆ. ಇದು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಗುರುತರವಾದ ಸಮಸ್ಯೆಯಾಗಿದೆ. ಯಾವುದೇ ಕೆಲಸ ಕಾರ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಕಾಫಿ ಮಂಡಳಿ, ಕೇಂದ್ರ ಸರಕಾರವೂ ಈ ಅವಧಿಯನ್ನು ವಿಸ್ತರಿಸುವುದಲ್ಲದೆ, ಯೋಜನೆಗಳನ್ನು ಮುಂದಿನ ಆರ್ಥಿಕ ವರ್ಷಕ್ಕೂ ವಿಸ್ತರಿಸಬೇಕೆಂದು ವೀಣಾ ಅಚ್ಚಯ್ಯ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಸರಕಾರದ ಗಮನ ಸೆಳೆಯಲಿರುವುದಾಗಿಯೂ ಅವರು ತಿಳಿಸಿದ್ದಾರೆ. ಕಾಫಿ ಬೆಳೆಗಾರರಾದ ಪಡೆಯಟ್ಟಿರ ಹರೀಶ್ ಮುತ್ತಪ್ಪ ಅವರು ಸಮಸ್ಯೆಗಳ ಬಗ್ಗೆ ‘ಶಕ್ತಿ’ಗೆ ವಿವರ ನೀಡಿದ್ದಾರೆ.