ಕೂಡಿಗೆ, ಮಾ. 23: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಸರಕಾರದಿಂದ 354ಮನೆಗಳನ್ನು ನಿರ್ಮಿಸಲಾಗಿದೆ.

ದಿಡ್ಡಳಿಯ ಅರಣ್ಯ ವ್ಯಾಪ್ತಿಯಲ್ಲಿ ವಾಸವಿದ್ದ ಕುಟುಂಬದವರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಪಲಾನುಭವಿಗಳಿಗೆ ಹಂಚಲಾಗಿದೆ. ಆದರೆ 354 ಮನೆಗಳಲ್ಲಿ ವಾಸವಿರ ಬೇಕಾಗಿದ್ದ ಕುಟುಂಬದವರು ಅಲ್ಲಿ 35ಕ್ಕೂ ಹೆಚ್ಚು ಮನೆಯ ಹಕ್ಕು ಪತ್ರ ಪಡೆದು ಇದುವರೆಗೂ ವಾಸವಿರದೆ ಕೆಲಸ ಅರಸಿ ತೋಟಗಳಿಗೆ ಹೋಗಿರುತ್ತಾರೆ. ಕರ್ನಾಟಕ ರಾಜ್ಯ ಸರಕಾರದಿಂದ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ದಿಡ್ಡಳಿಯಲ್ಲಿ ನಿವೇಶನ ರಹಿತರಾಗಿ 545 ಕುಟುಂಬದವರಿಗೆ ಬಸವನಹಳ್ಳಿ ಬ್ಯಾಡಗೊಟ್ಟ ಗ್ರಾಮಗಳಲ್ಲಿ ಮನೆಯನ್ನು ನಿರ್ಮಿತಿ ಕೇಂದ್ರದ ಮೂಲಕ ರೂ. 3 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ವ್ಯಾಪ್ತಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಭೂ ಸೇನೆ ನಿಗಮದ ವತಿಯಿಂದ ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಅಲ್ಲದೆ ಗಿರಿಜನ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ವಿವಿಧ ಕಾಮಗಾರಿ ಮತ್ತು ಅಲ್ಲಿನ ಕುಟುಂಬದ ಸದಸ್ಯರಿಗೆ ಉಚಿತವಾಗಿ ಅಹಾರ ಪದಾರ್ಥಗಳ ವಿತರಣೆ ಹಾಗೂ ಅಂಗನವಾಡಿ ಕೇಂದ್ರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಹೀಗಿದ್ದೂ ಬಹುತೇಕ ಮನೆ ಬಾಗಿಲಿಗೆ ಬೀಗ ಹಾಕಿರುವ ದೃಶ್ಯ ಗೋಚರಿಸಿದೆ.