ಮಡಿಕೇರಿ, ಮಾ.23: ಕೊರೊನಾ ಸೈನಿಕರು ಎಂಬ ಪರಿಕಲ್ಪನೆಯ ಉದ್ದೇಶ ಹಾಗೂ ಅಗತ್ಯತೆಯ ವಿಚಾರಗಳ ಬಗ್ಗೆ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಸ್ವಯಂ ಸೇವಕರಿಗೆ ವಿವರಣೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕರ್ನಾಟಕ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ನಗರದ ವಾರ್ತಾ ಭವನದಲ್ಲಿ ಸೋಮವಾರ ಕೊರೊನಾ ವಿರುದ್ಧ ಸ್ವಯಂ ಸೇವಕ ಸೈನಿಕರಿಗೆ ಮಾಹಿತಿ ಮತ್ತು ಮಾರ್ಗ ಸೂಚಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ವೇಳೆ ಸ್ವಯಂ ಸೇವಕರು ಇತರರೊಡನೆ ವ್ಯವಹರಿಸುವ ಸಂದರ್ಭದಲ್ಲಿ ತಾವೂ ಸಹ ಸ್ವಯಂ ರಕ್ಷಣೆಯನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.

ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ ವಿವಿಧ ನೈಜ ಮಾಹಿತಿ ಕೊಡುವುದು ಹಾಗೂ ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಕೊಡುವುದು ಕೊರೊನಾ ಸೈನಿಕರ ಕೆಲಸವಾಗಿದೆ ಎಂದು ಸ್ವಯಂ ಸೇವಕರಿಗೆ ಚಿನ್ನಸ್ವಾಮಿ ಅವರು ಹೇಳಿದರು.

ಕೊಡಗು ಜಿಲ್ಲೆಯಲ್ಲಿ 21 ಜನ ಸ್ವಯಂ ಸೇವಕರು ಕೊರೊನಾ ವಿರುದ್ಧ ಸೈನಿಕರಾಗಲು ಇಚ್ಛಿಸಿದ್ದು, ವೈರಾಣು ಹರಡುವುದನ್ನು ತಪ್ಪಿಸಲು ತಮ್ಮಿಂದಾಗುವ ಸೇವೆ ಸಲ್ಲಿಸಲು ಸಿದ್ಧ ಎಂಬ ಸಂದೇಶವನ್ನು ಎಲ್ಲಾ ಸ್ವಯಂ ಸೇವಕರು ನೀಡಿದರು.

ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪ್ರಕಟಿಸಿರುವ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಜಿಲ್ಲಾ ಸಭಾಪತಿ ರವೀಂದ್ರ ರೈ ಅವರು ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ನಿಖರ ಮಾಹಿತಿ ನೀಡಬೇಕಿದೆ ಎಂದರು.

ಕಾರ್ಯದರ್ಶಿ ಎಚ್.ಆರ್. ಮುರುಳೀಧರ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ನೀಡಬೇಕಿದೆ, ಜೊತೆಗೆ ವದಂತಿಗಳನ್ನು ತಡೆಯಬೇಕಿದೆ ಎಂದರು. ಯೂತ್ ರೆಡ್‍ಕ್ರಾಸ್‍ನ ಧನಂಜಯ ಸೇರಿದಂತೆ 21 ಜನ ಸ್ವಯಂ ಸೇವಕರು ಭಾಗಿಯಾಗಿದ್ದರು.