ಶನಿವಾರಸಂತೆ, ಮಾ. 22: ಫೆಬ್ರವರಿ ತಿಂಗಳಲ್ಲಿ ಆರಂಭವಾದ ಮೆಣಸಿನಕಾಯಿ ಸಂತೆಯಲ್ಲಿ ದರ ಕಡಿಮೆಯಾಗಿದ್ದರೂ ರೈತರು ಮುಂದೆ ಉತ್ತಮ ದರ ದೊರೆಯುವ ನಿರೀಕ್ಷೆಯಿಂದ ನಿರಾತಂಕವಾಗಿದ್ದರು. ಆದರೆ, ರಾಜ್ಯಕ್ಕೆ ಅಪ್ಪಳಿಸಿದ ಕೊವಿಡ್-19ರ ಬಿರುಗಾಳಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ.
ಕೊರೊನಾ ವೈರಸ್ ರೈತರ ಬದುಕಿನಲ್ಲಿ ಹಸಿಮೆಣಸಿನಕಾಯಿ ಬೆಳೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಳೆದ ವರ್ಷ ಉತ್ತಮ ದರ ದೊರೆತ ಹಿನ್ನೆಲೆ ಈ ವರ್ಷ ರೈತರು ಮಾತ್ರವಲ್ಲ; ಕಾಫಿ ಬೆಳೆಗಾರರೂ ಹಸಿಮೆಣಸಿನಕಾಯಿ ಬೆಳೆದು ಹತಾಶರಾಗಿದ್ದಾರೆ. ಶನಿವಾರಸಂತೆಯಲ್ಲಿ ಸಂತೆ ರದ್ದಾಗಿದೆ. ನೇರ ಮಾರಾಟವಿಲ್ಲ. ಮುಖ್ಯವಾಗಿ ದರ ಗಣನೀಯವಾಗಿ ಕುಸಿದಿದೆ. ವಾರವಾರವೂ ಕುಯ್ಯುತ್ತಿರುವ ಮಾಲು ರವಾನೆಯಾಗುತ್ತಿಲ್ಲ. ನಗರದ ಮಾರುಕಟ್ಟೆಯಲ್ಲೇ ದರ ಕುಸಿದಿದ್ದು, ಗ್ರಾಮಾಂತರ ಪ್ರದೇಶದ ರೈತರು ಕಂಗಾಲಾಗಿದ್ದಾರೆ. ನಗರದ ಮಾರುಕಟ್ಟೆಯಲ್ಲಿ 1 ಕೆಜಿ ಮೆಣಸಿನಕಾಯಿಗೆ ರೂ. 10 ದೊರೆತರೂ ಲೋಡು-ಅನ್ಲೋಡ್ ಹಣದ ಜೊತೆ ಸುಂಕವನ್ನೂ ಕೊಡಬೇಕು.
ವ್ಯಾಪಾರಿಗಳು ಇದೀಗ ರೈತರ ಮನೆ ಬಾಗಿಲಿಗೆ, ಹೊಲ-ಗದ್ದೆಗೆ ಬರುತ್ತಿದ್ದಾರೆ. ತೀರಾ ಕಡಿಮೆ ದರಕ್ಕೆ ಅಂದರೆ 1 ಕೆಜಿ ಮೆಣಸಿನಕಾಯಿ ರೂ. 6-8ಕ್ಕೆ ಖರೀದಿಸುತ್ತಿದ್ದಾರೆ. ನಿರಾಶೆಯಾದರೂ ಹಣ್ಣಾಗಿ ಕೊಳೆತು ಹೋಗುವ ಬದಲು ಸಿಕ್ಕಷ್ಟಾದರೂ ಸಿಗಲಿ ಎಂಬ ಧೋರಣೆಯಿಂದ ಬಹಳಷ್ಟು ರೈತರು ಮಾರುತ್ತಿದ್ದಾರೆ. ಶನಿವಾರಸಂತೆಯ ಸಂತೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಸಿಮೆಣಸಿನಕಾಯಿ ಸಂತೆ ರಾಜ್ಯದಲ್ಲೇ ಖ್ಯಾತಿ ಪಡೆದಿತ್ತು. ರಾಜ್ಯ ಹಾಗೂ ಹೊರರಾಜ್ಯಕ್ಕೂ ವಿವಿಧ ತಳಿಯ ಮೆಣಸಿನಕಾಯಿ ರವಾನೆಯಾಗುತ್ತಿತ್ತು. ಮಾರುಕಟ್ಟೆಯಿಂದ ಮೈಸೂರು, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಇತರ ಕಡೆಗೆ ಆಗುತ್ತಿದ್ದ ರವಾನೆಯೂ ಸದ್ಯಕ್ಕೆ ಸ್ಥಗಿತಗೊಂಡಿದೆ.
ಕೆಲವೆಡೆ ರೈತರು ದರ ಕುಸಿತದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮೆಣಸಿನಕಾಯಿ ಹೊವನ್ನು ಹಾಳುಬಿಡುತ್ತಿದ್ದಾರೆ. ನೀರು ಹಾಕದ ಕಾರಣ ಕಾಯಿ ಸಹಿತ ಗಿಡಗಳು ಒಳಗಿ ನಿಂತಿವೆ.
ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಶನಿವಾರಸಂತೆ ಹೋಬಳಿಯಾದ್ಯಂತ ರೈತರು 50 ಎಕರೆ ಭೂಮಿಯಲ್ಲಿ 30 ಲಕ್ಷ ಗಿಡಗಳನ್ನು ಬೆಳೆದಿದ್ದಾರೆ. ಬಿಳಾಹ ಗ್ರಾಮದ ಪ್ರಗತಿಪರ ರೈತ ಬಿ.ಎಂ. ಪ್ರಕಾಶ್ ಭೋಗ್ಯ ಮಾಡಿಕೊಂಡ ಎರಡೂವರೆ ಎಕರೆ ಭೂಮಿಯಲ್ಲಿ ರೂ. 2.5 ಲಕ್ಷ ಖರ್ಚು ಮಾಡಿ 25 ಸಾವಿರ ಮೆಣಸಿನಕಾಯಿ ಗಿಡಗಳನ್ನು ಬೆಳೆದಿದ್ದಾರೆ. ಈವರೆಗೆ ಮೂರೂವರೆ ಟನ್ ಮೆಣಸಿನಕಾಯಿ ಕೊಯ್ದು ಮಾರಾಟ ಮಾಡಿದ್ದಾರೆ. ಆದಾಯ ರೂ. 25 ಸಾವಿರ ಬಂದಿದ್ದರೂ ಅದರಲ್ಲಿ ರೂ. 12,500 ಕೂಲಿ ಕಾರ್ಮಿಕರಿಗೆ ಸಂಬಳ ಕೊಡಬೇಕಾಯಿತು. ಲಾಭಕ್ಕಿಂತ ನಷ್ಟವೇ ಆಗಿದೆ ಎಂದು ಹತಾಶೆ ವ್ಯಕ್ತಪಡಿಸಿದರು.
ನಷ್ಟ ಅನುಭವಿಸುತ್ತಿದ್ದರೂ ರೈತ ಪ್ರಕಾಶ್ ಕುಟುಂಬ ಕೊರೊನಾ ಹಾವಳಿ ಮುಕ್ತಾಯವಾದ ನಂತರವಾದರೂ ಮೆಣಸಿನಕಾಯಿಗೆ ಉತ್ತಮ ದರ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ವ್ಯವಸಾಯ ಮುಂದುವರೆಸಿದ್ದಾರೆ. ಗಿಡಗಳನ್ನು ಪೋಷಿಸುತ್ತಾ ಕಾಯಿ ಕೊಯ್ಯುವ ಕಾಯಕ ಮುಂದುವರೆಸಿದ್ದಾರೆ. ಮಳೆಯಾಗದಿದ್ದರೂ ಕೊಳವೆ ಬಾವಿ ನೀರನ್ನು ಸ್ಪಿಂಕ್ಲರ್ ಮೂಲಕ ಹಾಯಿಸುತ್ತಿದ್ದಾರೆ. ಮೆಣಸಿನಕಾಯಿ ಜತೆಗೆ ರೈತರು ಬೆಳೆದ ತರಕಾರಿಗೂ ಉತ್ತಮ ದರ ದೊರೆಯುತ್ತಿಲ್ಲ. ಮನೆ ಬಾಗಿಲಲ್ಲಿ ಕನಿಷ್ಟ ಬೆಲೆಗೆ ತರಕಾರಿ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಬಿರುಗಾಳಿ ಯಾವಾಗ ಶಾಂತವಾಗುವುದೆಂದು ನಿರೀಕ್ಷೆಯಲ್ಲಿ ಕಾಣದ ದೇವರಿಗೆ ಕೈಮುಗಿಯುತ್ತಿದ್ದಾರೆ.
- ನರೇಶ್ಚಂದ್ರ