ಮಡಿಕೇರಿ, ಮಾ. 21: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ರೀತಿಯ ಹೊಟೇಲ್, ರೆಸ್ಟೋರೆಂಟ್, ಕೆಫೆಗಳಲ್ಲಿ ಕುಳಿತು ಆಹಾರ ಸೇವಿಸುವುದನ್ನು, ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ, ಪಬ್‍ಗಳಲ್ಲಿ ಮದ್ಯ ಸೇವನೆ ನಿಷೇಧಿಸಿ ಹಾಗೂ ಗಡಿಯಲ್ಲಿರುವ ಮದ್ಯದಂಗಡಿ ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯುಲೇಷನ್ 2020ರ ನಿಯಮ 12 ರಲ್ಲಿ ವ್ಯಾಖ್ಯಾನಿಸಲಾದಂತೆ ಸಾರ್ವಜನಿಕ ಹಿತಾಸಕ್ತಿಯಿಂದ ಸಿಆರ್‍ಪಿಸಿ ಕಾಯ್ದೆ 1973ರ ಕಲಂ 144(3)ರಡಿ ದತ್ತವಾದ ಅಧಿಕಾರದಂತೆ ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾಗಿದ್ದ ಆದೇಶ/ಮರು ಆದೇಶವನ್ನು ನಿರ್ಬಂಧಗಳನ್ನು ಸೇರ್ಪಡೆಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.

ಎಲ್ಲಾ ರೀತಿಯ ಹೊಟೇಲ್/ ರೆಸ್ಟೋರೆಂಟ್, ಕೆಫೆ ಮುಂತಾದವು ಗಳಲ್ಲಿ ಕುಳಿತು ಆಹಾರ ಸೇವಿಸುವು ದನ್ನು ನಿಷೇಧಿಸಿದೆ. ಆದಾಗ್ಯೂ, ಅಡುಗೆ ಕೊಠಡಿ ಕಾರ್ಯಾ ಚರಿಸುತ್ತಿದ್ದು, ಆಹಾರವನ್ನು ಪಾರ್ಸೆಲ್ ರೂಪದಲ್ಲಿ ಹೊರ ತೆಗೆದುಕೊಂಡು ಹೋಗಿ ಸೇವಿಸಬಹುದಾಗಿದೆ. ಈ ರೀತಿ ಪಾರ್ಸೆಲ್ ರೂಪದಲ್ಲಿ ಪಡೆದುಕೊಳ್ಳುವಾಗ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳತಕ್ಕದ್ದು. ಮೇಲಿನ ಸೇರ್ಪಡೆ ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ. ಈ ಆದೇಶವು ತಾ. 21 ರ ಸಂಜೆ 4 ಗಂಟೆಯಿಂದ ಏಪ್ರಿಲ್ 1 ರವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

ನಿಷೇಧಾಜ್ಞೆ :ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ದೇವಸ್ಥಾನ, ದೈವಸ್ಥಾನ, ಮಸೀದಿ, ಮಂದಿರ, ದರ್ಗಾ, ಚರ್ಚ್ ಮುಂತಾದವುಗಳಲ್ಲಿ ದಾಸೋಹ, ಉರೂಸ್, ಸಂತೆ-ಜಾತ್ರೆ, ಸಾಮೂಹಿಕ ಪ್ರಾರ್ಥನೆ, ಜನ ಒಗ್ಗೂಡುವಿಕೆ ಮುಂತಾದವುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ ಏಪ್ರಿಲ್ 1 ರವರೆಗೆ ಜಾರಿಯಲ್ಲಿರುತ್ತದೆ.

(ಮೊದಲ ಪುಟದಿಂದ)

ವಾಹನ ಸಂಚಾರ ನಿಷೇಧ

ಸಾರ್ವಜನಿಕ ಹಿತಾಸಕ್ತಿಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೇರಳ ರಾಜ್ಯದ ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳ ರಸ್ತೆ ಸಂಪರ್ಕವನ್ನು ಅವಶ್ಯಕ ವಸ್ತು, ಸೇವೆಗಳಿಗೆ ಹೊರತುಪಡಿಸಿ ಕಡಿತಗೊಳಿಸಿ ಆದೇಶಿಸಲಾಗಿದೆ. ಈ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಅಥವಾ ಕೊಡಗು ಜಿಲ್ಲೆಯಿಂದ ಜಿಲ್ಲೆಗಳಿಗೆ ಕೊಡಗು ಜಿಲ್ಲೆಯ ಚೆಕ್ ಪೆÇೀಸ್ಟ್ ಮೂಲಕ ತೆರಳುವ ಎಲ್ಲಾ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಯಾವುದಾದರೂ ಕಾರ್ಯನಿಮಿತ್ತ ಕೊಡಗು ಜಿಲ್ಲೆಯೊಳಗೆ ಅಥವಾ ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯದ ಜಿಲ್ಲೆಯೊಳಗೆ ವಾಹನಗಳು ತೆರಳಿದ್ದರೆ ಈ ವಾಹನಗಳಿಗೂ ಸಹ ನಿಬರ್ಂಧಿತ ಅವಧಿ ಮುಗಿಯುವವರೆಗೆ ಅಂತರ ಜಿಲ್ಲೆಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

278 ಮಂದಿಗೆ ತಡೆ

ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರು ವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯವನ್ನು ಮುಂದುವರೆಸಲಾಗಿದೆ. ಅದರಂತೆ ಇಂದು ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 109, ವೀರಾಜಪೇಟೆ ತಾಲೂಕಿನಲ್ಲಿ 88 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 91 ಜರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 278 ಜನರನ್ನು (ನೆಗೆಟಿವ್ ವರದಿ ಕಾರಣ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡ ಒಂದು ಪ್ರಕರಣ ಸೇರಿದಂತೆ) ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲಾಗಿದೆ. 5 ಮಂದಿ ಪ್ರವಾಸಿಗರನ್ನು ರೆಸಾರ್ಟ್, ಹೋಂಸ್ಟೇಗಳಲ್ಲಿ ಸಂಪರ್ಕ ತಡೆಮಾಡಲಾಗಿದೆ.

ಒಟ್ಟು 5 ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದ್ದ ಪ್ರಕರಣಗಳ ಪೈಕಿ 1 ಪ್ರಕರಣದಲ್ಲಿ (ವೀರಾಜಪೇಟೆ ತಾಲೂಕಿನ 35 ವರ್ಷ ಪ್ರಾಯದ ಪುರುಷರೊಬ್ಬರಿಗೆ) ಪ್ರಯೋಗಾಲಯ ವರದಿಯಿಂದ ಸೋಂಕು ಇರುವುದು ದೃಢಪಟ್ಟಿರುತ್ತದೆ. ಉಳಿದಂತೆ 4 ಪ್ರಕರಣಗಳಲ್ಲಿ ಪ್ರಯೋಗಾಲಯ ವರದಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.