ಮಡಿಕೇರಿ, ಮಾ. 21: ವಿಶ್ವವನ್ನು ಕಾಡುತ್ತಿರುವ ಭಯಾನಕ ಕೊರೊನಾ ಹರಡುವಿಕೆಯನ್ನು ಜಿಲ್ಲೆಯಲ್ಲಿ ನಿಯಂತ್ರಿಸುವ ದಿಸೆಯಲ್ಲಿ; ಕೊಡಗಿನ ಜನತೆ ಸ್ವಯಂ ಜಾಗ್ರತರಾಗಿ ಸ್ಪಂದಿಸಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.ಅಲ್ಲದೆ ವಿದೇಶಗಳಿಂದ ಬಂದು ತಂಗುವವರ ಕುರಿತು ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಗೆ ತಕ್ಷಣ ಮಾಹಿತಿ ಕೊಡುವಂತೆಯೂ ಮನವಿ ಮಾಡಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಿಗ್ಗೆ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೇಗೂರುವಿನ ಮಾಪಿಳ್ಳೆತೋಡುವಿಗೆ ಕೊಲ್ಲಿರಾಷ್ಟ್ರದಿಂದ ಬಂದಿರುವ ಶಂಕಿತ ವ್ಯಕ್ತಿಯೊಬ್ಬರ ಓಡಾಟ ಕುರಿತು ಅಲ್ಲಿನ ಗ್ರಾಮಸ್ಥರು ತಮಗೆ ಮಾಹಿತಿ ನೀಡಿರುವುದಾಗಿ ಬೊಟ್ಟು ಮಾಡಿದರು.
ಈ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ಕೈಗೆ ಅಧಿಕೃತ ಮುದ್ರೆಯೊಂದಿಗೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಗೃಹಬಂಧನಕ್ಕೆ ನಿರ್ದೇಶನವಿದ್ದರೂ, ಸಾರ್ವಜನಿಕರೊಂದಿಗೆ ಬೆರೆತು ಓಡಾಟದಲ್ಲಿರುವುದಾಗಿ ಮಾಹಿತಿ ಲಭಿಸಿದೆ ಎಂದು ವಿವರಿಸಿದರು.ಈ ಸಂಬಂಧ ಜಿಲ್ಲಾಡಳಿತಕ್ಕೆ ತಾವು ಗಮನ ಸೆಳೆದಿರುವುದಾಗಿ ನುಡಿದ ಬೋಪಯ್ಯ, ಯಾರೂ ಕೂಡ ಸರಕಾರ ಹಾಗೂ ಜಿಲ್ಲಾಡಳಿತದ ಕ್ರಮಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸದಂತೆ ಎಚ್ಚರಿಸಿದರಲ್ಲದೆ, ಇಂತಹ ಬೆಳವಣಿಗೆಗಳು ಕಂಡುಬಂದರೆ ಕೂಡಲೇ ಸಹಾಯವಾಣಿ ಸಂಖ್ಯೆ 104 ಅಥವಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಲು ತಿಳಿ ಹೇಳಿದರು.
ಚೆಯ್ಯಂಡಾಣೆಯ ಕಿಕ್ಕೆರೆ ಹಾಗೂ ಗೋಣಿಕೊಪ್ಪಲುವಿನಲ್ಲಿ ಇಂತಹ ಬೆಳವಣಿಗೆ ಬಗ್ಗೆ ಮಾಧ್ಯಮಗಳಿಂದ ಗೊತ್ತಾಗಿದ್ದು, ಆ ಕುರಿತು ಜಿಲ್ಲಾಡಳಿತ ತ್ವರಿತ ಕ್ರಮಕೈಗೊಳ್ಳಲು ಕೋರಲಾಗುವುದು ಎಂದರಲ್ಲದೆ, ಹೊರಗಿನಿಂದ ಹೋಂಸ್ಟೇಗಳಲ್ಲಿ ತಂಗುವ ಮೂಲಕ, ಮೋಜಿನಲ್ಲಿ
(ಮೊದಲ ಪುಟದಿಂದ) ಇರುವವರ ಬಗ್ಗೆಯೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಅನುಸರಿಸುವಂತೆ ನಿರ್ದೇಶಿಸಿದರು.
ಜನತಾ ಕಫ್ರ್ಯೂಗೆ ಕರೆ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ವೈಜ್ಞಾನಿಕ ನೆಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಾ. 22 ರಂದು (ಇಂದು) ಸ್ವಯಂ ಪ್ರೇರಿತ ಜನತಾ ಕಫ್ರ್ಯೂಗೆ ಕರೆ ನೀಡಿರುವ ಕುರಿತು ಉಲ್ಲೇಖಿಸಿದ ಅವರು, ಕೊಡÀಗಿನ ಜನತೆ ತಮ್ಮ ಒಳಿತಿಗಾಗಿ ಈ ಕರೆಗೆ ಸ್ವಯಂ ಸ್ಪಂದಿಸುವಂತೆ ಶಾಸಕರು ಮನವಿ ಮಾಡಿದರು.
ಅಲ್ಲದೆ ವಿದೇಶಗಳಿಂದ ಬರುವ ಸಂಬಂಧಿಕರ ಬಗ್ಗೆ ಗೌಪ್ಯತೆ ಇಟ್ಟುಕೊಳ್ಳದೆ ಸರ್ವರ ಒಳಿತಿಗಾಗಿ; ಸ್ವಯಂ ಆರೋಗ್ಯ ತಪಾಸಣೆಗೆ ಒಳಗಾಗುವಂತೆಯೂ; ಈ ಬಗ್ಗೆ ಮಾಹಿತಿಯಿದ್ದರೆ ಯಾರೇ ಗ್ರಾಮಸ್ಥರು ಜಿಲ್ಲಾಡಳಿತದ ಗಮನ ಸೆಳೆದು, ಭವಿಷ್ಯದಲ್ಲಿ ಎದುರಾಗುವ ದುಷ್ಪರಿಣಾಮಗಳು, ಸಾವು ನೋವನ್ನು ತಪ್ಪಿಸಲು ಕಾಳಜಿ ತೋರಬೇಕೆಂದರು. ರಾಜ್ಯ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವರು; ಆರೋಗ್ಯ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ ಸಹಿತ ಮುಖ್ಯಮಂತ್ರಿಗಳು ಆರೋಗ್ಯ ಸಂಬಂಧ ತುರ್ತು ಸೇವೆಗೆ ಕಾರ್ಯಪಡೆ ರಚಿಸಿ; ಎಲ್ಲ ತ್ವರಿತ ಸೇವೆಗಾಗಿ ರೂ. 200 ಕೋಟಿ ನಿಧಿಯನ್ನು ಕಲ್ಪಿಸಿರುವುದನ್ನು ಅವರು ನೆನಪಿಸಿದರು. ಇಂತಹ ಪರಿಸ್ಥಿತಿ ಎದುರಿಸುವಲ್ಲಿ ಜಿಲ್ಲಾಡಳಿತ ಕೂಡ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಜನತೆ ಕೂಡ ಸೂಚನೆಗಳನ್ನು ಅಸಡ್ಡೆ ಅಥವಾ ನಿರ್ಲಕ್ಷಿಸದಂತೆ ಬಿನ್ನವಿಸಿದರು.