ಕುಶಾಲನಗರ, ಮಾ. 21: ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಐತಿಹಾಸಿಕ ಕೆರೆಗಳು ನಿರ್ವಹಣೆ ಇಲ್ಲದೆ ಕಂಡವರ ಪಾಲಾಗುತ್ತಿರುವ ಪ್ರಕರಣಗಳು ದಿನೇದಿನೇ ಹೆಚ್ಚಾಗತೊಡಗಿದೆ. ಪಟ್ಟಣದ ತಾವರೆಕೆರೆ ಹಿಂದಿನ ಜಿಲ್ಲಾಧಿಕಾರಿಗಳ ಮುತುವರ್ಜಿ ಯಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದರೂ ಅದರ ನಿರ್ವಹಣೆ ಮಾಡುವಲ್ಲಿ ಕುಶಾಲನಗರ ಪ.ಪಂ. ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ.

ಇನ್ನೊಂದೆಡೆ ಹೋಬಳಿಯ ಬೃಹತ್ ಕೆರೆ ಎನಿಸಿಕೊಂಡಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೊಂದಿಬಸವನ ಹಳ್ಳಿ ರೊಂಡಕೆರೆ ಸುಮಾರು 14 ಏಕರೆ ವಿಸ್ತೀರ್ಣ ಹೊಂದಿದ್ದರೂ ಇದೀಗ ಸುತ್ತಲೂ ಒತ್ತುವರಿ ಮಾಡಿದ ಹಿನ್ನೆಲೆ ಕೆರೆಯ ವ್ಯಾಪ್ತಿಯು ಹೆಚ್ಚಿನ ಪ್ರಮಾಣದಲ್ಲಿ ಕ್ಷೀಣಗೊಳ್ಳಲು ಕಾರಣವಾಗಿದೆ.

ಸಮೀಪದಲ್ಲಿರುವ ಇನ್ನೊಂದು ಕೆರೆಯ ಮಣ್ಣನ್ನು ಅಕ್ರಮವಾಗಿ ತೆರವುಗೊಳಿಸಿ ಸಮೀಪದಲ್ಲಿಯೇ ಖಾಸಗಿ ಬಡಾವಣೆಯೊಂದನ್ನು ನಿರ್ಮಾಣ ಮಾಡಿದ ಆರೋಪಗಳು ಇಲ್ಲಿನ ಸ್ಥಳೀಯರಿಂದ ಕೇಳಿಬಂದಿದೆ.

ಕುಶಾಲನಗರ ಮತ್ತು ಮುಳ್ಳುಸೋಗೆ ಪಂಚಾಯಿತಿ ಗಡಿಭಾಗದಲ್ಲಿ ಇರುವ ಈ ಕೆರೆಯಿಂದ ಮುಳ್ಳುಸೋಗೆ ಗ್ರಾ.ಪಂ. ಸದಸ್ಯನೊಬ್ಬ ಅಕ್ರಮವಾಗಿ ಮಣ್ಣು ತೆಗೆದಿರುವ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸುಮಾರು 15 ಅಡಿಗಿಂತಲೂ ಆಳದ ಗುಂಡಿ ತೆಗೆದು ಸಾವಿರಾರು ಲೋಡ್ ಮಣ್ಣನ್ನು ಸಮೀಪದ ಖಾಸಗಿ ವ್ಯಕ್ತಿಯ ಬಡಾವಣೆಗೆ ಸುರಿಯಲಾಗಿದೆ. ಅಲ್ಲದೆ ಕೆರೆಯ ಸಮೀಪದಲ್ಲಿರುವ ಮುಳ್ಳುಸೋಗೆ ಗ್ರಾ.ಪಂ. ಸದಸ್ಯ ಯಾವುದೇ ಅನುಮತಿ ಇಲ್ಲದೆ ಕೆರೆಯಲ್ಲಿ ಮೀನುಗಳನ್ನು ಸಾಕಿ ಮಾರಾಟ ಮಾಡುತ್ತಿರುವುದಾಗಿ ‘ಶಕ್ತಿ’ಗೆ ಮುಳ್ಳುಸೋಗೆ ಗ್ರಾ.ಪಂ. ಮಾಜಿ ಸದಸ್ಯ ಎಂ.ಎಸ್. ರಾಜೇಶ್ ತಿಳಿಸಿದ್ದಾರೆ.

ಕೆರೆ ಸುತ್ತಲೂ ಮನೆಗಳಿದ್ದು ಇಲ್ಲಿನ ಮಕ್ಕಳು ಈ ಕೆರೆಯ ಬದಿಯಲ್ಲಿ ಓಡಾಡುತ್ತಿರುವುದು ಸಾಮಾನ್ಯ ವಾಗಿದ್ದು, ಕೆರೆಗೆ ಯಾವುದೇ ರೀತಿಯ ತಡೆಗೋಡೆಗಳನ್ನು ನಿರ್ಮಿಸಿಲ್ಲ ಎಂದು ದೂರಿದ್ದಾರೆ. ಅಪಾಯ ಉಂಟಾಗುವ ಮುನ್ನ ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ರಾಜೇಶ್ ಆಗ್ರಹಿಸಿದ್ದಾರೆ. ಅಕ್ರಮವಾಗಿ ಕೆರೆಯಿಂದ ಮಣ್ಣು ತೆಗೆದು ನಿಯಮಬಾಹಿರವಾಗಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿರುವ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್, ತಾನು ಅಧಿಕಾರ ವಹಿಸುವ ಮುನ್ನ ಈ ಪ್ರಕರಣಗಳು ನಡೆದಿವೆ. ಅಪಾಯ ಸಂಭವಿಸದಂತೆ ಆವರಣ ಗೋಡೆ ನಿರ್ಮಾಣ ಮಾಡಲಾಗುವುದು ಮತ್ತು ಮೀನು ಸಾಕಾಣಿಕೆ ಮಾಡಿರುವ ವ್ಯಕ್ತಿಗಳ ಮೇಲೆ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಈ ಬಗ್ಗೆ ಕ್ರಮಕೈಗೊಳ್ಳಲು ಸಂಬಂಧಿಸಿದ ಪಂಚಾಯಿತಿ ಅಧಿಕಾರಿ ಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಗ್ರಾಮದ ವ್ಯಾಪ್ತಿಯಲ್ಲಿರುವ ರೊಂಡಕೆರೆ ಕೆಲವು ವರ್ಷಗಳ ಹಿಂದೆ ಜಿ.ಪಂ. ಮೂಲಕ ನಿರ್ವಹಣೆ ಗೊಂಡಿದ್ದು, ನಂತರ ಪಂಚಾಯಿತಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಈ ಕೆರೆ ಮೂಲಕ ತುಂಬಿದ ಹೆಚ್ಚುವರಿ ನೀರು ಕುಶಾಲನಗರ ಬೈಚನಹಳ್ಳಿ ತಾವರೆಕೆರೆಗೆ ಹರಿಯುತ್ತಿದ್ದು, ಇದರ ಪ್ರಮುಖ ಮಾರ್ಗವನ್ನೇ ಹಲವರು ಮುಚ್ಚಿರುವ ಬಗ್ಗೆ ಆಕ್ರೋಷ ವ್ಯಕ್ತಪಡಿಸಿರುವ ಮಾಜಿ ಸದಸ್ಯ ಎಂ.ಎಸ್. ರಾಜೇಶ್, ಕುಶಾಲನಗರ ಮತ್ತು ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ಎಲ್ಲಾ ಕೆರೆಗಳ ಸರ್ವೆ ಕಾರ್ಯ ನಡೆಸಿ ಅವುಗಳ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿದ್ದಾರೆ.

- ಚಂದ್ರಮೋಹನ್