ಮಡಿಕೇರಿ, ಮಾ. 21 : ಕೊಡಗಿನಲ್ಲಿರುವ ಪಿ.ಜಿ.ಗಳ ಮುಖ್ಯಸ್ಥರಿಗೆ ಪತ್ರ ಬರೆದು ವಿದೇಶದಿಂದ ಬಂದಿರುವವರ ಮಾಹಿತಿಯನ್ನು ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ನೀಡುವಂತೆ ಹಾಗೂ ಪಿ.ಜಿ.ಗಳಲ್ಲಿ ಶುಚಿತ್ವ ಕಾಪಾಡುವಂತೆ, ಕೆಮ್ಮು, ನೆಗಡಿ, ಜ್ವರ, ನ್ಯುಮೋನಿಯಾ, ಬೇಧಿ ಮುಂತಾದ ಲಕ್ಷಣಗಳು ಪಿ.ಜಿ.ಗಳಲ್ಲಿ ವಾಸವಿರುವವರಲ್ಲಿ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಮತ್ತು ಈ ಕುರಿತು ಮಾಹಿತಿ ನೀಡಲಾಯಿತು.

ಕೊರೊನಾ ವೈರಸ್ ಬಗ್ಗೆ ಜಾಗೃತಿ ಚಟುವಟಿಕೆಗಳನ್ನು ಶನಿವಾರ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗಡಿಪ್ರದೇಶಗಳಲ್ಲಿ, ಗಿರಿಜನ ಹಾಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಆಟೋ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಮತ್ತು ಮನೆ ಮನೆ ಭೇಟಿಯಲ್ಲಿ ಭಿತ್ತಿಪತ್ರ, ಕರಪತ್ರ ಹಂಚುವುದರ ಮೂಲಕ ನಡೆಸಲಾಯಿತು.

ವೀರಾಜಪೇಟೆ ತಾಲೂಕಿನ ಗಡಿ ಪ್ರದೇಶಗಳಾದ ಕುಟ್ಟ, ಮಾಕುಟ್ಟ, ತಿತಿಮತಿ, ಮಾಲ್ದಾರೆ, ವೀರಾಜಪೇಟೆ, ಗೋಣಿಕೊಪ್ಪ, ಮಡಿಕೇರಿ ತಾಲೂಕಿನ ಗಡಿ ಪ್ರದೇಶಗಳಾದ ಸಂಪಾಜೆ, ಭಾಗಮಂಡಲ ಮತ್ತು ಎಲ್ಲಾ ಪ್ರಾ.ಆ.ಕೇಂದ್ರಗಳಲ್ಲಿ, ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ಮುಂತಾದ ಎಲ್ಲಾ ಪ್ರಾ.ಆ.ಕೇಂದ್ರಗಳ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಯಿತು.