ಕುಶಾಲನಗರ, ಮಾ 21: ಕೊರೊನ ಸೋಂಕು ಬಾಧಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕುಶಾಲನಗರ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ.

ಕುಶಾಲನಗರದ ದೇವಾಲಯಗಳ ಒಕ್ಕೂಟದ ಪದಾಧಿಕಾರಿಗಳ ತುರ್ತು ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಎಂ.ಕೆ.ದಿನೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ವ್ಯಾಪ್ತಿಯ 25 ಕ್ಕೂ ಅಧಿಕ ದೇವಾಲಯಗಳಿದ್ದು ಈ ಎಲ್ಲಾ ದೇವಾಲಯಗಳಲ್ಲಿ ಮಾರ್ಚ್ 31 ರವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧÀ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಉಳಿದಂತೆ ದೇವಾಲಯಗಳಲ್ಲಿ ಪ್ರತಿ ದಿನ ಪೂಜಾ ಕೈಂಕರ್ಯ ನೆರವೇರಲಿದೆ ಎಂದರು. ದೇವಾಲಯಗಳಲ್ಲಿ ಭಕ್ತರು ಹೆಚ್ಚಾಗಿ ಪಾಲ್ಗೊಳ್ಳುವ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಾರಿಯ ವಿಶೇಷ ಹಬ್ಬವಾದ ಯುಗಾದಿಯನ್ನು ಕೂಡ ಭಕ್ತಾದಿಗಳು ಮನೆಯಲ್ಲೇ ಆಚರಿಸುವಂತೆ ದೇವಾಲಯ ಪ್ರತಿನಿಧಿಗಳು ಚರ್ಚೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಪ್ರತಿ ದೇವಾಲಯಗಳಲ್ಲಿ ಬ್ಯಾನರ್‍ಗಳನ್ನು ಅಳವಡಿಸಿ ಭಕ್ತಾದಿಗಳಿಗೆ ಮಾಹಿತಿ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ರೀತಿಯಲ್ಲಿ ಇತರೆ ಧರ್ಮಗಳ ಪ್ರಾರ್ಥನಾ ಮಂದಿರಗಳಲ್ಲಿ ಕೂಡ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಮಸೀದಿಗಳ ಮತ್ತು ಚರ್ಚ್ ಪ್ರಮುಖರ ಸಭೆ ಕರೆದು ಕೊರೊನಾದಿಂದ ರಕ್ಷಣೆ ಪಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸ್ಥಳೀಯ ಮಸೀದಿ, ಚರ್ಚ್‍ಗಳ ಪ್ರಮುಖರು ಪಾಲ್ಗೊಂಡಿದ್ದರು.

ಆಯಾ ಧರ್ಮಗಳ ಪ್ರಾರ್ಥನಾ ಮಂದಿರಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಬರ್ಂಧ ವಿಧಿಸಿ ಸೋಂಕು ಹರಡದಂತೆ ಕ್ರಮಕೈಗೊಳ್ಳುವ ಕುರಿತು ಚರ್ಚೆ ನಡೆಯಿತು.

ಕ್ರೈಸ್ತ ಧರ್ಮಗುರುಗಳ ಸೂಚನೆಯಂತೆ ಕುಶಾಲನಗರದಲ್ಲಿ ಈಗಾಗಲೆ ಚರ್ಚ್‍ಗಳಲ್ಲಿ ಪ್ರಾರ್ಥನೆಯನ್ನು ನಿಲ್ಲಿಸಲಾಗಿದೆ ಎಂದು ಚರ್ಚ್ ಪ್ರತಿನಿಧಿ ಜೋಸೆಫ್ ವಿಕ್ಟರ್ ಸೋನ್ಸ್ ತಿಳಿಸಿದರು. ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಭಕ್ತಾದಿಗಳು ಬಾರದಂತೆ ಮನವಿ ಸಲ್ಲಿಸಲಾಗಿದೆ ಎಂದು ಸಂತ ಸೆಬಾಸ್ಟಿಯನ್ ದೇವಾಲಯದ ಪ್ರಮುಖರಾದ ಫಿಲಿಪ್ ವಾಸ್ ಮಾಹಿತಿ ನೀಡಿದರು.

ಕುಶಾಲನಗರ ಜಾಮಿಯಾ ಮಸೀದಿ ಅಧ್ಯಕ್ಷ ಅಲೀಂ ಮಾತನಾಡಿ, ಮಸೀದಿಗಳಲ್ಲಿ ದೀರ್ಘಾವಧಿ ಪ್ರಾರ್ಥನೆಗಳನ್ನು ಅಲ್ಪಾವಧಿಗೆ ಕಡಿತಗೊಳಿಸಲಾಗಿದೆ. ಪ್ರಾರ್ಥನೆ ಸಂದರ್ಭ ಸೇರುವವರ ಸ್ವಚ್ಛತೆಗೆ ಹೆಚ್ಚಿನ ಒತ್ತು ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭ ದೇವಾಲಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಉಪಾಧ್ಯಕ್ಷರಾದ ವಿ.ಪಿ.ನಾಗೇಶ್, ಕೆ.ಎನ್. ರಾಮದಾಸ್, ಸಹಕಾರ್ಯದರ್ಶಿ ಡಿ.ವಿ. ರಾಜೇಶ್, ಸಲಹೆಗಾರರಾದ ವಿ.ಡಿ. ಪುಂಡರೀಕಾಕ್ಷ, ವಿ.ಎನ್. ವಸಂತಕುಮಾರ್,

ರೆಡ್‍ಕ್ರಾಸ್ ಸಂಸ್ಥೆಯ ತಾಲೂಕು ಅಧ್ಯಕ್ಷರಾದ ಎಸ್.ಕೆ.ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅಮೃತ್‍ರಾಜ್, ಹಿಲಾಲ್ ಮಸೀದಿಯ ಸಮಿತಿಯ ಅಧ್ಯಕ್ಷರಾದ ಇಸ್ಮಾಯಿಲ್, ದಂಡಿನಪೇಟೆ ಮಸೀದಿಯ ಸಮಿತಿಯ ಅಧ್ಯಕ್ಷರಾದ ನಿಜಾಮ್, ತಕ್ವ ಮಸೀದಿಯ ಅಧ್ಯಕ್ಷರಾದ ಶರೀಫ್, ರಸೂಲ್ ಲೇಔಟ್ ಮಸೀದಿಯ ಅಧ್ಯಕ್ಷರಾದ ಖಮೀಲುಲ್ಲಾ, ವಿವಿಧ ದೇವಾಲಯಗಳ, ಮಸೀದಿ ಸಮಿತಿಯ ಪ್ರಮುಖರು, ಧಾರ್ಮಿಕ ಮುಖಂಡರು ಇದ್ದರು.