ಚೆಟ್ಟಳ್ಳಿ, ಮಾ. 21: ಸಿದ್ದಾಪುರ ಭಾನುವಾರದ ಸಂತೆ ಬಂದ್ ಹಿನ್ನೆಲೆ ಸಿದ್ದಾಪುರ ಪಟ್ಟಣದಲ್ಲಿ ರಾತ್ರಿ ಬಾರ್, ಅಂಗಡಿ ಮುಂಗಟ್ಟುಗಳಲ್ಲಿ ಜನಜಂಗುಳಿ ಕಂಡುಬಂದಿತು.
ಮನೆಗೆ ಬೇಕಾದ ಸಾಮಗ್ರಿಗಳನ್ನು ಅಂಗಡಿಗಳಲ್ಲಿ ನೂಕುನುಗ್ಗಲಿನಲ್ಲಿ ಸಿದ್ದಾಪುರದ ಸುತ್ತಮುತ್ತಲಿನ ಜನರು ಖರೀದಿ ಮಾಡುತ್ತಿರುವುದು ಕಂಡುಬಂತು.
ಸಿದ್ದಾಪುರ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಹಲವು ನಿರ್ದೇಶನಗಳನ್ನು ನೀಡಿದ್ದರೂ ಇದ್ಯಾವುದನ್ನು ಪರಿಗಣಿಸದ ಸ್ಥಳೀಯರು ಗುಂಪು ಗುಂಪಾಗಿ ಅಲ್ಲಲ್ಲಿ ಜಮಾಯಿಸಿದ್ದು ಕೂಡ ಕಂಡುಬಂತು.
ನೆಲ್ಲಿಹುದಿಕೇರಿಯಲ್ಲಿ ಹಸಿ ಮೀನು ಹಾಗೂ ಹಂದಿ ಮಾಂಸ ಮಾರಾಟ ಜೋರಾಗಿತ್ತು.
ಬಹುತೇಕ ಹೊಟೇಲ್‍ಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ಕೆಲವರು ಟೀ ಕುಡಿಯಲು ಪರದಾಡುತ್ತಿದ್ದುದು ಕಂಡುಬಂತು.
ಕೆಲವರು ಮದ್ಯದಂಗಡಿ ಮುಂದೆ ಜಮಾಯಿಸಿ ನೂಕುನುಗ್ಗಲಿನಲ್ಲಿ ಬಾಟಲಿಗಳನ್ನು ಖರೀದಿಸುತ್ತಿದ್ದ ದೃಶ್ಯ ಎದುರಾಯಿತು.
ಸೋಮವಾರಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರು ತಾ. 22 ರಂದು (ಇಂದು) ಜನತಾ ಕಫ್ರ್ಯೂಗೆ ಮನವಿ ಮಾಡಿರುವ ಹಿನ್ನೆಲೆ ತಾ. 21ರ ಸಂಜೆ ಸೋಮವಾರಪೇಟೆ ಪಟ್ಟಣದಲ್ಲಿ ಹೆಚ್ಚಿನ ಜನಸಂಚಾರ ಕಂಡುಬಂತು.
ಕಳೆದ ನಾಲ್ಕೈದು ದಿನಗಳಿಂದ ಬಣಗುಡುತ್ತಿದ್ದ ಪಟ್ಟಣ ಇಂದು ಸಂಜೆ ಹೆಚ್ಚಿನ ಜನ ಸಂಚಾರಕ್ಕೆ ಸಾಕ್ಷಿಯಾಯಿತು.
ಸೋಮವಾರದ ಸಂತೆಯನ್ನು ಪ.ಪಂ. ರದ್ದುಗೊಳಿಸಿದ್ದು, ತಾ. 22 ರಂದು ಜನತಾ ಕಫ್ರ್ಯೂ ಇರುವ ಹಿನ್ನೆಲೆ ಸಾರ್ವಜನಿಕರು ತಾ.21ರ ಸಂಜೆ ಪಟ್ಟಣಕ್ಕೆ ಆಗಮಿಸಿ ಅಗತ್ಯ ದಿನಸಿ ಸಾಮಗ್ರಿಗಳು ಹಾಗೂ ಆರೋಗ್ಯ ಸುಧಾರಣಾ ಸಂಬಂಧಿತ ವಸ್ತುಗಳನ್ನು ಖರೀದಿ ಮಾಡುತ್ತಿದ್ದುದು ಕಂಡು ಬಂತು.
ಈ ಮಧ್ಯೆ ಬಾರ್ ಮತ್ತು ರೆಸ್ಟೋರೆಂಟ್‍ಗಳು ಬಂದ್ ಆಗಿದ್ದರಿಂದ ವೈನ್ಸ್ ಹಾಗೂ ಎಂ.ಆರ್.ಪಿ. ಮದ್ಯ ಮಾರಾಟ ಅಂಗಡಿಗಳಲ್ಲಿ ಮದ್ಯಪ್ರಿಯರು ಹೆಚ್ಚು ಕಂಡುಬಂದರು.