ವೀರಾಜಪೇಟೆ, ಮಾ. 21: ಕೊರೊನಾ ವೈರಸ್ ಹರಡುವ ಭೀತಿಯಿಂದ ವಿದೇಶದಿಂದ ಕೊಡಗಿನ ವೀರಾಜಪೇಟೆ ಆಸ್ಪತ್ರೆಗೆ ಬಂದಿರುವ ಸ್ವಯಂ ಘೋಷಿತ ಆರೋಗ್ಯ ಪರೀಕ್ಷಾರ್ಥಿಗಳ ಸಂಖ್ಯೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು 30ಕ್ಕೆ ಏರಿದ್ದು ರೋಗದ ಸೋಂಕು ಹರಡಿದ ಕುರಿತು ಈ ತನಕ ಸಾರ್ವಜನಿಕ ಆಸ್ಪತ್ರೆಗೆ ಯಾವುದೇ ದೂರು ಬಂದಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.ತಾ. 17 ರಿಂದ 21ರ ತನಕ ಒಟ್ಟು 26 ಮಂದಿ ವಿದೇಶದಲ್ಲಿದ್ದ ವೀರಾಜಪೇಟೆ ಸುತ್ತಮುತ್ತಲಿನ ನಾಗರಿಕರು ಬಂದಿದ್ದು, ಸಂಬಂಧಿಸಿದಂತೆ ಅವರಿಂದ ಎಲ್ಲ ಮಾಹಿತಿ ಪಡೆಯಲಾಗಿದ್ದು, ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ನಿಗಾದಲ್ಲಿರುವಂತೆ ಸೂಚಿಸಲಾಗಿದೆ ಎಂದು ವೈದ್ಯರು ತಿಳಿಸಿದರು.ಇಂದು ಬೆಳಿಗ್ಗೆ 11.30ರ ಸಮಯದಲ್ಲಿ ಇಲ್ಲಿನ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದ ಸಮೀಪದ ಹೊಟೇಲ್‍ನಲ್ಲಿ ರಷ್ಯಾದಿಂದ ಭಾರತಕ್ಕೆ ಪ್ರವಾಸ ಬಂದಿದ್ದ ನಾಲ್ಕು ಮಂದಿ ರಷ್ಯನ್ನರು ಉಪಹಾರ ಸೇವಿಸುತ್ತಿದ್ದಾಗ ಹೊಟೇಲ್ ಬಳಿ ಇದ್ದವರು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ತಂಡ ಹಾಗೂ ನಗರ ಪೊಲೀಸರಿಗೆ ನೀಡಿದ ದೂರಿನ ಮೇರೆ ನಾಲ್ವರನ್ನು ತಪಾಸಣೆಗೊಳಪಡಿಸ ಲಾಯಿತು. ನಾಲ್ಕು ಮಂದಿಯ ದಾಖಲೆಗಳನ್ನು ಪರಿಶೀಲಿಸಿದಾಗ ಈ ತಂಡಕ್ಕೆ ತಮಿಳುನಾಡಿನಲ್ಲಿ ಆರೋಗ್ಯ ತಂಡ ಪರಿಶೀಲಿಸಿ 14 ದಿನಗಳ ತನಕ ನಿಗಾ ಘಟಕದಲ್ಲಿರಿಸಿ ನೆಗೆಟಿವ್ ಫಲಿತಾಂಶ ಬಂದ ನಂತರ ಪ್ರವಾಸ ಮುಂದುವರೆಯಲು ಬಿಡಲಾಗಿದೆ. ಇದಾದ ನಂತರ ಕೇರಳದಲ್ಲಿಯೂ ಇವರುಗಳನ್ನು ತಪಾಸಣೆಗೊಳಿಸಲಾಗಿದೆ ಎಂಬದು ತಿಳಿದುಬಂದಿದ್ದು, ವೀರಾಜಪೇಟೆಯಲ್ಲಿ ಉಪಹಾರ ಸೇವಿಸಿ ಆರೋಗ್ಯ ತಂಡ ಹಾಗೂ ಪೊಲೀಸರ ತಪಾಸಣೆಯ ಬಳಿಕ ಗೋವಾ ರಾಜ್ಯಕ್ಕೆ ಪ್ರವಾಸ ಮುಂದುವರೆಸಿದ್ದಾರೆ.

ಕೊರೊನಾ ವೈರಸ್ ಮುಂಜಾಗೃತಾ ಕ್ರಮವಾಗಿ ವೀರಾಜಪೇಟೆ ತಾಲೂಕು ಚಿನ್ನ ಬೆಳ್ಳಿ ವರ್ತಕರು ಮತ್ತು ಕೆಲಸಗಾರರ ಸಂಘದ ವತಿಯಿಂದ ನಿನ್ನೆಯಿಂದ ಮೂರು ದಿನಗಳವರೆಗೆ ತಾಲೂಕಿನಾದ್ಯಂತ ಇರುವ ಅಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಎ.ಪಿ.ಲೋಕೇಶ್ ತಿಳಿಸಿದ್ದಾರೆ.

ತಾ.20 ರಿಂದ ಭಾನುವಾರದವರೆಗೆ ಅಂಗಡಿಗಳನ್ನು ಬಂದ್ ಮಾಡಲು ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ವರ್ತಕರು ಬಂದ್ ಮಾಡಿದ್ದಾರೆ ಎಂದು ಲೋಕೇಶ್ ತಿಳಿಸಿದರು.