ಸಿದ್ದಾಪುರ, ಮಾ. 21: ಕೊಂಡಂಗೇರಿ ವ್ಯಾಪ್ತಿಯ ಕೇತುಮೊಟ್ಟೆ ಎಂಬಲ್ಲಿ ವ್ಯಕ್ತಿಯೋರ್ವರಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಪ್ರದೇಶಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.ನಿವಾಸಿಗಳಿಗೆ ಹದಿನೈದು ದಿನಗಳಿಗೆ ಉಪಯೋಗಿಸುವಂತಹÀ ದಿನನಿತ್ಯ ಬಳಸುವ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದ ವತಿಯಿಂದ ಆಹಾರ ಇಲಾಖೆ ಹಾಗೂ ಅಮ್ಮತ್ತಿ ಹೋಬಳಿ ಕಂದಾಯ ಇಲಾಖಾಧಿಕಾರಿಗಳು ವಿತರಿಸಿದರು. ಅಗತ್ಯ ವಸ್ತುಗಳಾದ ಅಕ್ಕಿ, ತರಕಾರಿ, ಬೇಳೆ ಪದಾರ್ಥಗಳು ಗುಡ್ ಲೈಫ್ ಹಾಲು ಇನ್ನಿತರ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು. ಹಾಲುಗುಂದ ಗ್ರಾಮ ಪಂಚಾಯತಿಯ ಪಿ.ಡಿ.ಒ. ಹಾಗೂ ಸದಸ್ಯರುಗಳು ಸಹಕಾರ ನೀಡಿದರು.

ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್, ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ, ಆಹಾರ ನಿರೀಕ್ಷಕ ಚಂದ್ರನಾಯಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೇತುಮೊಟ್ಟೆಯಲ್ಲಿರುವ 75 ಕುಟುಂಬಗಳ ಮನೆಗಳಿಗೆ ದಿನನಿತ್ಯ ಆರೋಗ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ತೆರಳಿ

(ಮೊದಲ ಪುಟದಿಂದ) ಅವರ ಆರೋಗ್ಯದ ಬಗ್ಗೆ ತಪಾಸಣೆ ನಡೆಸುತ್ತಿದ್ದಾರೆ ಎಂದು ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಮುಂಜಾಗ್ರತಾ ಕ್ರಮಕೈಗೊಳುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳಾದ ಡಾ. ಹರೀಶ್ ಹಾಗೂ ಡಾ. ಹೇಮಾವತಿ ಮತ್ತು ಆರೋಗ್ಯ ಇಲಾಖೆ ಆರು ಮಂದಿ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ದಿನನಿತ್ಯ ಬೆಳಗಿನಿಂದ ಅಪರಾಹ್ನ ಮೂರು ಗಂಟೆವರೆಗೆ ತಪಾಸಣೆ ಮಾಡಲಾಗುತ್ತಿದೆ. ಆದರೆ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ ಎನ್ನಲಾಗಿದೆ. ಜ್ವರ ಮತ್ತು ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ಅಂತವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆರೋಗ್ಯ ಇಲಾಖೆ ಸಿದ್ಧವಾಗಿದೆ.

ಕೊಂಡಂಗೇರಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಾಲುಗುಂದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿ ಮೂರು ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಮೂವತ್ತಕ್ಕೂ ಅಧಿಕ ಪೋಲಿಸರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದಾಗಿ ನೆಲ್ಲಿಹುದಿಕೇರಿ ಗ್ರಾಮದ ಎಲ್ಲಾ ಮಾಂಸ ಹಾಗೂ ಹಸಿ ಮೀನು ಅಂಗಡಿಗಳನ್ನು ಮುಚ್ಚಲಾಗಿದೆ. -ವಾಸು