ನಾಪೋಕ್ಲು, ಮಾ. 21: ನಾಪೋಕ್ಲು ಗ್ರಾಮ ಪಂಚಾಯ್ತಿ ಕೊರೊನಾ ವೈರಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ವೈರಸ್ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಹೆಚ್ಚು ಜನ ಸೇರುವ ಆಯಕಟ್ಟಿನ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆ ಮುಂದುವರಿದಿದೆ. ಎಂದು ಪಂಚಾಯ್ತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ತಿಳಿಸಿದ್ದಾರೆ.
ಕೊರೊನಾ ಜೊತೆಗೆ ಈ ವ್ಯಾಪ್ತಿಯಲ್ಲಿ ಹಕ್ಕಿಜ್ವರದ ಲಕ್ಷಣಗಳೂ ಗೋಚರಿಸತೊಡಗಿವೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ, ಅಲ್ಲಲ್ಲಿ ಪಕ್ಷಿಗಳ ಸಾವಿನ ಪ್ರಕರಣ ಮುಂದುವರಿದಿದೆ.
ಪಾರಾಣೆ ಬಾವಲಿ ಗ್ರಾಮ ವ್ಯಾಪ್ತಿಯ ಎಳ್ತಂಡ ಬೋಪಣ್ಣ ಎಂಬವರ ಮನೆ ಬಳಿ 2 ಕಾಗೆಗಳು ಸತ್ತು ಬಿದ್ದಿರುವ ಪ್ರಕರಣ ಪತ್ತೆಯಾಗಿ ಹಲವು ಕಾಗೆಗಳು ನಾಪತ್ತೆಯಾಗಿ ಆತಂಕ ಸೃಷ್ಟಿಯಾಗಿದೆ
ಶನಿವಾರ ನಾಪೋಕ್ಲು ಸಮೀಪದ ಚೆರಿಯಪರಂಬಿನ ಕಾವೇರಿದಡದಲ್ಲಿ ಕೊಕ್ಕರೆ ಸತ್ತು ಬಿದ್ದಿರುವುದು ಪತ್ತೆಯಾಗಿದ್ದು, ಸ್ಥಳಕ್ಕೆ ಪಶುವೈದ್ಯ ಡಾ. ಸಿ.ಪಿ. ಚೇತನ್, ಪಾರಾಣೆಯ ಡಾ. ಸಚಿನ್, ಪಶುಪಾಲನಾ ಇಲಾಖೆ ಪರಿವೀಕ್ಷಕ ಸುನಿಲ್ ಅಚ್ಚುತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಕ್ಕರೆಯ ಕಳೆಬರವನ್ನು ಮೈಸೂರು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಪಶುವೈದ್ಯರು ಹೇಳಿದ್ದಾರೆ.
-ದುಗ್ಗಳ ಸದಾನಂದ