ಮಡಿಕೇರಿ, ಮಾ.20: ಕೊಡಗು ಜಿಲ್ಲೆಯಲ್ಲಿ ತಾ. 19 ರಂದು ಮೊದಲ ಕೊರೊನಾ ಪ್ರಕರಣ ದೃಢಪಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನೆರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ಸಾರ್ವಜನಿಕ ಹಿತಾಸಕ್ತಿಯಿಂದ ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಜಿಲ್ಲೆಯ ಅಂತರ ರಾಜ್ಯ ಗಡಿಭಾಗಗಳಲ್ಲಿ ಸಕಾರಣವಿಲ್ಲದೆ ಖಾಸಗಿ ಅಥವಾ ಪ್ರವಾಸಿ ವಾಹನಗಳಲ್ಲಿ ಜಿಲ್ಲೆಗೆ ಭೇಟಿ ನೀಡುವುದು ಮತ್ತು ತಂಗುವುದನ್ನು ನಿಷೇಧಿಸಿದೆ ಹಾಗೂ ನೆರೆ ರಾಜ್ಯಗಳಿಂದ ಜಿಲ್ಲೆಗೆ ಕಾರ್ಮಿಕರನ್ನು ಕರೆತರಲು ಮತ್ತು ಜಿಲ್ಲೆಯಿಂದ ನೆರೆ ರಾಜ್ಯಗಳಿಗೆ ಕಾರ್ಮಿಕರನ್ನು ಕರೆದೊಯ್ಯುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದೆ ಎಂದು ಅವರು ಪ್ರಕಟಿಸಿದ್ದಾರೆ. ಜಿಲ್ಲೆಗೆ ಕೋಳಿ, ಕುರಿ, ಆಡು ಮುಂತಾದವುಗಳನ್ನು ಸಜೀವ, ಮಾಂಸಾಹಾರ ಮತ್ತು ಮಾಂಸಾಹಾರ ಉತ್ಪನ್ನಗಳನ್ನು ಸಾಗಿಸುವುದನ್ನು ನಿಷೇಧಿಸಿದೆ. ನೆರೆ ರಾಜ್ಯಗಳಿಂದ ಜಿಲ್ಲೆಯ ಮೂಲಕ ದೂರ ಪ್ರಯಾಣ ಮಾಡುವ ವಾಹನಗಳು ಕೊಡಗು ಜಿಲ್ಲೆಯಲ್ಲಿ ನಿಲುಗಡೆಗೊಳಿಸುವುದು ಮತ್ತು ತಂಗುವುದನ್ನು ನಿಷೇಧಿಸಿದೆ. ಕರಿಕೆ - ಕೇರಳ ಗಡಿ ಮೂಲಕ ವಾಹನಗಳ ಓಡಾಟಕ್ಕೆ ಸಂಪೂರ್ಣ ತಡೆ ಹಾಕಲಾಗಿದೆ. ದಿನ ನಿತ್ಯಬಳಕೆಯ ಅವಶ್ಯಕ ಸಾಮಗ್ರಿಗಳ ಸಾಗಾಟಕ್ಕೆ ಇದು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.237 ಮಂದಿಗೆ ಮನೆಗಳಲ್ಲಿ ತಡೆ : ಕೊಡಗು ಜಿಲ್ಲೆಯಿಂದ ವಿದೇಶಿ ಹೋಗಿ ಹಿಂತಿರುಗಿ ಬಂದಿರುವ ಮಂದಿಯ ತಪಾಸಣೆ ಮುಂದುವರೆಸಲಾಗಿದೆ; ಈ ಸಂಜೆವರೆಗೆ ಮಡಿಕೇರಿ ತಾಲೂಕಿನಲ್ಲಿ 92, ವೀರಾಜಪೇಟೆ ತಾಲೂಕಿನಲ್ಲಿ 76, ಸೋಮವಾರಪೇಟೆ ತಾಲೂಕಿನಲ್ಲಿ 74 ಮಂದಿಯನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ 237 ಮಂದಿಗೆ ಕೊರೊನಾ ನೆಗೆಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ; ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಓರ್ವನ ಸಹಿತ ಅವರವರ ಮನೆಗಳಲ್ಲಿ ಸಂಪರ್ಕ ತಡೆಯನ್ನು ಮಾಡಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
5 ಮಂದಿಗೆ ಸೋಂಕು ಶಂಕೆ : ಜಿಲ್ಲಾಡಳಿತ ಮಾಹಿತಿ ಕಲೆ ಹಾಕಿರುವಂತೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸುತ್ತಿರುವ ಕೊರೊನಾ ಸೋಂಕು ಓರ್ವ ಸಹಿತ ಇತರ ನಾಲ್ವರಿಗೆ
(ಮೊದಲ ಪುಟದಿಂದ) ಕೊರೊನಾ ಶಂಕೆಯಿದ್ದು; ಪ್ರಯೋಗಾಲಯದ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿರುವ ಅವರು ಜಿಲ್ಲೆಯ ಸರಕಾರಿ ಕಚೇರಿಗಳಿಗೆ ತುರ್ತು ಕೆಲಸ ಹೊರತು ಸಾರ್ವಜನಿಕ ಪ್ರವೇಶ ಕೂಡ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಿಷೇಧವೂ ಸಿಆರ್‍ಪಿಸಿ ಕಾಯ್ದೆ 144(3) ಅಡಿಯಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ದತ್ತವಾದ ಸಾರ್ವಜನಿಕ ಹಿತಾಸಕ್ತಿ ಅಧಿಕಾರ ದನ್ವಯ ತಾ. 31 ರವರೆಗೆ ಜಾರಿಯಿದ್ದು; ಐಷಾರಾಮಿ ಹೊಟೇಲ್, ವಸತಿ ಗೃಹಗಳು, ಹೋಂಸ್ಟೇಗಳು, ರೆಸಾರ್ಟ್‍ಗಳು, ಕಲ್ಯಾಣ ಮಂಟಪ ಗಳು, ಸಾರ್ವಜನಿಕ ಸಭಾಂಗಣಗಳಿಗೆ ಒಳಗೊಂಡಂತೆ ಪ್ರವಾಸಿಗರು ಮತ್ತು ಸಾರ್ವಜನಿಕರು ತಂಗದಂತೆ ನಿರ್ಬಂಧಿಸಲಾಗಿದೆ. ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿ ಸಂಚರಿಸಿರುವ ಮಾರ್ಗ ನಕಾಶೆ ಸಿದ್ಧಪಡಿಸಿದ್ದು; ಆತ ಪ್ರಯಾಣಿಸಿದ ವಿಮಾನ, ಬಸ್‍ನಲ್ಲಿದ್ದ ಸಹ ಪ್ರಯಾಣಿಕರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಗಾಗುವಂತೆ ವ್ಯಾಪಾರ ಪ್ರಚಾರ ನೀಡಲಾಗಿದೆ; ಅಲ್ಲದೇ ಸೋಂಕಿನ ವ್ಯಕ್ತಿಯೂ ಸಂಪರ್ಕಿಸಿರ ಬಹುದಾದ ದ್ವಿತೀಯ ಹಂತದ ವ್ಯಕ್ತಿಗಳ ಪತ್ತೆ ಕಾರ್ಯದೊಂದಿಗೆ ಆತನ ಮಾಹಿತಿ ಆಧಾರಿಸಿ ಸಂಪೂರ್ಣ ವಿವರವನ್ನು ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂತೆಯಲ್ಲಿ ಗೊಂದಲ: ಇಂದು ಶುಕ್ರವಾರ ಸಂತೆದಿನವಾದ ಮಡಿಕೇರಿಯಲ್ಲಿ ಸಾಕಷ್ಟು ಗ್ರಾಮೀಣ ರೈತರು ಹಾಗೂ ಇತರ ವರ್ತಕರು ಸೊಪ್ಪು, ತರಕಾರಿ ಇತ್ಯಾದಿಯನ್ನು ತಂದು ಗ್ರಾಹಕರ ನಡುವೆ ವ್ಯಾಪಾರ ನಡೆಸುತ್ತಿದ್ದರೆ; ಕೋಳಿ, ಕುರಿ ಮಾಂಸ, ಮೀನು ಇತ್ಯಾದಿ ಮಾರಾಟವನ್ನು ವ್ಯಾಪಾರಿಗಳು ಸ್ಥಗಿತಗೊಳಿಸಿದ್ದು; ತಾ. 31ರವರೆಗೂ ವಹಿವಾಟು ನಡೆಸುವದಿಲ್ಲವೆಂದು ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಗೊಂದಲದ ನಡುವೆ ಸೊಪ್ಪು, ತರಕಾರಿ ವ್ಯವಹಾರ ಸಂಜೆಗತ್ತಲೆಯ ನಡುವೆ ಮುಂದುವರೆದಿದ್ದು; ಗೊಂದಲ, ಆತಂಕದ ನಡುವೆ ಕೆಲವರು ದಾಸ್ತಾನು ಸಂಗ್ರಹ ಮತ್ತು ಮಾರಾಟದಲ್ಲಿ ತೊಡಗಿದ್ದು ಗೋಚರಿಸಿತು.
ಕೊಂಡಂಗೇರಿಯಲ್ಲಿ ಆತಂಕ : ಕೊಂಡಂಗೇರಿಯಲ್ಲಿ ವ್ಯಕ್ತಿ ಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಇಡೀ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ಎದುರಾಗಿದೆ. ಜಿಲ್ಲಾಡಳಿತ ನಿರ್ಬಂಧ ತೆರವುಗೊಳಿಸುವ ತನಕ ಗ್ರಾಮಸ್ಥರಿಗೆ ಆಹಾರ ಸಾಮಗ್ರಿ ಸಹಿತ ಮೂಲಭೂತ ಸೌಕರ್ಯ ಒದಗಿಸಿ ವೈರಸ್ ಸೋಂಕಿನ ಬಗ್ಗೆ ಮನೆ ಮನೆಗಳಲ್ಲಿ ಪ್ರತ್ಯೇಕ ತಪಾಸಣೆ ನಡೆಸಬೇಕೆಂದು ಅಲ್ಲಿನ ಮುಖಂಡ ಯೂಸೂಫ್ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಸೀಮಿತ ಅವಧಿಯಲ್ಲಿ ಶುಕ್ರವಾರದ ನಮಾಝ್ ನಡೆಸಲಾಗಿದ್ದು; ಪೊಲೀಸ್ ಇಲಾಖೆ ಗ್ರಾಮದಲ್ಲಿ ನಾಕಾಬಂಧಿಯೊಂದಿಗೆ ಮುನ್ನೆಚ್ಚರಿಕೆ ತೆಗೆದುಕೊಂಡಿರು ವದಾಗಿಯೂ ಪ್ರತಿಕ್ರಿಯಿಸಿದ್ದಾರೆ.
ನ್ಯಾಯಾಂಗ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ : ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಮತ್ತು ಆರೋಗ್ಯ ಇಲಾಖೆಯ ಸಹಕಾರದಿಂದ ಕೊಡಗಿನ ನ್ಯಾಯಾಲಯಗಳಲ್ಲಿ ಆರೋಗ್ಯ ಸಂಬಂಧ ಜಾಗೃತಿಯೊಂದಿಗೆ ಕೊರೊನಾ ಸೋಂಕಿನ ತಪಾಸಣೆ ನಡೆಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ವಿ. ಮಲ್ಲಾಪುರ್, ಸೆಷನ್ಸ್ ನ್ಯಾಯಾಧೀಶ ಪಿ.ಎಸ್. ಚಂದ್ರಶೇಖರ್, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ, ಅಪರ ನ್ಯಾಯಾಧೀಶೆ ಸ್ಮಿತಾ, ಎಸ್.ಟಿ. ಶಮ್ಮ ಸೇರಿದಂತೆ ಆರೋಗ್ಯಾಧಿಕಾರಿ ರಮೇಶ್ ನ್ಯಾಯಾಲಯ ಸಿಬ್ಬಂದಿ ಜಯಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ನೂರು ಗ್ರಾಮಗಳಲ್ಲಿ ಜಾಗೃತಿ: ಕೊಡಗು ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಕರೆಯಂತೆ ತಾ. 22 ರಂದು ಸ್ವಯಂಪ್ರೇರಣೆಯಿಂದ ಜನತಾ ಕಫ್ರ್ಯೂ ಪಾಲಿಸುವಂತೆ ಸೇವಾ ಭಾರತಿ ಹಾಗೂ ಆರೋಗ್ಯ ಭಾರತಿ ಸಂಘಟನೆಗಳು ಜಂಟಿಯಾಗಿ ಕರೆ ನೀಡಿವೆ. ಈ ಸಂಬಂಧ ಯುಗಾದಿಯ ದಿನದಂದು ಕೊಡಗಿನ 100 ಗ್ರಾಮಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚುವ ಮೂಲಕ ಜನಸಂಪರ್ಕ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಸದಾಶಿವ ಹಾಗೂ ಟಿ.ಸಿ. ಚಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರಪೇಟೆ ಸಂತೆ ರದ್ದು: ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸೋಮವಾರಪೇಟೆ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ತಾ. 22 ಮತ್ತು ತಾ. 23 ರಂದು ನಡೆಯುವ ವಾರದ ಸಂತೆ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.