ಮಡಿಕೇರಿ, ಮಾ. 20: ಭಾರತದೆಲ್ಲೆಡೆ ಭಾನುವಾರ (ತಾ.22) ಸ್ವಯಂ ಘೋಷಿತ ಜನತಾ ಕಫ್ರ್ಯೂವನ್ನು ಎಲ್ಲಾ ವರ್ಗದ ಜನತೆ ಪಾಲಿಸುವ ಮೂಲಕ; ತಮ್ಮ ಸ್ವರಕ್ಷಣೆಗೆ ಸಂಕಲ್ಪ ತೊಡುವ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಕರೆ ಓಗೊಡುವಂತೆ ವಿವಿಧ ಧರ್ಮ ಗುರುಗಳು ಪುನರುಚ್ಚಾರ ಮಾಡಿದ್ದಾರೆ. ಆ ಮುಖಾಂತರ ಸ್ವಯಂ ಕಫ್ರ್ಯೂ ವಿಧಿಸಿಕೊಂಡು ಎದುರಾಗಲಿರುವ ಅಪಾಯದಿಂದ ಪಾರಾಗಬೇಕೆಂದು ನೆನಪಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ ಯೊಂದಿಗೆ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನತೆಯ ಸುರಕ್ಷತೆಗಾಗಿ ಸರಕಾರ ನೀಡಿರುವ ಸಲಹೆಯನ್ನು ಪರಿಪಾಲಿಸಿ; ಪ್ರತಿ ಯೊಬ್ಬರು ತಮ್ಮ ಸುಂದರ ಬದುಕಿಗೆ ಕೊರೊನಾ ಅಡ್ಡಿಯಾಗ ದಂತೆ ಜಾಗೃತಗೊಳ್ಳುವಂತೆ ತಿಳಿಹೇಳಿದ್ದಾರೆ.ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳೊಂದಿಗೆ ಕೊಡಗು ಜಿಲ್ಲಾ ಆಡಳಿತ ನಿರಂತರ ಶ್ರಮಿಸುತ್ತಾ ಎಲ್ಲಾ ಮುನ್ನೆಚ್ಚರಿಕೆ ಕೈಗೊಂಡಿದ್ದರೂ; ಕೆಲವರು ಅಸಡ್ಡೆ ಅಥವಾ ಉದಾಸೀನ ಮನೋಭಾವದಿಂದ ಇತರರಿಗೆ ಅಪಾಯ ತಂದೊಡ್ಡುತ್ತಿರುವದು ಆತಂಕಕಾರಿ ಸಂಗತಿಯೆಂದು ಅವರು ಬೊಟ್ಟು ಮಾಡಿದ್ದಾರೆ. ಅಲ್ಲದೆ ಕೊಂಡಂಗೇರಿಯ ವ್ಯಕ್ತಿಗೆ ಕೊರೊನಾ ಸೋಂಕಿನ ಪತ್ತೆಯಿಂದ; ಆತನ ಜತೆ ವಿಮಾನ, ಬಸ್, ಆಟೋ ಪ್ರಯಾಣ ಮಾಡಿರುವ ಅನೇಕರು ಭಯ ಗೊಂಡಿದ್ದು; ಈ ಬೆಳವಣಿಗೆ ತುಂಬಾ ಕಳವಳ ಉಂಟು ಮಾಡಿದ್ದಾಗಿ ವಿವರಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆ ಮೊಟಕು: ಈ ನಡುವೆ (ಮೊದಲ ಪುಟದಿಂದ) ಶುಕ್ರವಾರವಾದ ಇಂದು ಎಲ್ಲಾ ಮಸೀದಿಗಳಲ್ಲಿ ನಡೆಯಬೇಕಿದ್ದ ವಿಶೇಷ ನಮಾಝ್ ಹಾಗೂ ಚರ್ಚ್ಗಳಲ್ಲಿನ ಪ್ರಾರ್ಥನೆ, ಬಲಿಪೂಜೆ ಗಳನ್ನು ಮೊಟಕು ಗೊಳಿಸಲಾಗಿದೆ ಎಂದು ಆಯಾ ಧರ್ಮಗುರುಗಳು ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ. ಆ ಮೂಲಕ ಭಯಾನಕ ಕೊರೊನಾ ನಿಯಂತ್ರಿಸಲು ಪ್ರಯತ್ನ ಕೈಗೊಳ್ಳ ಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾನುವಾರದ ಸ್ವಯಂ ಜನತಾ ಕಫ್ರ್ಯೂ ಸೇರಿದಂತೆ ಸಾರ್ವಜನಿಕವಾಗಿ ಹೆಚ್ಚಿನ ಪಾಲ್ಗೊಳ್ಳುವಿಕೆ, ಇನ್ನಿತರ ಚಟುವಟಿಕೆಯಿಂದ ಆದಷ್ಟು ದೂರವಿದ್ದು; ಕೊರೊನಾ ಸೋಂಕಿನಿಂದ ಪಾರಾಗಬೇಕೆಂದು ಅವರು ಜನತೆಗೆ ಕರೆ ನೀಡಿದ್ದಾರೆ.
ಈಗಿನ ಸನ್ನಿವೇಶದಲ್ಲಿ ಸರಕಾರ, ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳನ್ನು ಪಾಲಿಸುವ ಮೂಲಕ ಎಲ್ಲಾ ಜನರೂ; ತಮ್ಮ ಸ್ವರಕ್ಷಣೆಗಾಗಿ ಜಾಗೃತರಾಗಬೇಕೆಂದು ಪುನರುಚ್ಚಿಸಿದ ಅವರು; ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ಶುದ್ಧ ವಾತಾವರಣದಿಂದ ಸನ್ನಿವೇಶ ಎದುರಿಸಬೇಕೆಂದು ಸಲಹೆ ನೀಡಿದ್ದಾರೆ.
ಚರ್ಚ್ಗಳಲ್ಲಿ ಬಲಿಪೂಜೆ ಸ್ಥಗಿತ : ಚರ್ಚ್ಗಳಲ್ಲಿ ಪ್ರಾರ್ಥನೆ, ಬಲಿಪೂಜೆ, ಕೊರೊನಾ ಸಂಬಂಧ ಸಾಮೂಹಿಕ ಪ್ರಾರ್ಥನೆಗಾಗಿ ರೂಪಿಸಿದ್ದ ಎಲ್ಲಾ ಚಟುವಟಿಕೆಗಳನ್ನು ತಾ. 31ರ ತನಕ ಸ್ಥಗಿತಗೊಳಿಸಲಾಗಿದೆ ಎಂದು ಇಲ್ಲಿನ ಸಂತಮೈಕಲರ ಚರ್ಚ್ ಧರ್ಮಗುರು ರೆ.ಫಾ. ಅಲ್ಫ್ರೆಡ್ ಜಾನ್ ಮೆಂಡೋನ್ಸಾ ಅವರು ಸ್ಪಷ್ಟಪಡಿಸಿದ್ದಾರೆ. ಕೊಂಡಂಗೇರಿಯ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿದ್ದರಿಂದ ಕೊಡಗಿನ ಜನತೆಯಲ್ಲಿ ಆತಂಕ ಹೆಚ್ಚಾಗಿದೆ ಎಂದು ಉಲ್ಲೇಖಿಸಿದ ಅವರು; ಚರ್ಚ್ಗಳಲ್ಲಿ ಹಮ್ಮಿಕೊಂಡಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಸರಕಾರಗಳ ಸೂಚನೆ ಪಾಲಿಸಲಾಗುತ್ತಿದೆ ಎಂದರು.
ಭಾನುವಾರದ ಜನತಾ ಕಫ್ರ್ಯೂ ನಿಟ್ಟಿನಲ್ಲಿ ಅಂದಿನ ಸಾಮೂಹಿಕ ಪ್ರಾರ್ಥನೆ ರದ್ದುಗೊಳಿಸಲು ಈಗಾಗಲೇ ಸಂಸ್ಥೆ ಮುಖ್ಯಸ್ಥರು ತೀರ್ಮಾನಿಸಿ ಸಂದೇಶ ಕಳುಹಿಸಿದ್ದಾರೆ. ಜನತೆಯು ತಮ್ಮ ಆರೋಗ್ಯದೊಂದಿಗೆ ಬೇರೆಯವರಿಗೆ ತೊಂದರೆ ಆಗದಿರಲು ತಮ್ಮ ತಮ್ಮ ಮನೆಗಳಲ್ಲಿ ಇದ್ದುಕೊಂಡು ಏಕಾಂತ ಪ್ರಾರ್ಥನೆ ನಡೆಸುವಂತೆ ಅವರು ಕರೆ ನೀಡಿದ್ದಾರೆ. ತಾ. 31ರ ಬಳಿಕವೂ ಸರಕಾರಗಳ ವೈಜ್ಞಾನಿಕ ಸಲಹೆಯಂತೆ ಚರ್ಚ್ ಕಾರ್ಯಕ್ರಮಗಳನ್ನು ರೂಪಿಸುವ ಇಂಗಿತವನ್ನು ಧರ್ಮಗುರು ವ್ಯಕ್ತಪಡಿಸಿದ್ದಾರೆ.