ಪಾಲಿಬೆಟ ಮಾ. 20 : ಕೊಡಗಿನ ಹಲವು ವಿಜಯಾ ಬ್ಯಾಂಕ್‍ಗಳಿಂದ ಒಟಿಪಿ ಸಂಖ್ಯೆಯ ಮುಖಾಂತರ ಸುಮಾರು 4,83,900 ರೂಪಾಯಿಗಳನ್ನು ಆನ್‍ಲೈನ್ ಮೂಲಕ ಹಲವರ ಖಾತೆಯಿಂದ ಲಪಟಾಯಿಸಿರುವ ಪ್ರಕರಣ ವರದಿಯಾಗಿದೆ.ಪಾಲಿಬೆಟ್ಟ ಮಹೇಶ್ವರಿ ಸ್ತ್ರೀ ಶಕ್ತಿ ಸಂಘದ ವಿಜಯಾ ಬ್ಯಾಂಕ್ ಖಾತೆಯಿಂದ ರೂ.84,570 ಗಳನ್ನು ಡ್ರಾ ಮಾಡಲಾಗಿದೆ. ಸಂಘದ ಅಧ್ಯಕ್ಷೆ ರಾಣಿ ಎಂಬವರಿಗೆ ಅನಾಮಿಯ ಕರೆ ಬಂದು ನಾವು ವಿಜಯಾ ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇವೆ. ತಮ್ಮ ಸಂಘದ ಖಾತೆ ನಂಬರ್ ನೀಡಿ ಸಂಘಕ್ಕೆ ಹೆಚ್ಚು ಹಣ ಜಮಾ ಮಾಡುತ್ತೇವೆ ಎಂದು ಅವರನ್ನು ನಂಬಿಸಿ ಕೆಲವೇ ಕ್ಷಣಗಳಲ್ಲಿ ತಮ್ಮ ಮೊಬೈಲ್‍ಗೆ ಒಂದು ಮೆಸೇಜ್ ಬರುತ್ತದೆ ಅದನ್ನು ನನಗೆ ಹೇಳಿ ಆಗ ನಿಮ್ಮ ಖಾತೆಗೆ ಹಣ ಬರುವುದಾಗಿ ಹೇಳಿದ್ದಾನೆ. ಆ ಪ್ರಕಾರ ಮೆಸೇಜ್‍ನಲ್ಲಿರುವ ಒಟಿಪಿ ನಂಬರನ್ನು ಆತನಿಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ರೂ.84,570 ಖಾತೆಯಿಂದ ಡ್ರಾ ಆಗಿರುವುದು ತಿಳಿದುಬಂದಿದೆ.ಮರುದಿನ ಅಧ್ಯಕ್ಷೆ ರಾಣಿ ಹಾಗೂ ಉಪಾಧ್ಯಕ್ಷೆ ಜಯ ಬ್ಯಾಂಕಿಗೆ ಬಂದು ವ್ಯವಸ್ಥಾಕರನ್ನು ಭೇಟಿಯಾಗಿ ಅವರ ಸಂಘದ ಖಾತೆಯ ಬಗ್ಗೆ ವಿಚಾರಿಸಿದಾಗ ನಿಮ್ಮ ಎಲ್ಲಾ ಹಣವು ಡ್ರಾ ಆಗಿರುತ್ತದೆ. ಖಾತೆಯಲ್ಲಿ 80 ರೂಪಾಯಿಗಳು ಮಾತ್ರ ಉಳಿದಿರುತ್ತದೆ ಎಂದು ತಿಳಿಸಿದ್ದಾರೆ. ತಕ್ಷಣ ರಾಣಿ ಮತ್ತು ಜಯ ಪಾಲಿಬೆಟ್ಟ ಪೊಲೀಸ್ ಉಪಠಾಣೆಗೆ ಈ ಪ್ರಕರಣದ ಬಗ್ಗೆ ದೂರು ನೀಡಿರುತ್ತಾರೆ. ಉಪಠಾಣಾಧಿಕಾರಿ ದೂರನ್ನು ಸ್ವೀಕರಿಸಿ ಮಡಿಕೇರಿ ಸೈಬರ್ ಅಪರಾಧ ಪತ್ತೆದಳಕ್ಕೆ ವರ್ಗಾಯಿಸಿದ್ದಾರೆ.ಎರಡು ದಿನದಲ್ಲಿ ಕೊಡಗಿನ ಕೆಲವು ವಿಜಯಾ ಬ್ಯಾಂಕಿನಿಂದ ಹಣ ವರ್ಗಾಯಿಸಿದ ನಾಲ್ಕು ಪ್ರಕರಣಗಳು ಸೈಬರ್ ಅಪರಾಧ ಪತ್ತೆದಳದಲ್ಲಿ ದಾಖಲಾಗಿದೆ. ಅಮ್ಮತ್ತಿ ಸಮೀಪದ ಕಣ್ಣಂಗಾಲದ ಸರಿತಾ ಎಂಬ ಮಹಿಳೆಯ ಖಾತೆಯಿಂದ ರೂ. 1,22,870/- , ಕುಟ್ಟ ವಿಜಯಾ ಬ್ಯಾಂಕ್‍ನಿಂದ ರಾಜ ಎಂಬವರ ಖಾತೆಯಿಂದ ರೂ.81.900/-, ಮರಗೋಡು ವಿಜಯಾ ಬ್ಯಾಂಕ್ ಪೂವಮ್ಮ ಎಂಬವರ ಖಾತೆಯಿಂದ ರೂ.1,96,000/- ಹಾಗೂ ಪಾಲಿಬೆಟ್ಟ ಮಹೇಶ್ವರಿ ಸ್ತ್ರೀಶಕ್ತಿ ಸಂಘದ ವಿಜಯಾ ಬ್ಯಾಂಕ್ ಖಾತೆಯಿಂದ ರೂ. 84,570/- ಗಳನ್ನು ಆನ್‍ಲೈನ್ ಮೂಲಕ ಡ್ರಾ ಮಾಡಲಾಗಿದೆ. ವಿಶೇಷ ಎಂದರೆ ಎಲ್ಲಾ ಹಣವು ವಿಜಯಾ ಬ್ಯಾಂಕ್ ಖಾತೆಯಿಂದಲೇ ಡ್ರಾ ಆಗಿದೆ.
ಇವೆಲ್ಲವೂ ಒಂದೇ ತಂಡದ ವ್ಯಕ್ತಿಗಳು ಮಾಡಿರುವುದಾಗಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಬ್ಯಾಂಕಿನಲ್ಲಿ ಹಣ ಕೂಡಿಟ್ಟವರು ತಮ್ಮ ಮೊಬೈಲ್‍ಗೆ ಅನಾಮಿಕ ಕರೆ ಬಂದಾಗ ತಮ್ಮ ಆಧಾರ್ ನಂಬರ್ ಹಾಗೂ ಬ್ಯಾಂಕ್ ಖಾತೆ ನಂಬರನ್ನು ಯಾವುದೇ ಕಾರಣಕ್ಕೂ ನೀಡಬೇಡಿ. ಈ ತರಹದ ಹಲವು ಪ್ರಕರಣಗಳು ಕೊಡಗಿನಲ್ಲಿ ದಾಖಲಾಗಿರುತ್ತದೆ ಎಂದು ಸೈಬರ್ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕ ಹರೀಶ್‍ಕುಮಾರ್ ಹೇಳಿದ್ದಾರೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಮಾರ್ಗದರ್ಶನದಲ್ಲಿ ಈ ಪ್ರಕರಣಗಳನ್ನು ಕೂಡಲೇ ಬೇಧಿಸುವುದಾಗಿ ಅವರು ‘ಶಕ್ತಿ’ಯೊಂದಿಗೆ ತಿಳಿಸಿದರು.
- ಪುತ್ತಂ ಪ್ರದೀಪ್