ಸಿದ್ದಾಪುರ, ಮಾ.20: ವೀರಾಜಪೇಟೆ ತಾಲೂಕಿನ ಕೊಂಡಂಗೇರಿಗೆ ವಿದೇಶದಿಂದ ಆಗಮಿಸಿದ 35 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ತಗಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೊಂಡಂಗೇರಿ ಗ್ರಾಮದಲ್ಲಿ ಆತ ವಾಸವಿದ್ದ ಮನೆಯ ಸುತ್ತಮುತ್ತಲೂ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಆ ಭಾಗದಲ್ಲಿ ವಾಸವಿರುವ 75 ಕುಟುಂಬಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಆ ಭಾಗದ ನಿವಾಸಿಗಳು ಮನೆಯಿಂದ ಹೊರಬರದಂತೆ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ನಿಷೇಧಿತ ಪ್ರದೇಶದಲ್ಲಿ ವಾಸವಿರುವ ನಿವಾಸಿಗಳಿಗೆ ತುರ್ತಾಗಿ ಅಗತ್ಯವಸ್ತುಗಳು ಬೇಕಾದಲ್ಲಿ ಜಿಲ್ಲಾಡಳಿತದ 104ಕ್ಕೆ ಕರೆ ಮಾಡಿದ್ದಲ್ಲಿ ಜಿಲ್ಲಾಡಳಿತದ ವತಿಯಿಂದ ಅಗತ್ಯ ವಸ್ತುಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 100 ಮೀಟರ್ ದೂರದಲ್ಲಿ ಯಾರೂ ಕೂಡ ಸುಳಿಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಈ ಚೆಕ್ ಪೋಸ್ಟ್‍ಗಳಲ್ಲಿ ಮಡಿಕೇರಿ ವಿಭಾಗದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ದಿವಾಕರ್ ಹಾಗೂ ಸಿದ್ದಾಪುರದ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ, ವೀರಾಜಪೇಟೆ ಪಟ್ಟಣ ಠಾಣಾಧಿಕಾರಿ ಬೋಪಣ್ಣ, ನಾಪೋಕ್ಲು ಠಾಣಾಧಿಕಾರಿ ಮಂಚಯ್ಯ ನೇತೃತ್ವದಲ್ಲಿ ಸೂಕ್ತ ರೀತಿಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಪ್ಪತೈದಕ್ಕೂ ಹೆಚ್ಚು ಪೊಲೀಸರು ಹಗಲು, ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊಂಡಂಗೇರಿ ಗ್ರಾಮದಲ್ಲಿ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದೆ. ವೈರಸ್‍ನ ಭೀತಿಯಿಂದಾಗಿ ಗ್ರಾಹಕರಿಲ್ಲದೆ ಕೊಂಡಂಗೇರಿ ವ್ಯಾಪ್ತಿಯ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಕೆಲವು ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ನಿರ್ಬಂಧಿತ ರಸ್ತೆಗಳಲ್ಲಿ ಕೆಲವರು ವಾಹನಗಳಲ್ಲಿ ಬರುತ್ತಿದ್ದು ಪೊಲೀಸರೊಂದಿಗೆ ಕಿರಿಕಿರಿ ಮಾಡಿರುವದು ಕಂಡು ಬಂದಿದೆ.
(ಮೊದಲ ಪುಟದಿಂದ) ಮಸೀದಿಗಳಿಗೆ ಶುಕ್ರವಾರದಂದು ಪ್ರಾರ್ಥನೆಗೆ ಬರುವ ಮಂದಿ ತಮ್ಮ ಮನೆಗಳಿಂದ ಬಟ್ಟೆಗಳನ್ನು ತಂದು ಪ್ರಾರ್ಥನೆ ಮಾಡಿದರು. ಮಸೀದಿಗೆ ಆಗಮಿಸಿದವರ ಸಂಖ್ಯೆ ವಿರಳವಾಗಿತ್ತು. ಸಿದ್ದಾಪುರದಲ್ಲಿ ಕೂಡ ಪಟ್ಟಣದ ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಲಾಗಿದೆ. ಪಟ್ಟಣದಲ್ಲಿ ಜನರ ಸಂಖ್ಯೆ ವಿರಳವಾಗಿತ್ತು.
ಕೊಂಡಂಗೇರಿಯ ಗಡಿಭಾಗದಲ್ಲಿ ರಕ್ಷಣೆಗೆ ನೇಮಿಸಲಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಯುವಕಲಾ ಸಂಘದ ಸದಸ್ಯರುಗಳು ಸ್ಯಾನಿಟೈಸರ್ ಮತ್ತು ಮಾಸ್ಕ್ ಹಂಚಿ ಪೊಲೀಸರ ಕರ್ತವ್ಯಕ್ಕೆ ಬೆಂಬಲಿಸಿ, ಶ್ಲಾಘಿಸಿದರು. ಈ ಸಂದರ್ಭ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ, ಸಿಬ್ಬಂದಿಗಳು ಹಾಗೂ ಮುತ್ತಪ್ಪ ಯುವಕಲಾ ಸಂಘದ ಪದ್ಮನಾಭ, ಸಚಿನ್, ಅಪ್ಪು, ವಿನೋದ್, ಅಭಿಲಾಷ್, ಪ್ರಮೋದ್ ಹಾಜರಿದ್ದರು.