ಮಡಿಕೇರಿ, ಮಾ. 19: ರಾಜ್ಯದೆಲ್ಲೆಡೆ ಕೊರೊನಾ ಭೀತಿ ಎದುರಾಗಿದ್ದು, ಕೊಡಗು ಜಿಲ್ಲೆಯಲ್ಲೂ ಆತಂಕ ಎದುರಾಗಿದೆ. ಆದರೆ ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಜಿಲ್ಲೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಮತ್ತು ಇಬ್ಬರನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಜಾತ್ಯತೀತ ಜನತಾದಳದ ಕೊಡಗು ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರುಗಳು ಜಿಲ್ಲೆಗೆ ಬಾರದೆ ಹಲವು ತಿಂಗಳುಗಳೇ ಕಳೆದಿದ್ದು, ಸಂದಿಗ್ಧ ಪರಿಸ್ಥಿತಿಯಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಆತಂಕದ ವಾತಾವರಣ ಎದುರಾಗಿದ್ದು, ಇಬ್ಬರ ಪತ್ತೆಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಎಸ್‍ಪಿ ಅವರ ಬಳಿ ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಸುನಿಲ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಸಂಘಟನಾ ಕಾರ್ಯದರ್ಶಿ ಎಂ.ಎ. ಇಬ್ರಾಹಿಂ, ಅಬ್ದುಲ್ಲ ಬೆಟ್ಟಗೇರಿ, ಉಪಾಧ್ಯಕ್ಷ ರೆಹಮಾನ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರಾಧ್ಯಕ್ಷೆ ಸುನಂದ, ನಗರ ಪ್ರಧಾನ ಕಾರ್ಯದರ್ಶಿ ಜೆಸಿಂತಾ ಹೂವಲ್ಲಿ, ಉಪಾಧ್ಯಕ್ಷೆ ಮಮತಾ, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್, ನಗರ ಎಸ್.ಸಿ. ಘಟಕದ ಅಧ್ಯಕ್ಷ ರವಿ, ನಗರ ಯುವ ಘಟಕದ ಅಧ್ಯಕ್ಷ ರವಿಕಿರಣ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗಣೇಶ್ ಸೇರಿದಂತೆ ಕಾರ್ಯಕರ್ತರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.