*ಸಿದ್ದಾಪುರ, ಮಾ. 19: ಸರಕಾರ ಸೌಲಭ್ಯ ನೀಡಿದರೂ ಅಧಿಕಾರಿಗಳು ನೀಡದ ಇಂದಿನ ಪರಿಸ್ಥಿತಿ ಕಡು ಬಡವರ ಜೀವನವನ್ನು ನರಕ ವಾಗಿಸಿದೆ. ಈ ರೀತಿಯ ಪ್ರಕರಣ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಆಶ್ರಯ ಮನೆ ಯೋಜನೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ದುಸ್ಥಿತಿ ಫಲಾನುಭವಿಗಳದ್ದಾಗಿದೆ.
ಗ್ರಾ.ಪಂ. ಮನಸ್ಸು ಮಾಡಿದರೆ ಸರಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಗ್ರಾಮಸ್ಥರಿಗೆ ಸುಂದರ ಬದುಕನ್ನು ಸೃಷ್ಟಿಸಿ ಕೊಡಬಹುದು. ಆದರೆ ಯಾವುದೇ ಯೋಜನೆಯ ಅನುಷ್ಠಾನದ ಸಂದರ್ಭ ಫಲಾನು ಭವಿಗಳಿಗೆ ಲಭಿಸುತ್ತಿಲ್ಲ. ಕಡು ಬಡವರು ಹಾಗೂ ಕಾರ್ಮಿಕರು ಇಂದಿಗೂ ಆಶ್ರಯ ಮನೆಗಳು ಸಿಗದೆ ಪರಿತಪಿಸುತ್ತಿದ್ದಾರೆ. ಅರ್ಜಿಗಳನ್ನು ಸಲ್ಲಿಸಿ ವರ್ಷವೇ ಕಳೆದಿದ್ದರೂ ಹಣಕ್ಕಾಗಿ ಕುಂಟು ನೆಪಗಳನ್ನು ಹೇಳಿ ಅರ್ಜಿ ವಿಲೇವಾರಿ ಮಾಡದೆ ಸತಾಯಿ ಸಲಾಗುತ್ತಿದೆ. ವಾರ್ಡ್ ನಂ.1 ರಲ್ಲಿ ಸೆಲ್ವಮುತ್ತು (ಬಜಿಲು ಮಣಿ) ಹಾಗೂ ಮೇರಿ ಸೆಲ್ವ ದಂಪತಿಗಳಿದ್ದು, ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪೈಸಾರಿ ಜಾಗದಲ್ಲಿ ಮುರುಕಲು ಮನೆಯಿದ್ದು, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಸೆಲ್ವಮುತ್ತು ಸಿದ್ದಾಪುರ ಮತ್ತು ನೆಲ್ಯಹುದಿಕೇರಿಯ ಭಾಗದ ಹೊಟೇಲ್‍ಗಳಿಗೆ ಅಡ್ಡೆಕಟ್ಟಿಕೊಂಡು ನೀರು ತುಂಬಿಸುವ ಕೆಲಸ ಮಾಡುತ್ತಾರೆ. ಪತ್ನಿ ಮೇರಿ ಸೆಲ್ವ ತೋಟದ ಕಾರ್ಮಿಕಳಾಗಿ ದುಡಿಯುತ್ತಿದ್ದು, ಇವರಿಬ್ಬರು ದುಡಿಯದಿದ್ದರೆ ಮನೆ ಮಂದಿ ಉಪವಾಸ ಬೀಳುವಷ್ಟು ಕಡು ಬಡತನ ಇವರನ್ನು ಕಾಡುತ್ತಿದೆ. ಈ ಪರಿಸ್ಥಿತಿಯ ನಡುವೆ ಇತ್ತೀಚೆಗೆ ನಡೆದ ಬೈಕ್ ಅಪಘಾತದಲ್ಲಿ ಸೆಲ್ವಮುತ್ತು ಅವರು ತೀವ್ರವಾಗಿ ಗಾಯಗೊಂಡು ಕೆಲಸ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಸ್ವಂತ ಮನೆ ಹೊಂದಬೇಕೆನ್ನುವ ಹಲವು ವರ್ಷಗಳ ಇವರ ಕನಸು ನನಸಾಗದೆ ಉಳಿದಿದ್ದು, ಆಶ್ರಯ ಮನೆಗಾಗಿ ಸಲ್ಲಿಸಿದ ಅರ್ಜಿ ಇಲ್ಲಿಯವರೆಗೆ ವಿಲೇವಾರಿಯಾಗಿಲ್ಲ ಎಂದು ಅವರು ಪ್ರಶ್ನಿಸುತ್ತಿದ್ದಾರೆ.
ಹಣ ನೀಡಿದವರ ಅರ್ಜಿಗಳು ಮಾತ್ರ ವಿಲೇವಾರಿಯಾಗುತ್ತಿದೆ, ಮುಂಗಡವಾಗಿ ಹತ್ತು ಸಾವಿರ ರೂಪಾಯಿಗಳನ್ನು ನೀಡಿದರೆ ಮಾತ್ರ ಆಶ್ರಯ ಮನೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಒಟ್ಟು 30 ಸಾವಿರ ರೂ.ಗಳಲ್ಲಿ ಜಿ.ಪಂ ಡಿಎಸ್ ಮತ್ತು ಸೋಮವಾರಪೇಟೆ ತಾ.ಪಂ ಇಒ ಹಣ ನೀಡಬೇಕಾಗಿದೆ. ಹಣ ನೀಡಿದವರಿಗೆ ಮಾತ್ರ ಮನೆ ಮಂಜೂರಾಗುತ್ತದೆ ಎಂದು ಸಮಜಾಯಿಷಿಕೆ ನೀಡುತ್ತಿದ್ದಾರೆ. ತುತ್ತು ಅನ್ನಕ್ಕೂ ಕಷ್ಟ ಪಡುತ್ತಿರುವ ಈ ದಿನಗಳಲ್ಲಿ ಅಧಿಕಾರಿಗಳಿಗೆ ಹಣ ನೀಡುವುದಾದರು ಹೇಗೆ ಎಂದು ಬಡ ಕುಟುಂಬ ಪ್ರಶ್ನಿಸುತ್ತಿದೆ. ಕಳೆದ ಮಳೆಗಾಲ ಹೇಗೋ ಜೀವನ ಸಾಗಿತು, ಆದರೆ ಈ ಮಳೆಗಾಲದಲ್ಲಿ ನಮ್ಮ ಮನೆ ನೆಲಕಚ್ಚುವುದು ಖಚಿತವೆಂದು ಸೆಲ್ವಮುತ್ತು ಆತಂಕ ವ್ಯಕ್ತಪಡಿಸುತ್ತಾರೆ.
ಇದೇ ರೀತಿಯಾಗಿ ಮಂಜುಳ ಅಣ್ಣಿ ಎಂಬುವವರ ಪರಿಸ್ಥಿತಿಯೂ ಆಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಉಮಿತಾ ಕಿಟ್ಟು ಅವರು ರೂ.10 ಸಾವಿರ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ರತಿಕುಜ್ಞ ಅವರು 20 ರೂ.ಗಳನ್ನು ನೀಡಿದ್ದಾರೆ. ಅವರುಗಳ ಅರ್ಜಿಗಳು ಕೂಡ ವಿಲೇವಾರಿ ಯಾಗದೆ ಕಳೆದ ಒಂದು ವರ್ಷದಿಂದ ಬಾಕಿಯಾಗಿದೆ. ಸರಕಾರದಿಂದ ಹಣ ಬಂದಿಲ್ಲವೆಂದು ಅಧಿಕಾರಿಗಳು ಕಾರಣ ನೀಡುತ್ತಾ ದಿನ ದೂಡುತ್ತಿ ದ್ದಾರೆ. ಆದರೆ ಮೂಲವೊಂದರ ಪ್ರಕಾರ ಹಣ ಪೂರ್ತಿ ನೀಡದ ಕಾರಣಕ್ಕಾಗಿ ಫಲಾನುಭವಿಗಳ ಹೆಸರನ್ನೇ ಮಂಜೂರಾತಿಗಾಗಿ ಕಳುಹಿಸಿಕೊಟ್ಟಿಲ್ಲ ಎನ್ನಲಾಗಿದೆ. ಆಶ್ರಯ ಮನೆ ಯೋಜನೆಯ ಗೋಲ್‍ಮಾಲ್ ವಿರುದ್ಧ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಬೇಕೆನ್ನುವ ಒತ್ತಾಯ ಗ್ರಾಮಸ್ಥರಿಂದಲು ಕೇಳಿ ಬಂದಿದೆ.
- ಅಂಚೆಮನೆ ಸುಧಿ