ಕುಶಾಲನಗರ, ಮಾ 17: 2019-20ನೇ ಸಾಲಿನ ಆಯವ್ಯಯದಲ್ಲಿ ಹಾರಂಗಿ ಜಲಾನಯನ ಪ್ರದೇಶ ಮತ್ತು ಕಾವೇರಿ ನದಿ ಪಾತ್ರದ ಪುನಶ್ಚೇತನ ಕಾಮಗಾರಿಗಳಿಗೆ ಒಟ್ಟು 130 ಕೋಟಿ ಪ್ರಸ್ತಾವನೆಯ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು ಪ್ರಸಕ್ತ ಸಾಲಿನ ಕಾರ್ಯಕ್ರಮ ಪಟ್ಟಿಯಂತೆ 44 ಕೋಟಿ ರುಗಳ ಅನುದಾನ ಒದಗಿಸಲಾಗಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ತಿಳಿಸಿದ್ದಾರೆ.
ಅವರು ವಿಧಾನಸಭೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಶ್ನೆಗೆ ಉತ್ತರ ನೀಡಿದ್ದು 2018 ರಲ್ಲಿ ಜಲಪ್ರಳಯದಿಂದ ನದಿಯ ನೀರು ಸರಾಗವಾಗಿ ಹರಿಯದೆ ನದಿಯ ಹರಿವಿನ ಪಥ ಬದಲಾವಣೆಯಾಗಿದೆ.
2019 ರಲ್ಲಿ ಬಿದ್ದ ಮಳೆಯಿಂದಾಗಿ ಕುಶಾಲನಗರ ವ್ಯಾಪ್ತಿಯ ಸಾಯಿ ಲೇಔಟ್, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ಬೈಚನಹಳ್ಳಿ, ಕೊಪ್ಪ, ಹುದುಗೂರು, ಭಾಗಶಃ ಮುಳ್ಳುಸೋಗೆ, ಕೂಡಿಗೆ, ಕೂಡ್ಲೂರು, ಕೂಡುಮಂಗಳೂರು, ಕಣಿವೆ, ಗಂಧದಕೋಟಿ ವ್ಯಾಪ್ತಿಯ ಪ್ರದೇಶಗಳು ಮುಳುಗಡೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ತಂತ್ರಜ್ಞರೊಂದಿಗೆ ಚರ್ಚಿಸಿ ಹಾನಿಗೊಳಗಾದ ಪ್ರದೇಶದ ಪರಿಶೀಲನೆ ನಡೆಸಲಾಗಿದೆ. 130 ಕೋಟಿ ರೂ.ಗಳ ಅಂದಾಜುಪಟ್ಟಿಯನ್ನು ಕಾವೇರಿ ನೀರಾವರಿ ನಿಗಮದಿಂದ ತಯಾರಿಸಲಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗಮದ ಕಾರ್ಯಕ್ರಮದ ಕಾರ್ಯಭಾರ ಅಧಿಕವಾಗಿರುವುದರಿಂದ ಕಾಮಗಾರಿಗಳನ್ನು 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆದ್ಯತೆ ಮೇಲೆ ಅಗತ್ಯ ಅನುದಾನದೊಂದಿಗೆ ಕ್ರಮಕೈಗೊಳ್ಳಲು ಕ್ರಮವಹಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.