ಬೆಂಗಳೂರು, ಮಾ.18: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ “ಟಾಸ್ಕ್ ಫೋರ್ಸ್” ರಚಿಸಲಾಗಿದೆ. ಇದಕ್ಕಾಗಿ ರೂ. 200 ಕೋಟಿ ಹಣವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಈ ಹಿಂದೆ ಘೋಷಿಸಿದ್ದ ನಿರ್ಬಂಧಗಳು ಮಾರ್ಚ್ 31 ರವರೆಗೆ ಮತ್ತೆ ಮುಂದುವರಿಯುತ್ತದೆ. ಜೊತೆಗೆ, ಕರ್ನಾಟಕದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬರುವಂತಹ ಎಲ್ಲ ಪ್ರಯಾಣಿಕರನ್ನು 15 ದಿನಗಳ ಕಾಲ ಪ್ರತ್ಯೇಕಗೊಳಿಸಿ ಕಡ್ಡಾಯವಾಗಿ ಕೊರೊನಾ ವೈರಾಣು ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಸುಧಾಕರ್ ವಿಧಾನಸಭೆಯಲ್ಲಿ ಪ್ರಕಟಿಸಿದರು. ಇನ್ನು ಸೋಂಕಿತರನ್ನು ಗುರುತಿಸಲು ಮತ್ತು ಅವರ ಮೇಲೆ ನಿಗಾ ಇರಿಸಲು ಮಹಾರಾಷ್ಟ್ರ ಮಾದರಿಯಲ್ಲಿ ಸೋಂಕಿತರ ಕೈಗೆ ಸ್ಯ್ಟಾಂಪ್ ಹಾಕಲು ಸರ್ಕಾರ ನಿರ್ಧರಿಸಿದೆ. ಇದರಿಂದ ಇತರರು ಜಾಗರೂಕರಾಗಲು ಸಾಧ್ಯವಾಗುತ್ತದೆ ಎಂದು ಸಚಿವರು ನುಡಿದರು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟದ ಸಭೆ ಬಳಿಕ ಸಚಿವರು ಸದನದಲ್ಲಿ ಸಂಪುಟವು ಕೈಗೊಂಡ ತೀರ್ಮಾನಗಳನ್ನು ಪ್ರಕಟಿಸಿದರು. ಆರೋಗ್ಯ ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ “ಟಾಸ್ಕ್ ಫೋರ್ಸ್”ನಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಸುಧಾಕರ್ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿರುತ್ತಾರೆ. ಈ ‘ಟಾಸ್ಕ್ ಫೋರ್ಸ್’ ತಂಡದ ಸದಸ್ಯರು ನಿತ್ಯ ಕೊರೊನಾ ಬಗ್ಗೆ ಮಾಹಿತಿ ತಿಳಿಸಲಿದ್ದಾರೆ. ಈ ಕೊರೊನಾ ಬಗ್ಗೆ ‘ಅಪ್ಡೇಟ್ ಬುಲೆಟಿನ್’ ಗಳ ಪ್ರಕಟಣೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಮಟ್ಟಗಳಲ್ಲಿ ಟಾಸ್ಕ್ ಫೋರ್ಸ್ನ ನೇತೃತ್ವವನ್ನು ಆಯಾ ಜಿಲ್ಲಾಧಿಕಾರಿಗಳು ವಹಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸಚಿವ ಸುಧಾಕರ್ ವಿವರಿಸಿದರು. ರಾಜ್ಯದಲ್ಲಿ ಹಕ್ಕಿಜ್ವರ ಮತ್ತು ಮಂಗನ ಕಾಯಿಲೆಗಳ ತಡೆಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಈ ಹಿಂದಿನಂತೆಯೇ ಮಾಲ್ಗಳು, ಸಿನಿಮಾ ಥಿಯೇಟರ್, ಪಬ್, ಈಜುಕೊಳ, ಸಭೆ, ಸಮಾರಂಭ, ಜಾತ್ರೆಗಳಿಗೆ ನಿರ್ಬಂಧ ಹೇರಲಾಗಿದೆ. ವಿವಾಹ ಅಥವಾ ಖಾಸಗಿ ಸಮಾರಂಭಗಳಲ್ಲಿ 100-150 ಮಂದಿಗಿಂತ ಅಧಿಕ ಜನ ಸೇರಬಾರದು.
(ಮೊದಲ ಪುಟದಿಂದ) ಕ್ರೀಡಾಕೂಟಗಳನ್ನು ನಡೆಸುವಂತಿಲ್ಲ. ರೆಸಾರ್ಟ್ಗಳಲ್ಲಿಯೂ ಪಬ್ ಸ್ಥಗಿತಗೊಳಿಸಬೇಕು. ಆದರೆ ರೆಸ್ಟೋರೆಂಟ್ಸ್, ಹೊಟೇಲ್ಗಳಿಗೆ ನಿರ್ಬಂಧ ಇಲ್ಲ. ದೊಡ್ಡ ಮಟ್ಟದ ಸಭೆ ಸಮಾರಂಭ ಮಾಡಲು ಅವಕಾಶ ನಿರಾಕರಿಸಲಾಗಿದೆ. ನೈಟ್ ಕ್ಲಬ್, ಮೇಳ, ಸೆಮಿನಾರ್ ಜಾತ್ರೆಗಳನ್ನು ಬಂದ್ ಮಾಡಲಾಗುತ್ತಿದೆ. ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಲಾಗುತ್ತದೆ. ನಿಗದಿತ ಪರೀಕ್ಷೆಗಳು, ಸರ್ಕಾರಿ ಕಚೇರಿಗಳು ನಡೆಯಲಿವೆ.
ಇನ್ನು ವಿಧಾನಸಭೆ, ವಿಕಾಸಸೌಧ ಕಡೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ, ವಿಧಾನಸಭಾ ಕಲಾಪವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯÀ್ಯ ನಿರ್ಧಾರ ಕೈಗೊಳ್ಳಲು ನಡೆಸಲಾಗುವದು ಎಂದು ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ಮಾರ್ಚ್ 31 ರ ವರೆಗೆ ರಾಜ್ಯದಲ್ಲಿ ನಿರ್ಬಂಧ ಮುಂದುವರಿಯಲಿದ್ದು ಈ ಹಿಂದೆ ಪಾಲಿಸಲಾಗಿದ್ದ ಕಾರ್ಯಸೂಚಿಗಳನ್ನು ಮುಂದುವರಿಸುವಂತೆ ಸೂಚಿಸಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ಚುನಾವಣಾ ಆಯೋಗವನ್ನು ಕೋರಲಾಗಿದೆ ಎಂದರು.
ರಾಜ್ಯದಲ್ಲಿ ಇದುವರೆಗೂ 14 ಕೊರೊನಾ ಖಾತರಿ (ಪಾಸಿಟಿವ್) ಪ್ರಕರಣಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡಿದ್ದು ಇದುವರೆಗೂ 1,17,316 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದರು.