ಗೋಣಿಕೊಪ್ಪಲು, ಮಾ. 17: ವಾರ್ಷಿಕವಾಗಿ ಬರುವ ಕಾಫಿ ಬೆಳೆಯ ಕೆಲಸ ಮುಗಿಸಿ ಇದೀಗ ಕರಿಮೆಣಸು ಬೆಳೆಯನ್ನು ಕುಯ್ಯುತ್ತಿರುವ ರೈತರು ಇವುಗಳನ್ನು ತಮ್ಮ ಕಾರ್ಮಿಕರ ಸಹಕಾರದಿಂದ ಮನೆಯ ಮುಂಭಾಗದ ಅಂಗಳದಲ್ಲಿ, ಭತ್ತ ಒಣಗಿಸುವ ಕಣದಲ್ಲಿ ಸುರಿದು ಶುಚಿಗೊಳಿಸುವುದು ದಿನ ನಿತ್ಯದ ಕಾಯಕ. ಇಂತಹ ಸ್ಥಳಕ್ಕೆ ಏಕಾಎಕಿ ಒಂಟಿ ಸಲಗ ದಾಳಿ ಮಾಡಿದರೆ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಪರಿಸ್ಥಿತಿ ಹೇಗಿರಬೇಡ ಒಮ್ಮೆ ಊಹಿಸಿ...ಅರಣ್ಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕ್ಷಣ ಮಾತ್ರದ ಕರ್ತವ್ಯ ಲೋಪದಿಂದ ಅಮಾಯಕರ ಪ್ರಾಣ ಹೋಗುವುದು ಕೂದಲೆಳೆಯ ಅಂತರದಿಂದ ತಪ್ಪಿದೆ. ಕಾರ್ಮಿಕರು ಸಮೀಪವಿರುವ ಮನೆಯನ್ನು ಕ್ಷಣಾರ್ಧ ದಲ್ಲಿ ಸೇರಿಕೊಳ್ಳದೇ ಇದ್ದಿದ್ದರೆ ಹಲವು ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗುತಿತ್ತು. ಇಂತಹ ಅಪಾಯದಿಂದ ಪಾರಾದ ಕಾರ್ಮಿಕರು ಭಯದಲ್ಲೇ ಹೊರ ಬಾರದೆ ಕೆಲಸ ಮೊಟಕುಗೊಳಿಸಿದ ಘಟನೆ ತಿತಿಮತಿ ಪಂಚಾಯಿತಿ ವ್ಯಾಪ್ತಿಯ ನೊಕ್ಯ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸೋಮವಾರ ಮಧ್ಯಾಹ್ನದ ವೇಳೆ ಚೆಪ್ಪುಡೀರ ರಂಜನ್ (ಮೊದಲ ಪುಟದಿಂದ) ಬೋಪಣ್ಣ ಮನೆ ಸಮೀಪದ ಅಂಗಳದಲ್ಲಿ ಹಲವು ಕಾರ್ಮಿಕರು ಮೆಣಸು ಒಣಗಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಶಾಲೆಗಳಿಗೆ ರಜೆ ಇದ್ದ ಕಾರಣ ಮಕ್ಕಳನ್ನು ಕೂಡ ತಮ್ಮೊಂದಿಗೆ ಕರೆದುಕೊಂಡು ಬಂದಿದ್ದರು. ಒಂದು ಬದಿಯಲ್ಲಿ ಕಾರ್ಮಿಕರು ಮೆಣಸಿನ ಕೆಲಸ ಮಾಡುತಿದ್ದರೆ ಮತ್ತೊಂದೆಡೆ ಇವರ ಮಕ್ಕಳು ನೆರಳಿನಲ್ಲಿ ಆಟವಾಡುತಿದ್ದರು.ಇದೇ ವೇಳೆಯಲ್ಲಿ ನೊಕ್ಯ ಗ್ರಾಮದ ಕುಂಞÂರಾಮ ಕಟ್ಟೆಯಲ್ಲಿ ರೈಲ್ವೆ ಕಂಬಿ ಅಳವಡಿಸಿದ ಹಿನ್ನೆಲೆಯಲ್ಲಿ ಒಂಟಿ ಸಲಗವೊಂದು ಸಮೀಪದ ಅರಣ್ಯಕ್ಕೆ ಪ್ರವೇಶ ಮಾಡಲು ಸಾಧ್ಯವಾಗದೆ ಅಡ್ಡಾಡುತ್ತಾ ತಿತಿಮತಿ – ಕೋಣನಕಟ್ಟೆ ಮುಖ್ಯ ರಸ್ತೆ ದಾಟಿ ರಸ್ತೆ ಬದಿಯಲ್ಲಿದ್ದ ಬೆಳೆಗಾರರೊಬ್ಬರ ಕಾರ್ಮಿಕರ ಶೆಡ್ಡ್‍ಗಳ ಮೇಲೆ ದಾಳಿ ನಡೆಸಿ ಮನೆಯ ಶೀಟ್‍ಗಳನ್ನು ದ್ವಂಸಗೊಳಿಸಿ ಸಮೀಪದ ಚೆಪ್ಪುಡೀರ ಸ್ಕಾಲರ್‍ಶಿಪ್ ಟ್ರಸ್ಸ್ಟ್ ಫಂಡ್‍ನಲ್ಲಿರುವ ಪಾಳು ಬಿದ್ದ ಕಾಡಿನಲ್ಲಿ ಸೇರಿ ಕೊಂಡಿತು. ಈ ಸಂದರ್ಭ ಆ ಭಾಗದ ಕಾಫಿ ಬೆಳೆಗಾರರೊಬ್ಬರು ಒಂಟಿ ಸಲಗ ಅಡಗಿರುವ ಬಗ್ಗೆ ಮತ್ತಿಗೋಡು ವನ್ಯ ಜೀವಿ ಅರಣ್ಯ ಅಧಿಕಾರಿಗಳಾದ ಶಿವನಂದ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಪಂದಿಸಿದ ಅಧಿಕಾರಿಗಳು ನೊಕ್ಯ ಗ್ರಾಮದಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗವನ್ನು ಓಡಿಸಲು ನೊಕ್ಯ ಗ್ರಾಮದಲ್ಲೆ ಕ್ಯಾಂಪ್ ಹಾಕಿರುವ ಅರಣ್ಯ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಹಿರಿಯ ಅಧಿಕಾರಿಗಳ ಸೂಚನೆ ಯಂತೆ ಅರಣ್ಯ ಸಿಬ್ಬಂದಿ ಏಕಾಏಕಿ ಅಡಗಿದ್ದ ಒಂಟಿ ಸಲಗವನ್ನು ಗುರುತಿಸಿ ಅಲ್ಲಿಂದ ಓಡಿಸುವ ಕಾರ್ಯ ಮಾಡಿದ್ದಾರೆ. ಇದರಿಂದ ಮೊದಲೇ ಆಕ್ರೋಶಗೊಂಡು ಅರಣ್ಯದಿಂದ ಹೊರ ಬಂದಿದ್ದ ಒಂಟಿ ಸಲಗ ದಿಕ್ಕು ತೋಚದೆ ಒಂದೇ ಸಮನೆ ಆರ್ಭಟಿಸುತ್ತ ಓಡಲಾರಂಭಿಸಿದೆ.
ಈ ವೇಳೆ ಒಂಟಿ ಸಲಗವು ದಿಕ್ಕು ತಪ್ಪಿ ಸಮೀಪದ ಚೆಪ್ಪುಡೀರ ರಂಜನ್ ಬೋಪಣ್ಣ ಅವರ ಅಂಗಳದಲ್ಲಿ ಕರಿಮೆಣಸು ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಬಳಿಗೆ ಓಡಿ ಬಂದಿದೆ. ಇದರಿಂದ ಗಾಬರಿಗೊಂಡ ಕಾರ್ಮಿಕರು ಕ್ಷಣಾರ್ಧದಲ್ಲಿ ತಮ್ಮ ಮಕ್ಕಳನ್ನು ಎತ್ತಿಕೊಂಡು ಸಮೀಪದ ಶೆಡ್‍ನಲ್ಲಿ ಅಡಗಿಕೊಂಡಿದ್ದಾರೆ. ಸಲಗವು ಘೀಳಿಡುತ್ತ ಮತ್ತೆ ಓಡಲಾರಂಭಿಸಿದೆ. ಕೂದಳೆಯ ಅಂತರದಿಂದ 5 ಮಂದಿ ಕಾರ್ಮಿಕರು ಹಾಗೂ ಎಳೆಯ ಮಕ್ಕಳು ಒಂಟಿ ಸಲಗ ದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ಆಘಾತದಿಂದ ಕಾರ್ಮಿಕರು ಇನ್ನು ಕೂಡ ಹೊರ ಬಂದಿಲ್ಲ.
ಮುಂಜಾಗ್ರತಾ ಕ್ರಮಕೈಗೊಳ್ಳದೆ, ಕಾಫಿ ತೋಟಗಳಲ್ಲಿ ಕಾರ್ಮಿಕರು ಕೆಲಸದಲ್ಲಿ ಇರುವುದನ್ನು ತಿಳಿದುಕೊಳ್ಳದೆ ಏಕಾಏಕಿ ಒಂಟಿ ಸಲಗವನ್ನು ಅರಣ್ಯ ಸಿಬ್ಬಂದಿ ಓಡಿಸಿದ ಹಿನ್ನೆಲೆಯಲ್ಲಿ ಅಸಮಧಾನಗೊಂಡ ಗ್ರಾಮಸ್ಥರು ರೈತ ಸಂಘದ ತಿತಿಮತಿ ಭಾಗದ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಅವರ ಮುಂದಾಳತ್ವದಲ್ಲಿ ಮತ್ತಿಗೋಡು ವನ್ಯ ಜೀವಿ ವಿಭಾಗಕ್ಕೆ ತೆರಳಿ ಅಲ್ಲಿದ್ದ ಆರ್‍ಎಫ್‍ಓ ಶಿವಾನಂದ್ ಅವರನ್ನು ಪ್ರಶ್ನಿಸಿದ್ದಾರೆ. ಆನೆ ಓಡಿಸುವಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ. ಒಂದು ವೇಳೆ ಅನಾಹುತವಾಗಿದಲ್ಲಿ ಇದಕ್ಕೆ ಹೊಣೆ ಯಾರು.? ಎಂದು ಪ್ರಶ್ನಿಸಿದ್ದಾರೆ.
ರೈತರ ಸಮಸ್ಯೆಗಳನ್ನು ಸಮಾಧಾನದಲ್ಲಿಯೇ ಆಲಿಸಬೇಕಾದ ಅಧಿಕಾರಿ ರೈತರ ಮೇಲೆಯೆ ಆಕ್ರೋಶಗೊಂಡು ನೀವು ಕಚೇರಿಯಲ್ಲಿಯೇ ಇದ್ದರೆ ನಿಮ್ಮ ಮೇಲೆ ಪೊಲೀಸ್ ಪುಕಾರು ನೀಡುವುದಾಗಿ ಬೆದರಿಸಿ, ನಿಂದಿಸಿ ವಾಪಸ್ಸು ಕಳುಹಿಸಿದ್ದಾರೆ.
ಅಧಿಕಾರಿ ನಿರ್ಲಕ್ಷ್ಯವನ್ನು ಖಂಡಿಸಿ ರೈತ ಮುಖಂಡರು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಮೂಲಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರೈತರ ಸಮಸ್ಯೆಯನ್ನು ಹೇಳಿಕೊಳ್ಳಲು ಕಚೇರಿಗೆ ತೆರಳಿದರೆ ರೈತರ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರಿಯನ್ನು ಕೂಡಲೇ ವರ್ಗಾಯಿಸುವಂತೆ ಹಿರಿಯ ಅಧಿಕಾರಿಗಳನ್ನು ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.