ವೀರಾಜಪೇಟೆ, ಮಾ. 18 : ಸಂಬಂಧಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸೋಮವಾರ ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೀರಾಜಪೇಟೆಗೆ ಬಂದ ಇಬ್ಬರು ಯುವಕರನ್ನು ಮನೆಯಿಂದ ಹೊರ ಹೋಗದಂತೆ ಆರೋಗ್ಯ ತಂಡ ನಿರ್ಬಂಧ ವಿಧಿಸಿ ಆರೋಗ್ಯದ ಕುರಿತು ಸ್ವಯಂ ಘೋಷಣೆ ಪತ್ರಕ್ಕೆ ಸಹಿ ಹಾಕಿಕೊಂಡು ಪತ್ರವನ್ನು ಪಡೆದಿದೆ.

ವೀರಾಜಪೇಟೆಯ ಮೊಗರ ಗಲ್ಲಿಯಲ್ಲಿರುವ ಎಸ್.ಎಚ್.ಆಲಿ (55) ಅವರು ಅನಾರೋಗ್ಯದ ನಿಮಿತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ತಾ. 15ರಂದು ನಿಧನ ಹೊಂದಿದ್ದರು. ಮೃತ ಆಲಿಯ ಸಂಬಂಧಿ ಯುವಕರಿಬ್ಬರು ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದು, ಆಲಿಯ ಅಂತ್ಯ ಸಂಸ್ಕಾರಕ್ಕೆ ಸೋಮವಾರ ಬಂದಿದ್ದರು. ಆದರೆ ಈ ಇಬ್ಬರು ವಿದೇಶದಿಂದ ಬಂದ ಕುರಿತು ಪೊಲೀಸರಿಗಾಗಲಿ, ಆರೋಗ್ಯ ಇಲಾಖೆಗಾಗಲಿ ಮಾಹಿತಿ ದೊರೆಯ ಲಿಲ್ಲ. ಬೀದಿಯ ನಿವಾಸಿ ಯೊಬ್ಬರು ತಾಲೂಕು ಆರೋಗ್ಯ ತಂಡಕ್ಕೆ ಗುಪ್ತವಾಗಿ ದೂರು ನೀಡಿದ ನಂತರ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಶಿಂಪಿ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ತಂಡ ನಿನ್ನೆ ದಿನ ಸಂಜೆ ಎಸ್.ಎಚ್. ಆಲಿ ಅವರ ಮನೆಗೆ ತೆರಳಿ ತಪಾಸಣೆ ನಡೆಸಿದಾಗ ಯಾರೂ ವಿದೇಶದಿಂದ ಮನೆಗೆ ಬಂದಿಲ್ಲ ಎಂದು ಕುಟುಂಬದವರಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತಂಡ ಸಾರ್ವಜನಿಕ ಆಸ್ಪತ್ರೆಗೆ ಮರಳಿತು.

ಸಂಶಯದಲ್ಲಿಯೇ ಇದ್ದ ಡಾ. ವಿಶ್ವನಾಥ್ ಶಿಂಪಿ ಅವರ ತಂಡ ಇಂದು ಮೃತ ಆಲಿ ಅವರ ಮನೆಗೆ ತೆರಳಿ ಮತ್ತೆ ವಿಚಾರಿಸಿದಾಗ ಇಬ್ಬರು ಯುವಕರು ಶಾರ್ಜಾದಿಂದ ಬಂದಿರುವುದಾಗಿ ಮಾಹಿತಿ ದೊರೆತ ನಂತರ ಆರೋಗ್ಯ ತಂಡ ಇಬ್ಬರು ಯುವಕರ ಆರೋಗ್ಯವನ್ನು ಮನೆಯಲ್ಲಿಯೇ ತಪಾಸಣೆ ನಡೆಸಿದ್ದು, ಮೇಲ್ನೋಟಕ್ಕೆ ಈ ಇಬ್ಬರಿಗೂ ಕೊರೊನಾ ವೈರಸ್ ಸೋಂಕು ತಗಲಿರುವುದು ಕಂಡು ಬಂದಿಲ್ಲ ವಾದರೂ, ಮುಂಜಾಗ್ರತೆಯಾಗಿ ಈ ಇಬ್ಬರು ಯುವಕರು ಹೊರಗಡೆ ಹೋಗದಂತೆಯೂ ಯಾರನ್ನು ಸಂಪರ್ಕಿಸದಂತೆ ಹಾಗೂ ಮನೆಯ ಪ್ರತ್ಯೇಕ ಕೊಠಡಿಯ ನಿಗಾದಲ್ಲಿರುವಂತೆ ನಿರ್ಬಂಧ ಹೇರಲಾಗಿದೆ. ಅವಶ್ಯಕತೆವಿದ್ದಾಗ ಯಾವಾಗ ಬೇಕಾದರೂ ಆರೋಗ್ಯ ತಂಡವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಇಬ್ಬರು ಯುವಕರ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯ 108ರ ವಾಹನ ವನ್ನು ಮನೆಯ ಬಳಿಯಲ್ಲಿಯೇ ನಿಲ್ಲಿಸಿದ್ದು, ಕೊರೊನಾ ವೈರಸ್ ರೋಗದ ಸೋಂಕಿಲ್ಲ ಎಂದು ಗೊತ್ತಾದ ಮೇಲೆ ಆರೋಗ್ಯ ತಂಡ ವಾಹನವನ್ನು ಹಿಂದಕ್ಕೆ ಕಳುಹಿಸಲಾಗಿದೆ.

ವಿದೇಶದಿಂದ ಬಂದ ಈ ಇಬ್ಬರನ್ನು ಆರೋಗ್ಯ ತಂಡ ವಿಚಾರಿಸಿದಾಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಬ್ಬರು ಹೊರ ಬರುವ ಮೊದಲು ಆರೋಗ್ಯ ತಪಾಸಣೆಗೊಳಪಡಿಸಿರುವುದಾಗಿ ಆರೋಗ್ಯ ತಂಡಕ್ಕೆ ತಿಳಿಸಿದ್ದು ಕೊರೊನಾ ವೈರಸ್ ರೋಗದಿಂದ ಮುಕ್ತವಾಗಿರುವುದಾಗಿಯೂ ತಿಳಿಸಿದ್ದಾರೆ.ಇಬ್ಬರು ಯುವಕರು ವಿದೇಶದಿಂದ ಬಂದಿರುವ ಕುರಿತು ಇಲ್ಲಿನ ನಗರ ಪೊಲೀಸರಿಗೂ ಆರೋಗ್ಯ ತಂಡ ಮಾಹಿತಿ ನೀಡಿದೆ.