ಮಡಿಕೇರಿ, ಮಾ. 17: ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ವಿಶಿಷ್ಟ ಹಿನ್ನೆಲೆಯನ್ನು ಹೊಂದಿರುವ ನಾಡಿನ ಏಕೈಕ ಮೃತ್ಯುಂಜಯ ದೇವಸ್ಥಾನದ ಪ್ರಸಕ್ತ ವರ್ಷದ ವಾರ್ಷಿಕ ಉತ್ಸವ ಇತ್ತೀಚೆಗೆ ಸಂಪನ್ನಗೊಂಡಿತು.
ನಿರ್ದಿಷ್ಟ ಸಂಪ್ರದಾಯ, ಕಟ್ಟುಪಾಡಿನಂತೆ ನಿಗದಿತ ಶುಭ ಸಂದರ್ಭದಲ್ಲಿ ಜರುಗುವ ವಾರ್ಷಿಕೋತ್ಸವ ಹಲವು ದಿನಗಳ ಕಾಲ ಜರುಗಿದ್ದು ಈ ಬಾರಿ ಭಕ್ತಾದಿಗಳ ಸಂಖ್ಯೆಯಲ್ಲಿ ತುಸು ಇಳಿಮುಕವಾಗಿ ಕಂಡಿತಾದರೂ ಪದ್ಧತಿಯಂತೆ ಆಚರಿಸಲ್ಪಟ್ಟಿತು. ಸ್ಥಳೀಯ ವ್ಯಾಪ್ತಿಯ ಜನತೆ ಮಾತ್ರವಲ್ಲದೆ, ಜಿಲ್ಲೆ ಹಾಗೂ ಹೊರಜಿಲ್ಲೆಗಳ ಭಕ್ತಾದಿಗಳು ಪಾಲ್ಗೊಂಡು ಶ್ರೀ ಮೃತ್ಯುಂಜಯ ಹೋಮ ಮತ್ತಿತರ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು.
ಉತ್ಸವದ ಅಂತಿಮ ದಿನದಂದು ಮೃತ್ಯಂಜಯ ಹೋಮ, ತುಲಾಭಾರ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ಬೆಳಗ್ಗೆಯಿಂದ ಜರುಗಿತು. ಅಪರಾಹ್ನ ತೆಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ಊರು ಕಟ್ಟನ್ನು ಮುರಿಯಲಾಯಿತು. ಸಂಜೆ ಉತ್ಸವ ಮೂರ್ತಿಯ ದರ್ಶನ, ದೇವರ ಅವಭೃತ ಸ್ನಾನ, ರಾತ್ರಿ ಮತ್ತೆ ಉತ್ಸವ ಮೂರ್ತಿ ದರ್ಶನ, ವಸಂತ ಪೂಜೆಯೊಂದಿಗೆ ಪ್ರಸಕ್ತ ವರ್ಷದ ಉತ್ಸವ ಮುಕ್ತಾಯಗೊಂಡಿತು. ಮರುದಿನ ಕೊಡಿಮರ ಇಳಿಸುವ ಕೈಂಕರ್ಯದೊಂದಿಗೆ ಈ ಬಾರಿಯ ವಾರ್ಷಿಕ ಉತ್ಸವಕ್ಕೆ ತೆರೆಬಿದ್ದಿತು. ದೇವತಕ್ಕರಾದ ಅಣ್ಣೀರ ಕುಟುಂಬಸ್ಥರ, ನಾಡು ತಕ್ಕರಾದ ಕಾಯಪಂಡ ಕುಟುಂಬಸ್ಥರು ಸೇರಿದಂತೆ ನಾಡಿನ ಇತರ ಕುಟುಂಬದವರು, ಭಕ್ತಾದಿಗಳು ಉತ್ಸವದಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮ ದಿನದಂದು ಪೊನ್ನಂಪೇಟೆಯ ನಾಟ್ಯ ಶಾಲಾ ತಂಡದಿಂದ ಧಾರ್ಮಿಕ ಕಾರ್ಯಕ್ರಮ, ನಾಡಿನ ಭಕ್ತಾದಿಗಳಿಂದ ಪ್ರಸಾದ ವಿತರಣೆ, ಸಿಡಿಮದ್ದು ಪ್ರದರ್ಶನ ನಡೆಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಕಾಯಪಂಡ ಎಸ್. ಕಾವೇರಪ್ಪ ಹಾಗೂ ಪದಾಧಿಕಾರಿಗಳು, ಇನ್ನಿತರರು ಉಸ್ತುವಾರಿ ವಹಿಸಿದ್ದರು.