ಮಡಿಕೇರಿ, ಮಾ. 17: ಜಿಲ್ಲೆಯಲ್ಲಿನ ರೈತರು ಸಹಕಾರ ಸಂಘ/ ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018 ಜುಲೈಗೆ ಹೊರ ಬಾಕಿ ಹೊಂದಿರುವ ಗರಿಷ್ಠ ರೂ. 1 ಲಕ್ಷದ ವರೆಗಿನ ಬೆಳೆ ಸಾಲದ ಮೊತ್ತವನ್ನು ಮನ್ನಾ ಮಾಡಲು ನಿರ್ಧರಿಸಿದ್ದು, ರೈತರು ಸಂಬಂಧಪಟ್ಟ ಆಧಾರ್, ಪಡಿತರ ಚೀಟಿ ಮತ್ತು ಭೂಮಿ ದಾಖಲೆಗಳನ್ನು ಹಾಗೂ ಸ್ವಯಂ ದೃಢೀಕರಣ ಪತ್ರವನ್ನು ಇದುವರೆವಿಗೂ ಸಂಬಂಧಪಟ್ಟ ಸಹಕಾರ ಸಂಘ/ ಬ್ಯಾಂಕುಗಳಿಗೆ ತಾ. 25 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ. ಸಲೀಂ ತಿಳಿಸಿದ್ದಾರೆ.

ಈ ಅವಧಿಯಲ್ಲಿ ದಾಖಲೆ ಸಲ್ಲಿಸಲು ವಿಫಲರಾದಲ್ಲಿ ಅಂತಹ ರೈತರು ಸಾಲಮನ್ನಾ ಸೌಲಭ್ಯ ಪಡೆಯಲು ಅನರ್ಹತೆ ಹೊಂದುತ್ತಾರೆ. ಅಲ್ಲದೇ ಪಡಿತರ ಚೀಟಿಯನ್ನು ಹೊಂದಿಲ್ಲದೇ ಇರುವ ರೈತರು ಪಡಿತರ ಚೀಟಿ ಹೊಂದಿದ್ದರೂ, ಚಾಲನೆಯಲ್ಲಿ ಇಲ್ಲದಿದ್ದರೆ ಅಂತಹವರೂ ಹೊಸ ಪಡಿತರ ಚೀಟಿಯನ್ನು ಪಡೆದು ಸಂಬಂಧಪಟ್ಟ ಸಹಕಾರ ಸಂಘಗಳಿಗೆ/ ಬ್ಯಾಂಕುಗಳಿಗೆ ತಾ. 25 ರೊಳಗೆ ಸಲ್ಲಿಸಲು ಅಂತಿಮ ಅವಕಾಶವನ್ನು ನೀಡಲಾಗಿದೆ.

ರೈತರು ಈ ಸದವಕಾಶವನ್ನು ಉಪಯೋಗಿಸಿಕೊಂಡು ನಿಗದಿತ ದಿನಾಂಕದೊಳಗೆ ಸಲ್ಲಿಸಿ ಸಾಲಮನ್ನಾ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.