ಬ್ಯಾಂಕ್ ಖಾತೆಯಿಂದ 1.2 ಲಕ್ಷಕ್ಕೆ ಕನ್ನ

ಮಡಿಕೇರಿ, ಮಾ. 17: ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಳನ್ನು ಅನಾಮಿಕರೊಂದಿಗೆ ಹಂಚಿಕೊಂಡು ಹಣ ಕಳೆದುಕೊಳ್ಳಬೇಡಿ ಎಂದು ಅದೆಷ್ಟು ಜನಜಾಗೃತಿ ಮೂಡಿಸಿದರೂ ನಮ್ಮ ಸಮಾಜದ ಕೆಲವರಿಗೆ ಬುದ್ಧಿ ಬಂದಂತಿಲ್ಲ. ವೀರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದ ಸರಿತಾ ಎಂಬ ಮಹಿಳೆ ಇಂದು ಬರೋಬ್ಬರಿ 1,22,870 ರೂ ಕಳೆದುಕೊಂಡು ಅತಂತ್ರರಾಗಿ ಕುಳಿತಿದ್ದಾರೆ. ಬೆಳಿಗ್ಗೆ ಇವರ ಮೊಬೈಲ್ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ವಿಜಯಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ಸರಿತಾ ಅವರ ಆಧಾರ್, ಪಾನ್ ಕಾರ್ಡ್ ಮಾಹಿತಿಗಳನ್ನು ಕೇಳಿ ಪಡೆದುಕೊಂಡಿದ್ದಾನೆ. ಈ ಮಾಹಿತಿಗಳನ್ನು ಬ್ಯಾಂಕ್‍ಗೆ ಸಲ್ಲಿಸಬೇಕಾಗಿದ್ದು, ತಮ್ಮ ಮೊಬೈಲ್‍ಗೆ ಈಗ ಒಂದು ಮೆಸೇಜ್ ಬರಲಿದ್ದು ಆ ಮೆಸೇಜ್ ಅನ್ನು ಓದಿ ಹೇಳುವಂತೆ ಸೂಚಿಸಿದ್ದಾನೆ. ಅದರಂತೆ ಸರಿತಾ ಅವರು ತಮ್ಮ ಮೊಬೈಲ್ ಬಂದ ಮೆಸೇಜ್ ಅನ್ನು ಅನಾಮಿಕನಿಗೆ ಓದಿ ಹೇಳಿದ್ದಾರೆ. ಇದಾಗಿ ಕೇವಲ ಅರ್ಧ ಗಂಟೆಯಲ್ಲಿ ಇವರ ಮೊಬೈಲ್‍ಗೆ ಮತ್ತೊಂದು ಮೆಸೇಜ್ ಬಂದಿದ್ದು ಅದರಲ್ಲಿ ಇವರ ಖಾತೆಯಿಂದ ರೂ. 1,22,870 ಡ್ರಾ ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳೀಯ ಬ್ಯಾಂಕ್‍ಗೆ ತೆರಳಿ ಪರಿಶೀಲಿಸಿದಾಗ ಇವರ ಖಾತೆಯಿಂದ ಆನ್‍ಲೈನ್ ಮೂಲಕ ಅಷ್ಟೂ ಹಣವನ್ನು ಎಗರಿಸಿರುವುದು ಬೆಳಕಿಗೆ ಬಂದಿದೆ.

ಸರಿತಾ ಅವರು ವೀರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಸೈಬರ್ ಕ್ರೈಂ ಬ್ರಾಂಚ್‍ಗೆ ಪ್ರಕರಣ ವರ್ಗಾವಣೆಯಾಗಿದೆ.