ಮಡಿಕೇರಿ, ಮಾ. 16: ಎಂಟು ವರ್ಷಗಳ ಹಿಂದೆ ಆಕಸ್ಮಿಕವಾಗಿ ಪರಿಚಯವಾಗಿದ್ದ ಯುವತಿಯೊಬ್ಬಳನ್ನು ವಿವಾಹವಾಗಿ, ಇದೀಗ ಮೂರು ವರ್ಷದ ಮಗಳ ಸಹಿತ ಪತಿ ಕಾಣೆಯಾಗಿರುವುದಾಗಿ ನೊಂದಾಕೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೂಲತಃ ಪಿರಿಯಾಪಟ್ಟಣ ತಾಲೂಕಿನ ಕಾಡತಿಮ್ಮನಹಳ್ಳಿ ನಿವಾಸಿ ವಿಜಯಪ್ಪ ಎಂಬವರ ಪುತ್ರ ಸುರೇಶ್ (34) ಪರಾರಿಯಾಗಿರುವ ಪತಿರಾಯ.
ಈತ ಹತ್ತು ವರ್ಷ ಹಿಂದೆ ತನ್ನೂರಿನ ಮನೆ ತೊರೆದಿದ್ದು, ಅನಂತರದಲ್ಲಿ ಧರ್ಮಸ್ಥಳದಲ್ಲಿ ಪರಿಚಯವಾಗಿರುವ ಹೊಳೆನರಸೀಪುರ ಮೂಲದ ಸರಸ್ವತಿ ಎಂಬಾಕೆಯನ್ನು ವಿವಾಹವಾಗಿ ತನ್ನೂರಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕೆಲವು ಸಮಯ ಇದ್ದು, ಬಳಿಕ ಕುಂದಾಪುರದ ತೋಟವೊಂದರಲ್ಲಿ ಕಾರ್ಮಿಕನಾಗಿ ಸೇರಿಕೊಂಡು ಸಂಸಾರ ಹೂಡಿದ್ದಾಗಿ ತಿಳಿದು ಬಂದಿದೆ.
ಕಳೆದ ತಾ. 4 ರಂದು ಕುಂದಾಪುರದಿಂದ ಸಂಸಾರದೊಂದಿಗೆ ಭಾಗಮಂಡಲಕ್ಕೆ ಬಂದಿದ್ದು, ಅಲ್ಲಿ ಪತ್ನಿ ಹಾಗೂ ಮೂರು ವರ್ಷದ ಪುತ್ರಿಯೊಂದಿಗೆ ಒಂದು ದಿನ ಉಳಿದುಕೊಂಡಿದ್ದಾರೆ. ಮರು ದಿನ ಪೂಜೆ ಮುಗಿಸಿಕೊಂಡು ನಗರದತ್ತ ಪ್ರಯಾಣಿಸಿದ್ದಾರೆ. ಇಲ್ಲಿನ ನಿಲ್ದಾಣಕ್ಕೆ ಬಂದಿಳಿದು, ಪತ್ನಿಗೆ ಮಗುವನ್ನು ಕರೆದುಕೊಂಡು ಹೊಳೆನರಸೀಪುರದ ತವರಿಗೆ ತೆರಳಲು ಕಳುಹಿಸಿಕೊಟ್ಟಿದ್ದಾಗಿ ಮಾಹಿತಿ ಲಭಿಸಿದೆ.
ತಾನು ಕಗ್ಗೋಡ್ಲುವಿನಲ್ಲಿರುವ ಸಂಬಂಧಿಯೊಬ್ಬರಿಗೆ ಹುಷಾರಿಲ್ಲದ್ದರಿಂದ ಹೋಗಿ ನೋಡಿಕೊಂಡು ಬರುವುದಾಗಿ ನಂಬಿಸಿದ್ದಾಗಿಯೂ ಸುಳಿವು ದೊರೆತಿದೆ. ಇತ್ತ ಪತ್ನಿ, ಮಗು ತವರಿಗೆ ತೆರಳಿದರೆ, ಈತ ಬಸ್ ನಿಲ್ದಾಣದಿಂದ ಬೇರ್ಪಟ್ಟಿದ್ದಾನೆ. ಮರು ದಿನ ಮೊಬೈಲ್ ಕರೆ ಮಾಡಿ ತಾನು ಕುಂದಾಪುರಕ್ಕೆ ತೆರಳುವುದಾಗಿ ಹೇಳಿಕೊಂಡಿರುವ ಸುರೇಶ್, ಇದುವರೆಗೆ ಮೊಬೈಲ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿರುವುದಾಗಿ ಆತನ ಬಗ್ಗೆ ಪತ್ನಿ ಪೊಲೀಸ್ ಪುಕಾರು ನೀಡಿದ್ದಾರೆ. ಆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.